ಗುಣಮಟ್ಟದ ಬಿತ್ತನೆ ಬೀಜ ವಿತರಣೆಗೆ ಕ್ರಮ

ಹಿರಿಯೂರು ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಎಂ. ಸಿದ್ದೇಶ್ ಅಧ್ಯಕ್ಷತೆಯಲ್ಲಿ ಕೃಷಿ ಇಲಾಖೆ-ರೈತ ಮುಖಂಡರ ಸಭೆ ನಡೆಯಿತು. ಸಹಾಯಕ ಕೃಷಿ ನಿರ್ದೇಶಕ ಜೆ. ಅಶೋಕ್, ಉಪ ಕೃಷಿ ನಿರ್ದೇಶಕ ಉಮೇಶ್, ಕೆ.ಸಿ. ಹೊರಕೇರಪ್ಪ, ಸಿದ್ದರಾಮಣ್ಣ, ಕೆ.ಟಿ. ತಿಪ್ಪೇಸ್ವಾಮಿ ಇದ್ದರು.
ಹಿರಿಯೂರು ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಎಂ. ಸಿದ್ದೇಶ್ ಅಧ್ಯಕ್ಷತೆಯಲ್ಲಿ ಕೃಷಿ ಇಲಾಖೆ-ರೈತ ಮುಖಂಡರ ಸಭೆ ನಡೆಯಿತು. ಸಹಾಯಕ ಕೃಷಿ ನಿರ್ದೇಶಕ ಜೆ. ಅಶೋಕ್, ಉಪ ಕೃಷಿ ನಿರ್ದೇಶಕ ಉಮೇಶ್, ಕೆ.ಸಿ. ಹೊರಕೇರಪ್ಪ, ಸಿದ್ದರಾಮಣ್ಣ, ಕೆ.ಟಿ. ತಿಪ್ಪೇಸ್ವಾಮಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಹಾಯಕ ಕೃಷಿ ನಿರ್ದೇಶಕ ಜೆ.ಅಶೋಕ್ ಹೇಳಿಕೆ
  • ಅಧಿಕಾರಿಗಳು, ರೈತ ಮುಖಂಡರ ಸಭೆ
ಹಿರಿಯೂರು: ರೈತರಿಗೆ ರಿಯಾಯಿತಿ ದರದಲ್ಲಿ ಗುಣಮಟ್ಟದ ಬಿತ್ತನೆ ಬೀಜ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಜೆ.ಅಶೋಕ್ ಹೇಳಿದರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕಂದಾಯ, ಕೃಷಿ ಇಲಾಖೆ ಹಾಗೂ ರೈತ ಮುಖಂಡರ ಸಭೆಯಲ್ಲಿ ಮಾತನಾಡಿದರು.
ಮುಂಗಾರು ಹಂಗಾಮಿಗೆ ಅಗತ್ಯವಿರುವ ವಿವಿಧ ಬೆಳೆಗಳ ಬಿತ್ತನೆ ಬೀಜಗಳನ್ನು ಕೃಷಿ ಇಲಾಖೆ ಮೂಲಕ ವಿತರಿಸಲಾಗುತ್ತಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಬಿತ್ತನೆ ಬೀಜ-ರಸಗೊಬ್ಬರಗಳನ್ನು ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಬಾರದು. ಈ ಬಗ್ಗೆ ಕೃಷಿ ಪರಿಕರ ಅಂಗಡಿ ಮಾಲೀಕರಿಗೆ ಸೂಚನೆ ನೀಡಲಾಗಿದೆ. ತಾಲೂಕಿನ ರೈತರಿಗೆ 12.5 ಕೋಟಿ ರೂ. ಬೆಳೆ ವಿಮೆ ಪಾವತಿ ಮಾಡಲಾಗಿದೆ ಎಂದು ತಿಳಿಸಿದರು.
ರೈತ ಮುಖಂಡ ಕೆ.ಸಿ. ಹೊರಕೇರಪ್ಪ ಮಾತನಾಡಿ, ಪ್ರಸಕ್ತ ವರ್ಷ ಕೃಷಿ ಇಲಾಖೆ ವಿತರಣೆ ಮಾಡಿರುವ ಬಿತ್ತನೆ ಶೇಂಗಾ ಕಳಪೆಯಾಗಿದೆ. ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ವಿತರಿಸಬೇಕು. ಬಿತ್ತನೆ ಬೀಜ ಮತ್ತು ರಸಗೊಬ್ಬರದ ದರ ಪಟ್ಟಿಯನ್ನು ಎಲ್ಲ ರೈತ ಸಂಪರ್ಕ ಕೇಂದ್ರ ಹಾಗೂ ಕೃಷಿ ಪರಿಕರ ಮಾರಾಟ ಕೇಂದ್ರದ ಮುಂದೆ ಪ್ರದರ್ಶಿಸಬೇಕು ಎಂದು ಮನವಿ ಮಾಡಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಮಾತನಾಡಿ, ತೊಗರಿ ಮತ್ತು ಕಡಲೆ ಬಿತ್ತನೆ ಬೀಜ ಖರೀದಿ ಮಾಡಲು ಈಶ ಸಂಸ್ಥೆಗೆ ನೀಡಿರುವ ಪರವಾನಗಿ ರದ್ದುಪಡಿಸಬೇಕು ಎಂದು ಒತ್ತಾಯಿಸಿ ಸಭೆ ಬಹಿಷ್ಕರಿಸಿ ಹೊರ ನಡೆದರು.
ತಹಸೀಲ್ದಾರ್ ಎಂ.ಸಿದ್ದೇಶ್ ಮಾತನಾಡಿ, ಕೃಷಿ-ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತ ಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಬೇಕು. ಸರ್ಕಾರದ ಸೌಲಭ್ಯ, ಬೆಳೆವಿಮೆ, ಪರಿಹಾರ ಕುರಿತು ಸಕಾಲಕ್ಕೆ ಮಾಹಿತಿ ನೀಡಬೇಕು. ರೈತರ ಅಹವಾಲು, ಸಮಸ್ಯೆ, ದೂರುಗಳ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು ಎಂದರು.
ಉಪ ಕೃಷಿ ನಿರ್ದೇಶಕ ಉಮೇಶ್, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಪರಶುರಾಮ್ ಚಂದ್ರವಂಶಿ, ಕೃಷಿಕ ಸಮಾಜದ ನಿರ್ದೇಶಕ ಎಚ್.ಆರ್. ತಿಮ್ಮಯ್ಯ, ಹಿರಿಯ ರೈತ ಮುಖಂಡ ಆಲೂರು ಸಿದ್ದರಾಮಣ್ಣ, ಶಿವಕುಮಾರ್, ಚೇತನ್, ದಸ್ತಗಿರಿಸಾಬ್, ಶಶಿಕಲಾ, ತಿಮ್ಮಾರೆಡ್ಡಿ ಇತರರು ಇದ್ದರು.
ಎಚ್‌ವೈಆರ್ ಕೃಷಿ 18
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net