ಏರುತ್ತಿರುವ ಬಿಸಿಲ ಧಗೆ, ತರಕಾರಿ, ಹಣ್ಣುಗಳೂ ತುಟ್ಟಿ

ಕೊಂಡ್ಲಹಳ್ಳಿ ವಾರದ ಸಂತೆಯಲ್ಲಿ ತರಕಾರಿ ವ್ಯಾಪಾರ.
ಕೊಂಡ್ಲಹಳ್ಳಿ ವಾರದ ಸಂತೆಯಲ್ಲಿ ತರಕಾರಿ ವ್ಯಾಪಾರ.
Published on

ಪ್ರಮುಖ ಮುಖ್ಯಾಂಶಗಳು

  • ಅಂತರ್ಜಲ ಕುಸಿತದಿಂದ ಉತ್ಪಾದನೆ ಕುಸಿತ
  • ಹೊರ ರಾಜ್ಯಗಳಿಂದಲೂ ಕಡಿಮೆ ಪೂರೈಕೆ
ರಾಮಚಂದ್ರಪ್ಪ ಕೊಂಡ್ಲಹಳ್ಳಿ
ಬಿಸಿಲಿನ ಧಗೆ ದಿನದನಕ್ಕೂ ಹೆಚ್ಚಾಗುತ್ತಿರುವುದರ ನಡುವೆ ತರಕಾರಿ, ಹಣ್ಣುಗಳ ಬೆಲೆಗಳು ಗಗನಕ್ಕೇರಿ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ.
ಅಂತರ್ಜಲ ಕುಸಿತದಿಂದ ಹಲವೆಡೆ ನೀರಿನ ಅಭಾವ ಎದುರಾಗಿ ತರಕಾರಿ ಬೆಳೆಯುವುದು ಕಡಿಮೆಯಾಗಿದೆ. ಹೀಗಾಗಿ ಮಾರುಕಟ್ಟೆಗೆ ತರಕಾರಿಗಳ ಆವಕ ಕಡಿಮೆಯಾಗಿ ಬೆಲೆ ಏರುಮುಖವಾಗಿದೆ.
ಪ್ರಸ್ತುತ ಮದುವೆ ಸಮಾರಮಭಗಳ ಸೀಸನ್ ಆಗಿರುವುದರಿಂದ ತರಕಾರಿಗೆ ಹೆಚ್ಚಿನ ಬೇಡಿಕೆ ಇದೆ. ಅದಕ್ಕೆ ತಕ್ಕಂತೆ ಪೂರೈಕೆಯಾಗುತ್ತಿಲ್ಲ ಎನ್ನುತ್ತಾರೆ ತರಕಾರಿ ವ್ಯಾಪಾರಿಗಳು.
ಒಂದು ಕೆಜಿ ಬೆಂಡೆಕಾಯಿ- 80 ರೂ., ಹಸಿಮೆಣಸಿನಕಾಯಿ 80 ರೂ., 20 ಕೆಜಿ ಬದನೆಕಾಯಿ 2000 ರೂ.ಆಗಿದೆ. ಹುರುಳಿಕಾಯಿ ಹೋಲ್‌ಸೇಲ್ ದರವೇ ಕೆ.ಜಿ.ಗೆ 250 ರೂ.ಗೆ ಏರಿದ್ದು ವ್ಯಾಪಾರ ಮಾಡುವುದೇ ಕಷ್ಟವಾಗಿದೆ.
ಬಿಸಿಲಿನ ಕಾರಣಕ್ಕೆ ಟೊಮ್ಯಾಟೋ ಬೆಳೆ ಎಲ್ಲೂ ಕಾಣದಂತಾಗಿದೆ. ಈಗೀಗ ಅಲ್ಲಲ್ಲಿ ಬೆಳೆ ನಾಟಿ ಮಾಡಲಾಗುತ್ತಿದೆ. ಇದರ ಪರಿಣಾಮ ಕೆಜಿಗೆ 20 ರೂ. ಆಸುಪಾಸಿನಲ್ಲಿದ್ದ ಟೊಮ್ಯಾಟೋ 60 ರೂ.ಗೆ ಜಿಗಿದಿದೆ. ಕೆ.ಜಿ.ಸೇಬಿನ ಬೆಲೆ 280 ರೂ., ಏಲಕ್ಕಿ ಬಾಳೆ 90 ರ ಆಸುಪಾಸಿನಲ್ಲಿದೆ. ಕೆಜಿಗೆ 10 ರೂ. ಆಸುಪಾಸಿನಲ್ಲಿದ್ದ ಕಲ್ಲಂಗಡಿ 30-40 ರ ಗಡಿದಾಟಿದೆ.ಪಪ್ಪಾಯಿ ಹಣ್ಣು ಕೆಜಿ.ಗೆ ರೂ.50 ಕ್ಕೇರಿದೆ.
ಸ್ಥಳೀಯವಾಗಿ ಎಲ್ಲೂ ಟೊಮ್ಯಾಟೋ, ಮೆಣಸಿನಕಾಯಿ, ಬೀನ್ಸ್ ಬೆಳೆಯದ ಕಾರಣ ಹೊರ ರಾಜ್ಯಗಳಿಂದ ಬರುವ ತರಕಾರಿ ಖರೀದಿಸಿ ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದಾರೆ ಎನ್ನಲಾಗಿದೆ.
ಹಸಿ ಮೆಣಸಿನಕಾಯಿ, ಬೀನ್ಸ್ ಹಾಸನ, ಮೈಸೂರು ಕಡೆಗಳಿಂದ, ಟೊಮ್ಯಾಟೋವನ್ನು ನೆರೆಯ ಮಹಾರಾಷ್ಟ್ರ ಹಾಗೂ ಆಂಧ್ರದ ಮದನಪಲ್ಲಿಯ ಕಡೆಯಿಂದ ತರಿಸಿಕೊಳ್ಳಲಾಗುತ್ತಿದೆ. ಅದೂ ಸಹ ಬೇಡಿಕೆಯಷ್ಟು ಪೂರೈಕೆಯವಿಲ್ಲ ಎನ್ನುತ್ತಾರೆ ಸ್ಥಳೀಯ ವ್ಯಾಪಾರಿಗಳು.
ಈ ರೀತಿ ತರಕಾರಿ ಬೆಳೆಗಳು ದುಬಾರಿಯಾದರೆ ಸಾಮಾನ್ಯ ಹಾಗೂ ಮಧ್ಯಮ ವರ್ಗದವರು ಜೀವನ ಸಾಗಿಸುವುದು ತುಂಬಾ ಕಷ್ಟವಾಗಿದೆ ಎನ್ನುತ್ತಾರೆ ಸ್ಥಳೀಯ ಗ್ರಾಹಕ ತಿಪ್ಪೇಸ್ವಾಮಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net