ಗುಟ್ಖಾ, ಮದ್ಯ ನಿಷೇಧ ಜಾರಿಗೆ ಕೈಗೊಳ್ಳಿ ಗಟ್ಟಿ ತೀರ್ಮಾನ

ಸಾಣೇಹಳ್ಳಿಯ ಶ್ರೀ ಶಿವಕುಮಾರ ಬಯಲು ರಂಗಮಂದಿರದಲ್ಲಿ ಮಂಗಳವಾರ ರಾಷ್ಟ್ರೀಯ ನಾಟಕೋತ್ಸವದ 3ನೇ ದಿನದ ಕಾರ್ಯಕ್ರಮದಲ್ಲಿ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಶ್ರೀ ಶಾಂತವೀರ ಸ್ವಾಮೀಜಿ, ಮಾಜಿ ಸಚಿವ ಬಿ.ಸಿ. ಪಾಟೀಲ್, ಎಸ್.ಸಿ. ಸಿದ್ದರಾಮಪ್ಪ, ಅಣಬೇರು ರಾಜಣ್ಣ ಇತರರಿದ್ದರು.
ಸಾಣೇಹಳ್ಳಿಯ ಶ್ರೀ ಶಿವಕುಮಾರ ಬಯಲು ರಂಗಮಂದಿರದಲ್ಲಿ ಮಂಗಳವಾರ ರಾಷ್ಟ್ರೀಯ ನಾಟಕೋತ್ಸವದ 3ನೇ ದಿನದ ಕಾರ್ಯಕ್ರಮದಲ್ಲಿ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಶ್ರೀ ಶಾಂತವೀರ ಸ್ವಾಮೀಜಿ, ಮಾಜಿ ಸಚಿವ ಬಿ.ಸಿ. ಪಾಟೀಲ್, ಎಸ್.ಸಿ. ಸಿದ್ದರಾಮಪ್ಪ, ಅಣಬೇರು ರಾಜಣ್ಣ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಾಮಾಜಿಕ ಪಿಡುಗಾಗಿ ಪರಿಣಮಿಸಿರುವ ಗುಟ್ಖಾ
  • ಮದ್ಯ ನಿಷೇಧಿಸುವ ಗಟ್ಟಿ ತೀರ್ಮಾನ ಸರ್ಕಾರ ಕೈಗೊಳ್ಳಲಿ
  • ಸಾಣೇಹಳ್ಳಿಯ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿಕೆ
ವಿಜಯವಾಣಿ ಸುದ್ದಿಜಾಲ ಹೊಸದುರ್ಗ 
ಸಾಮಾಜಿಕ ಪಿಡುಗಾಗಿ ಪರಿಣಮಿಸಿರುವ ಗುಟ್ಖಾ - ಮದ್ಯ ನಿಷೇಧಿಸುವ ಗಟ್ಟಿ ತೀರ್ಮಾನವನ್ನು ಸರ್ಕಾರ ಕೈಗೊಳ್ಳುವಂತೆ ಸಾಣೇಹಳ್ಳಿಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಸಾಣೆಹಳ್ಳಿಯ ಶ್ರೀ ಶಿವಕುಮಾರ ಬಯಲು ರಂಗಮಂದಿರದಲ್ಲಿ  ಆಯೋಜಿಸಿರುವ ರಾಷ್ಟ್ರೀಯ ನಾಟಕೋತ್ಸವದ 3 ನೇ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸಾಮಾಜಿಕ ಆರೋಗ್ಯ ಕೆಡಿಸುವ ಹಾಗೂ ಆರೋಗ್ಯ ಹಾಳು ಮಾಡುವ ಗುಟ್ಖಾ, ಮದ್ಯ ಕುರಿತಂತೆ ಸರ್ಕಾರದ ಧೋರಣೆ ಬದಲಾಗಬೇಕು. ಸಮಾಜದಲ್ಲಿ ಒಳ್ಳೆಯ ವಾತಾವರಣವಿದೆ. ಅದನ್ನು ಬೆಳೆಸಲು ಸಹಕಾರ ನೀಡಬೇಕು  ಎಂದು ಆಶಿಸಿದರು. 
ಲೋಕ ಬದಲಾಗುತ್ತದೆಯೋ ಇಲ್ಲವೋ- ಗೊತ್ತಿಲ್ಲ.ಆದರೆ ವೈಯಕ್ತಿಕ ನೆಲೆಯಲ್ಲಿ ನಾವು ಬದಲಾಗಬೇಕು. ಇದರಿಂದ ಸಮಾಜದಲ್ಲಿ ಉತ್ತಮ ಬದಲಾವಣೆ ತರಲು ಸಾಧ್ಯ. ಹಸುವಿನ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಸಿಗಲು ಕಾರಣರಾದ ನಾವೇ ಪರಿಸರ ಸಂರಕ್ಷಿಸುವ ಕೆಲಸಕ್ಕೂ ಆದ್ಯತೆ ನೀಡಬೇಕು ಎಂದರು. 
ಕುಂಚಿಟಿಗ ಗುರುಪೀಠದ ಶ್ರೀ ಶಾಂತವೀರ ಸ್ವಾಮೀಜಿ ಮಾತನಾಡಿ ಪಾಲಕರು ಮೌಲ್ಯಗಳನ್ನು ಕಲಿತರೆ ಮಕ್ಕಳೂ  ಕಲಿಯುತ್ತಾರೆ.  ಗಂಡ ಹೆಂಡತಿ ಮಕ್ಕಳ ಎದುರು ಜಗಳವಾಡುವುದನ್ನು ನಿಲ್ಲಿಸಿದರೆ ಅದೇ ಅವರಿಗೆ ನೀಡುವ ಮೌಲ್ಯಯುತ ಶಿಕ್ಷಣ ಎಂದರು. 
ಔಪಚಾರಿಕ ಶಿಕ್ಷಣದ ಜತೆಗಿರಲಿ ಸಾಹಿತ್ಯದ ರಸಗವಳ
ಮಕ್ಕಳಿಗೆ ಔಪಚಾರಿಕ ಶಿಕ್ಷಣದ ಜತೆಗೆ ಕಲೆ, ಸಾಹಿತ್ಯ, ಸಂಸ್ಕೃತಿ ಒಳಗೊಂಡ ಅನೌಪಚಾರಿಕ ಶಿಕ್ಷಣ  ನೀಡಿದರೆ ಅವರ ಸರ್ವತೋಮುಖ ವ್ಯಕ್ತಿತ್ವ ನಿರ್ಮಾಣ ಸಾಧ್ಯ ಎಂದು ಚಿಂತಕ ಡಾ. ಗುರುರಾಜ ಪಾಟೀಲ ಹೇಳಿದರು.
ಮಕ್ಕಳ ಶಿಕ್ಷಣಕ್ಕೆ ಕೊಡುವ  ಮಹತ್ವವನ್ನು ಅವರಿಗೆ ಮೌಲ್ಯಗಳನ್ನು ಕಲಿಸುವುದಕ್ಕೂ ನೀಡಬೇಕು. ಇದನ್ನು ಅಪ್ಪ-ಅಮ್ಮನೇ ಹೇಳಿಕೊಡಬೇಕು. ಮಕ್ಕಳಿಗೆ ಹೆತ್ತವರು ಸಮಯ ಕೊಡುವ ಜತೆಗೆ ಅವರನ್ನು ಅರ್ಥೈಸಿಕೊಳ್ಳಬೇಕು ಎಂದರು.
ಮಕ್ಕಳು ಪಾಲಕರನ್ನು ಅನುಕರಿಸುತ್ತಾರೆ. ನಾವು ರೂಢಿಸಿಕೊಂಡ ಹವ್ಯಾಸಗಳನ್ನು ಮುಂದುವರಿ ಸುತ್ತಾರೆ. ಮಕ್ಕಳ ಕುರಿತು ಅನಗತ್ಯ ಅನುಮಾನ ಪಡುವ ಬದಕಲು ಅವರ ಗೆಳೆಯರ ಜತೆ ಗೆಳೆತನ ಬೆಳೆಸಿದರೆ ಮಕ್ಕಳು ಮುಚ್ಚಿಟ್ಟ ಸಂಗತಿಗಳನ್ನು ತಿಳಿಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಮಾಜಿ ಸಚಿವ ಬಿ.ಸಿ. ಪಾಟೀಲ್ ಮಾತನಾಡಿ, ಹಿರೇಕೆರೂರು ತಾಲೂಕಿನ ಹಳ್ಳಿಯೊಂದರಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲು 13 ಲಕ್ಷ ರೂ.ಗೆ ಹರಾಜು ಮಾಡಲಾಗಿದೆ ಎಂಬ ಸಂಗತಿ ಮನಸ್ಸಿಗೆ ಬೇಸರ ತರಿಸಿದೆ. ಇಂತಹ ಹರಾಜಿನಿಂದ ಬಂದ ಹಣದಲ್ಲಿ  ದೇವಾಲಯ ಕಟ್ಟಿಸಲಾಗುತ್ತಿದೆ. ಹಳ್ಳಿಗಳಲ್ಲಿ ಮದ್ಯ ಮಾರಾಟ ಹೆಚ್ಚಾದ ಹಿನ್ನೆಲೆಯಲ್ಲಿ ಜನರು ವ್ಯಸನಿಗಳಾಗಿ ಸಾವಿಗೀಡಾಗುತ್ತಿದ್ದಾರೆ. ಹೆಣ್ಣು ಮಕ್ಕಳು ವಿಧವೆಯರಾಗಿ ಕಣ್ಣೀರು ಹಾಕುತ್ತಿದ್ದಾರೆ. ಇಂಥವರ ಕಣ್ಣೀರು ಒರೆಸುವುದು ಹೇಗೆ, ಇಂತಹ ವ್ಯವಸ್ಥೆ ಬದಲಾಗಬೇಕಿದೆ ಎಂದರು.
ದಾವಣಗೆರೆ ಜಿಲ್ಲಾಧಿಕಾರಿ ಎಂ.ಗಂಗಾಧರಸ್ವಾಮಿ ಮಾತನಾಡಿ, ಮಕ್ಕಳಿಗೆ ಶಿಕ್ಷಣ ಒದಗಿಸುವ ಭರ ದಲ್ಲಿ ಮೌಲ್ಯಗಳನ್ನು ತಿಳಿಸುವಲ್ಲಿ ಹಿಂದೆ ಬೀಳುತ್ತಿದ್ದೇವೆ. ಅಂಕಗಳಿಕೆ ಶಿಕ್ಷಣದ ಜತೆಗೆ ಮೌಲ್ಯಗಳನ್ನು ಕಲಿಸುವುದು ಅತ್ಯಗತ್ಯ ಎಂದು ಪ್ರತಿಪಾದಿಸಿದರು.
ಹಳ್ಳಿಗಳಲ್ಲಿರುವ ಯುವಕರಿಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ. ಹೆಣ್ಣು ಹೆತ್ತವರಿಗೆ ನಗರಗಳ ಮೇಲಿರುವ ವ್ಯಾಮೋಹ ಇದಕ್ಕೆ ಕಾರಣ. ಮೌಲ್ಯಾಧರಿತ ಬದುಕು ಕಟ್ಟಿಕೊಂಡ  ಹಳ್ಳಿ ಯುವಕರಿಗೆ ಹೆಣ್ಣು ಸಿಗುತ್ತಿಲ್ಲ. ಇಂತಹ ವ್ಯವಸ್ಥೆ ಬದಲಾಗಬೇಕು ಎಂದರು.
ನಿವೃತ್ತ ಪೊಲೀಸ್ ಆಯುಕ್ತ ಎಸ್.ಸಿ. ಸಿದ್ದರಾಮಪ್ಪ ಮಾತನಾಡಿ, ರೈತರ ಬೆಳೆಗೆ ಬೆಂಬಲ ಬೆಲೆ ದೊರೆಯಬೇಕು. ರೈತರು ಕೃಷಿ ಉತ್ಪನ್ನಗಳನ್ನು  ಸಂಸ್ಕರಿಸಿ ಪ್ಯಾಕೆಟ್ ಮಾಡಿ ಮಾರಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ತಿಳಿಸಿದರು. 
ರಂಗಭೂಮಿ ಮೂಲಕ ಸಂಸ್ಕಾರ
ರಂಗಭೂಮಿ ಮೂಲಕ ಧಾರ್ಮಿಕ, ಸಾಮಾಜಿಕ ಜಾಗೃತಿ ಮೂಡಿಸುವುದರೊಂದಿಗೆ  ಸಮಾಜಕ್ಕೆ ಸಂಸ್ಕಾರ ನೀಡುವ ಕೆಲಸದಲ್ಲಿ ಸಾಣೇಹಳ್ಳಿ ಮಠ ಮುಂದಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಉಪಾಧ್ಯಕ್ಷರೂ ಆದ ಉದ್ಯಮಿ ಅಣಬೇರು ರಾಜಣ್ಣ ಶ್ಲಾಘಿಸಿದರು.
ಡಾ.ಪಂಡಿತಾರಾಧ್ಯ ಶ್ರೀಗಳ ಮಾರ್ಗದರ್ಶನದಲ್ಲಿ  ಪ್ರದರ್ಶನ ಕಾಣುವ ಶಿವಸಂಚಾರ ನಾಟಕಗಳೆಂದರೆ ಪ್ರೇಕ್ಷಕರಿಗೆ ರಸಗವಳ ಇದ್ದಂತೆ. ಇಂದಿನ ಚಲನಚಿತ್ರ-ದೃಶ್ಯ ಮಾಧ್ಯಮಗಳ ಅಬ್ಬರದ ನಡುವೆಯೂ ಜನ ನೋಡುವಂತಹ ‘ಸತ್ವಭರಿತ-ತತ್ವ ಭರಿತ’ ನಾಟಕಗಳ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುತ್ತಿದ್ದಾರೆ ಎಂದರು.
ಗುಡಿಸಲುಗಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಅವರ ಪ್ರತಿಭೆಗೆ ಸಾಣೆ ಹಿಡಿದು ಸಾಣೇಹಳ್ಳಿ ರಂಗ ಶಾಲೆಯಲ್ಲಿ ಅವರಿಗೆ ತರಬೇತಿ ನೀಡುವ ಮೂಲಕ ಬದುಕು ಕಟ್ಟಿಕೊಳ್ಳಲು ದಾರಿ ತೋರಿದ್ದಾರೆ. ಈ ಕ್ರಿಯೆ ನಿರಂತರವಾಗಿ ನಡೆಯುತ್ತಿದೆ ಎಂದು ಸ್ಮರಿಸಿದರು.
ಶಾಮನೂರು ಶಿವಶಂಕರಪ್ಪ ಹಾಗೂ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಸಹಕಾರದಿಂದ ಶಿವಕುಮಾರ ಬಯಲು ರಂಗಮಂದಿರ, ಎಸ್.ಎಸ್.ಒಳಾಂಗಣ ರಂಗಮಂದಿರ ನಿರ್ಮಾಣ ವಾಗಿವೆ. ಇದರಿಂದ ರಂಗಭೂಮಿಯ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದರು. 
ಕಾರ್ಯಕ್ರಮಕ್ಕೆ ಮುನ್ನ ಅಣ್ಣಿಗೆರೆಯ ಯಶಸ್ವಿನಿ ಯೋಗ ಸಂಸ್ಥೆಯ ಮಕ್ಕಳು ಯೋಗ ನೃತ್ಯ ರೂಪಕ ಪ್ರಸ್ತುತಪಡಿಸಿದರು. ಕಾರ್ಯಕ್ರಮದ ನಂತರ ಕೃಷ್ಣಮೂರ್ತಿ ಮೂಡಬಾಗಿಲು ರಚಿಸಿ ನಿರ್ದೇಶಿಸಿರುವ ಕಳ್ಳರ ಸಂತೆ ನಾಟಕವನ್ನು ಶಿವಸಂಚಾರ-25ರ ಕಲಾವಿದರು ಅಭಿನಯಿಸಿದರು. ದಾವಣಗೆರೆ ತಹಸೀಲ್ದಾರ್ ಅಶ್ವತ್ಥ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೇವೇಂದ್ರ ಕುಮಾರ್ ಪತ್ತಾರ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net