ಹಿರಿಯೂರಿನ ಗ್ರಾಮೀಣ ರಸ್ತೆಗಳ ಪರಿಸ್ಥಿತಿ ಅಯೋಮಯ

ಹಿರಿಯೂರು ತಾಲೂಕಿನ ರಸ್ತೆಗಳ ಸ್ಥಿತಿ.
ಹಿರಿಯೂರು ತಾಲೂಕಿನ ರಸ್ತೆಗಳ ಸ್ಥಿತಿ.
Published on

ಪ್ರಮುಖ ಮುಖ್ಯಾಂಶಗಳು

  • ತಾಲೂಕಿನ ಗ್ರಾಮೀಣ ಸಂಪರ್ಕ ರಸ್ತೆ ಸಂಪೂರ್ಣ ಹಾಳು
  • ದುರಸ್ತಿಗೆ ಮುಂದಾಗದ ಸರ್ಕಾರದ ವಿರುದ್ಧ ಹಿಡಿ ಶಾಪ
  • ಕೆಸರು ಗದ್ದೆಯಾಗಿ ಮಾರ್ಪಟ್ಟಿವೆ ರಸ್ತೆಗಳು
ಖಂಡೇನಹಳ್ಳಿ ಬಸವರಾಜ್ ಹಿರಿಯೂರು
ತಾಲೂಕಿನ ಗ್ರಾಮೀಣ ಸಂಪರ್ಕ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ದುರಸ್ತಿಗೆ ಮುಂದಾಗದ ಸರ್ಕಾರದ ವಿರುದ್ಧ ಜನರು ನಿತ್ಯ ಹಿಡಿ ಶಾಪ ಹಾಕುತ್ತಿದ್ದಾರೆ.
ಗ್ರಾಮೀಣ-ನಗರ ಪ್ರದೇಶದ ಸಂಪರ್ಕ ರಸ್ತೆಗಳು ಕೆಸರು ಗದ್ದೆಯಾಗಿ ಮಾರ್ಪಟ್ಟಿವೆ. ರಸ್ತೆ ಗುಂಡಿಗಳು ನಾಗರಿಕರ ಬದುಕಿಗೆ ಸಂಕಷ್ಟ ತಂದಿವೆ. ವಾಹನ ಸವಾರರು ಜೀವ ಹಿಡಿದು ಸಂಚರಿಸಬೇಕಿದೆ. 
ರಸ್ತೆಯಲ್ಲಿ ಗುಂಡಿ ಇದೆಯೋ, ಗುಂಡಿಯಲ್ಲಿ ರಸ್ತೆ ಇದೆಯೋ ಎಂಬಷ್ಟರ ಮಟ್ಟಿಗೆ ಹಾಳಾಗಿವೆ. ಮಳೆ ಬಂದರಂತೂ ಗುಂಡಿ ಯಾವುದು? ರಸ್ತೆ ಯಾವುದು ಎಂಬುದೇ ಗೊತ್ತಾಗುವುದಿಲ್ಲ. ಒಂದು ಗುಂಡಿ ತಪ್ಪಿಸಿ ಮುಂದೆ ಸಾಗುವಷ್ಟರಲ್ಲಿ ಮತ್ತೊಂದು ಗುಂಡಿ ಎದುರಾಗುತ್ತದೆ, ವಾಹನ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ.
ಕೆಲವೆಡೆ ಡಾಂಬರು ಕಿತ್ತು ಜಲ್ಲಿಕಲ್ಲುಗಳು ರಸ್ತೆಯಲ್ಲಿ ಹರಡಿಕೊಂಡಿವೆ. ಅದಕ್ಕೂ ತನಗೂ ಸಂಬಂಧ ಇಲ್ಲವೆಂಬಂತೆ ಜಿಲ್ಲಾ ಸಚಿವರು, ಲೋಕೋಪಯೋಗಿ ಇಲಾಖೆ ಜಾಣ ಕುರುಡು ಪ್ರದರ್ಶಿಸುತ್ತಿರುವುದು ದುರಂತ.
ಹಾಳಾಗಿವೆ ಸೇತುವೆ: ವಿವಿ ಸಾಗರ ಜಲಾಶಯ ಭರ್ತಿಯಾಗಿ ಕೋಡಿ ಬಿದ್ದ ಪರಿಣಾಮ ಅಪಾರ ಪ್ರಮಾಣದ ನೀರು ವೇದಾವತಿ ನದಿಯಲ್ಲಿ ಹರಿಯುತ್ತಿದೆ. ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಮೈಸೂರು ಅರಸರ ಕಾಲದ ಸೇತುವೆಗಳು ಅಪಾಯದ ಸ್ಥಿತಿಗೆ ತಲುಪಿವೆ. 
ನಿರ್ವಹಣೆ ಕೊರತೆಯಿಂದ ಸೇತುವೆಗಳು ಬಹುತೇಕ ಶಿಥಿಲಗೊಂಡಿವೆ. ನಗರ-ಗ್ರಾಮೀಣ ಭಾಗದ ಸೇತುವೆಗಳಲ್ಲೂ ಹೊಂಡಗಳದ್ದೇ ರಾಜ್ಯಭಾರ. ಹೊಸದಾಗಿ ಡಾಂಬರು ಹಾಕಿದ ರಸ್ತೆಗಳಲ್ಲೂ ಗುಂಡಿಗಳಿವೆ.
ಅನುದಾನ ಕೊರತೆ: ಹೊಸದಾಗಿ ರಸ್ತೆ ಅಭಿವೃದ್ಧಿ, ಗುಂಡಿ ಮುಚ್ಚಲು, ರಸ್ತೆ ಬದಿಯ ಗಿಡಗಳ ನಿರ್ವಹಣೆಗೆ ಲೋಕೋಪಯೋಗಿ ಇಲಾಖೆಯಲ್ಲಿ ಅನುದಾನ ಇಲ್ಲ ಎನ್ನಲಾಗಿದೆ. ಈ ಬಗ್ಗೆ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಾರೆ. 
ಜಿಲ್ಲಾ ಸಚಿವರ ಕ್ಷೇತ್ರದಲ್ಲಿ ರಸ್ತೆಗಳ ಸ್ಥಿತಿ ಅಯೋಮಯವಾಗಿವೆ. ಅನುದಾನ ಕೊರತೆಯಿಂದ ತಾಲೂಕಿನ ಅಭಿವೃದ್ಧಿ ಕಾಮಗಾರಿಗೆ ಗ್ರಹಣ ಹಿಡಿದಿದೆ.
ಅಪಾಯದ ಸ್ಥಳಗಳು: ವಿವಿಧೆಡೆ ರಸ್ತೆಗಳು ಅಪಾಯದ ಸ್ಥಿತಿಯಲ್ಲಿವೆ. ಬಬ್ಬೂರು, ಬ್ಯಾಡರಹಳ್ಳಿ ಸಮೀಪದ ವೇದಾವತಿ ಸೇತುವೆ, ಧರ್ಮಪುರದ ಮುಖ್ಯ ರಸ್ತೆ, ಹಲಗಲದ್ದಿ, ಮಸ್ಕಲ್ ಮಟ್ಟಿ ಇತರೆಡೆ ರಸ್ತೆಗಳಲ್ಲೂ ಗುಂಡಿಗಳಿವೆ. ಮಳೆ ನೀರಿನಿಂದ ಮುಚ್ಚಿರುವ ರಸ್ತೆ ಸಮತಟ್ಟಾಗಿದೆ ಎಂದು ವಾಹನ ಚಲಾಯಿಸಿದರೆ ಗುಂಡಿಗೆ ಇಳಿಯುತ್ತವೆ. ಸವಾರರ ಪರಿಸ್ಥಿತಿ ಹೇಳತೀರದಾಗಿದೆ.
"

ಹಿರಿಯೂರು ತಾಲೂಕಿನ ರಸ್ತೆಗಳು ಅಯೋಮಯವಾಗಿವೆ. ವಾರದಲ್ಲಿ ಎರಡು ದಿನ ಕ್ಷೇತ್ರಕ್ಕೆ ಭೇಟಿ ನೀಡುವ ಸಚಿವರು ಮದುವೆ, ನಾಮಕರಣ, ಜಾತ್ರೆ ಉತ್ಸವ, ಗೃಹ ಪ್ರವೇಶ ಸಮಾರಂಭಗಳಲ್ಲಿ ಭಾಗವಹಿಸುತ್ತಾರೆ. ಗ್ಯಾರಂಟಿ ಜಪದಲ್ಲಿ ಅಭಿವೃದ್ಧಿ ಮರೆತಿದ್ದಾರೆ.

— ಎಚ್.ಆರ್.ಯೋಗೇಶ್, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ.
"

ಗ್ರಾಮೀಣ ರಸ್ತೆ ಅಭಿವೃದ್ಧಿ ಕಡೆ ಸರ್ಕಾರ/ಜನಪ್ರತಿನಿಧಿಗಳು ಗಮನಹರಿಸುತ್ತಿಲ್ಲ. ಒಂದೆಡೆ ರಸ್ತೆಗಳು ಹಾಳಾಗಿವೆ. ಇನ್ನೊಂದೆಡೆ ಅಭಿವೃದ್ಧಿಗೂ ಗರ ಬಡಿದಿದೆ.

— ಕಸವನಹಳ್ಳಿ ರಮೇಶ್, ರೈತ ಮುಖಂಡ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net