ಚಳ್ಳಕೆರೆ ತಾಲೂಕಿನ ಹಿರೇಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ ಬಳಿ ಮಂಗಳವಾರ ರಾಜ್ಯ ರೈತ ಸಂಘದ ನೂರಾರು ಕಾರ್ಯಕರ್ತರು ಬೆಳೆ ವಿಮೆ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ರೆಡ್ಡಿಹಳ್ಳಿ ವೀರಣ್ಣ, ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಕೆ.ಟಿ. ತಿಪ್ಪೇಸ್ವಾಮಿ, ರವಿ ಕುಮಾರ, ರಾಜಣ್ಣ, ರಂಗಾರೆಡ್ಡಿ ಇದ್ದರು.
ಚಳ್ಳಕೆರೆ: ಪ್ರಸಕ್ತ ಸಾಲಿನ ಬೆಳೆ ವಿಮೆ ಬಿಡುಗಡೆಗೆ ವಿಳಂಬ ಮಾಡುತ್ತಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ರಾಜ್ಯ ರೈತ ಸಂಘದ ನೂರಾರು ಕಾರ್ಯಕರ್ತರು ಮಂಗಳವಾರ ಚಳ್ಳಕೆರೆ ತಾಲೂಕಿನ ಹಿರೇಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ ಟೋಲ್ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಅಧಿಕಾರಿಗಳು ಆಗಮಿಸುವುದಕ್ಕೂ ಮುನ್ನ ಟೋಲ್ ಬಳಿ ಹೆದ್ದಾರಿ ತಡೆಗೆ ಮುಂದಾದ ರೈತರನ್ನು ನಿಯಂತ್ರಿಸುವಲ್ಲಿ ಪೊಲೀಸರು ಹರಸಾಹಸ ಪಡಬೇಕಾಯಿತು. ಈ ವೇಳೆ ರೈತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ರೈತರನ್ನು ಬಂಧಿಸಲು ಪೊಲೀಸರು ಮುಂದಾಗಿದ್ದು ಕಂಡು ಬಂತು. ಬಳಿಕ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದರು.
ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ರೇಹಾನ್ ಪಾಷ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಬಿ. ಮಂಜುನಾಥ, ಸಹಾಯಕ ನಿರ್ದೇಶಕ ಡಾ.ಎಸ್.ಟಿ. ರಮೇಶ್ ಅವರನ್ನು ರೈತರು ತರಾಟೆಗೆ ತೆಗೆದುಕೊಂಡರು.
ಚಳ್ಳಕೆರೆ ತಾಲೂಕಿನಿಂದ 36,700 ರೈತರು ಬೆಳೆ ವಿಮೆ ಕಟ್ಟಿದ್ದಾರೆ. ಜನವರಿ ತಿಂಗಳಿಂದ ರೈತರ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ ಎಂದು ಇದುವರೆಗೂ ಸುಳ್ಳು ಹೇಳಲಾಗಿದೆ. ಖಾಸಗಿ ವಿಮಾ ಕಂಪನಿಗಳ ಉದ್ಧಾರಕ್ಕೆ ರೈತರನ್ನು ಶೋಷಣೆ ಮಾಡುತ್ತಿರುವುದು ಸರಿಯಲ್ಲ. ಇದಕ್ಕೆ ಅಧಿಕಾರಗಳ ಕುಮ್ಮಕ್ಕಿದೆ. ಬೆಳೆ ವಿಮೆ ಕಂತು ಕಟ್ಟಿಸಲು ಅತಿ ಹೆಚ್ಚು ಪ್ರಚಾರ ಮಾಡುವ ಕೃಷಿ ಇಲಾಖೆ, ರೈತರಿಗೆ ವಿಮಾ ಹಣ ಕೊಡಿಸುವಲ್ಲಿ ನಿರ್ಲಕ್ಷೃವಹಿಸಿದೆ ಎಂದು ಆರೋಪಿಸಿದರು.
ರೈತರಿಗೆ ವಿಮಾ ಹಣ ಬಿಡುಗಡೆ ಮಾಡಲು ಸಾವಿರಾರು ನಿಯಮ ಹೇಳಲಾಗುತ್ತಿದೆ. ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳಿಂದ ಖಾಸಗಿ ವಿಮಾ ಕಂಪನಿಗಳು ಕೋಟ್ಯಂತರ ರೂ. ದೋಚುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಪಷ್ಟನೆ: ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಬಿ. ಮಂಜುನಾಥ ಮಾತನಾಡಿ, ಮೇ 13ರಿಂದ ಜಿಲ್ಲೆಯ ರೈತರ ಬ್ಯಾಂಕ್ ಖಾತೆಗೆ ವಿಮಾ ಹಣ ಬರಲಿದೆ. ಚಳ್ಳಕೆರೆ ತಾಲೂಕಿನ 13 ಗ್ರಾಪಂಗಳಿಗೆ ವಿಮೆ ಅರ್ಹತೆ ಸಿಕ್ಕಿಲ್ಲ. ಉತ್ತಮ ಮಳೆ ಮತ್ತು ಫಸಲಿನ ಸಮೀಕ್ಷೆ ಆಧಾರದ ಮೇಲೆ ವಿಮೆ ಅವಕಾಶ ಕೈತಪ್ಪಿದೆ ಎಂದು ತಿಳಿಸಿದರು.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ರೈತರು, ಮುಂಗಾರು ಮಳೆ ಕೊರತೆಯಿಂದ ಸಂಪೂರ್ಣ ಬೆಳೆ ನಷ್ಟ ಆಗಿದೆ. ಬೆಳೆ ಕಳೆದುಕೊಂಡು ರೈತರು ಸಾಲಗಾರರಾಗಿದ್ದಾರೆ. ಸಮೀಕ್ಷೆಯಲ್ಲಿ ಲೋಪ ಎಸಗಿರುವ ಸಿಬ್ಬಂದಿಗೆ ಶಿಕ್ಷೆ ಆಗಬೇಕು. ವಿಮೆ ಕಟ್ಡಿರುವ ಎಲ್ಲ ರೈತರಿಗೂ ಹಣ ನೀಡಬೇಕು. ಇಲ್ಲದಿದ್ದಲ್ಲಿ ತಾಲೂಕು ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.
ರಾಜ್ಯ ರೈತರ ಸಂಘದ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ, ಬೇಡರೆಡ್ಡಿಹಳ್ಳಿ ಬಸವರೆಡ್ಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ದೇವರಹಳ್ಳಿ ರಾಜಣ್ಣ, ಜಯಣ್ಣ ಎರ‌್ರಿಸ್ವಾಮಿ, ಬೊಮ್ಮಣ್ಣ, ಕೆ.ಟಿ. ತಿಪ್ಪೇಸ್ವಾಮಿ, ರವಿಕುಮಾರ, ಮಲ್ಲಿಕಾರ್ಜುನ, ರಂಗಾರೆಡ್ಡಿ, ಗಂಗಾಧರ್, ವೆಂಕಟೇಶ್ ಇತರರಿದ್ದರು.
ಭದ್ರತೆ: ಪೊಲೀಸ್ ಉಪಾಧೀಕ್ಷಕ ಎಸ್.ಜಿ. ಸತ್ಯನಾರಾಯಣ ರಾವ್ ಸಮ್ಮುಖದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಮೊಳಕಾಲ್ಮೂರು, ರಾಂಪುರ, ನಾಯಕನಹಟ್ಟಿ, ತಳಕು, ಚಳ್ಳಕೆರೆ ಮತ್ತು ಪರಶುರಾಮಪುರ ಪೊಲೀಸ್ ಠಾಣೆಗಳಿಂದಲೂ ನೂರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ವೃತ್ತ ನಿರೀಕ್ಷಕ ಹನುಮಂತಪ್ಪ ಶಿರೀಹಳ್ಳಿ, ಪೊಲೀಸ್ ಉಪ ನಿರೀಕ್ಷಕ ಮಾರುತಿ, ಜೆ. ಶಿವರಾಜ್, ಶಿವಕುಮಾರ್, ಮಹೇಶ್ ಹೊಸಪೇಟೆ ಇದ್ದರು.