ಗ್ರಾಮೀಣ ಶೈಕ್ಷಣಿಕ ಮೂಲ ಸೌಕರ್ಯಕ್ಕೆ ಆದ್ಯತೆ

ಭರಮಸಾಗರ ಸಮೀಪದ ಎಮ್ಮೆಹಟ್ಟಿ ಗ್ರಾಮದಲ್ಲಿ ಶುಕ್ರವಾರ 50 ಲಕ್ಷ ರೂ. ವೆಚ್ಚದಲ್ಲಿ ನಾಲ್ಕು ನೂತನ ಶಾಲಾ ಕೊಠಡಿ ನಿರ್ಮಾಣಕ್ಕೆ ಶಾಸಕ ಡಾ. ಎಂ. ಚಂದ್ರಪ್ಪ ಭೂಮಿಪೂಜೆ ನೆರವೇರಿಸಿದರು. ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಆರ್. ಕೃಷ್ಣಮೂರ್ತಿ, ಯುವ ಬಿಜೆಪಿ ಮುಖಂಡ ಡಿ.ಎಸ್. ಪ್ರವೀಣ್, ಗ್ರಾಪಂ ಅಧ್ಯಕ್ಷೆ ರೇಣುಕಮ್ಮ, ಬಿಇಒ ಗಿರಿಜಾ, ಮಾಜಿ ಮಂಡಲ ಅಧ್ಯಕ್ಷ ಶೈಲೇಶ್ ಕುಮಾರ್ ಇತರರು ಇದ್ದರು.
ಭರಮಸಾಗರ ಸಮೀಪದ ಎಮ್ಮೆಹಟ್ಟಿ ಗ್ರಾಮದಲ್ಲಿ ಶುಕ್ರವಾರ 50 ಲಕ್ಷ ರೂ. ವೆಚ್ಚದಲ್ಲಿ ನಾಲ್ಕು ನೂತನ ಶಾಲಾ ಕೊಠಡಿ ನಿರ್ಮಾಣಕ್ಕೆ ಶಾಸಕ ಡಾ. ಎಂ. ಚಂದ್ರಪ್ಪ ಭೂಮಿಪೂಜೆ ನೆರವೇರಿಸಿದರು. ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಆರ್. ಕೃಷ್ಣಮೂರ್ತಿ, ಯುವ ಬಿಜೆಪಿ ಮುಖಂಡ ಡಿ.ಎಸ್. ಪ್ರವೀಣ್, ಗ್ರಾಪಂ ಅಧ್ಯಕ್ಷೆ ರೇಣುಕಮ್ಮ, ಬಿಇಒ ಗಿರಿಜಾ, ಮಾಜಿ ಮಂಡಲ ಅಧ್ಯಕ್ಷ ಶೈಲೇಶ್ ಕುಮಾರ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಡಾ. ಎಂ. ಚಂದ್ರಪ್ಪ ಹೇಳಿಕೆ
  • ಎಮ್ಮೆಹಟ್ಟಿಯಲ್ಲಿ ಶಾಲಾ ಕೊಠಡಿ ನಿರ್ಮಾಣಕ್ಕೆ ಭೂಮಿಪೂಜೆ
ಭರಮಸಾಗರ: ಸಮೀಪದ ಎಮ್ಮೆಹಟ್ಟಿ ಗ್ರಾಮದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ನೂತನ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಶಾಸಕ ಡಾ. ಎಂ. ಚಂದ್ರಪ್ಪ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮೀಣ ಮಕ್ಕಳಿಗೂ ನಗರ ಮಟ್ಟದ ಶಿಕ್ಷಣ ದೊರಕಬೇಕೆಂಬ ಉದ್ದೇಶದಿಂದ ಸರ್ಕಾರ ಅನುದಾನ ನೀಡಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ಕೊಠಡಿಗಳನ್ನು ಹೆಚ್ಚಿಸುವುದು ಅತ್ಯವಶ್ಯ. ಶಾಲೆಗೆ ನಾಲ್ಕು ಎಕರೆ ಜಮೀನು ಮೀಸಲಿಡಲಾಗಿದೆ ಎಂದು ಹೇಳಿದರು.
ಕೆರೆಗಳ ಹೂಳು, ಜಂಗಲ್ ತೆರವು ಸೇರಿ 5 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡ ಕಾಮಗಾರಿಗಳಿಂದ ಇಂದು ಹೋಬಳಿಯ ಕೆರೆಗಳು ತುಂಬಿ ತುಳುಕುತ್ತಿವೆ. ಇದಕ್ಕೆ ಹಲವರು ನೀಡಿದ ಸಹಕಾರವೂ ಕಾರಣವಾಗಿದೆ ಎಂದರು.
ವಿದ್ಯುತ್ ಸಮಸ್ಯೆ ನಿವಾರಣೆಗೆ 250 ಕೋಟಿಗೂ ಅಧಿಕ ವೆಚ್ಚದಲ್ಲಿ ವಿದ್ಯುತ್ ಸ್ಥಾವರ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕೆಲಸಗಳು ಪ್ರಗತಿಯಲ್ಲಿವೆ. ಅಧಿಕಾರ ಶಾಶ್ವತವಲ್ಲ. ಇದನ್ನು ಮನಗಂಡು ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಿರುವುದಾಗಿ ತಿಳಿಸಿದರು.
ಗ್ರಾಮದ ಚೌಡೇಶ್ವರಿ ದೇವಾಲಯದ ಅಭಿವೃದ್ಧಿಗೆ 10 ಲಕ್ಷ ರೂ. ಅನುದಾನ ನೀಡಿದ್ದೇನೆ. ಈ ಶಾಲೆಗೆ ಸಂಪರ್ಕ ಹೊಂದಿರುವ ರಸ್ತೆಗೆ ಮುಂದಿನ ದಿನಗಳಲ್ಲಿ ಡಾಂಬರು ಹಾಕಿಸಿ, ಅರಣ್ಯ ಇಲಾಖೆ ಸಹಕಾರದಿಂದ ಎರಡೂ ಬದಿ ಗಿಡಮರಗಳನ್ನು ನೆಡುವ ಯೋಜನೆ ಇದೆ ಎಂದು ಹೇಳಿದರು.
ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಆರ್. ಕೃಷ್ಣಮೂರ್ತಿ ಮಾತನಾಡಿ, ಶಾಲೆಗೆ ಕಠಡಿಗಳನ್ನು ನಿರ್ಮಿಸಬೇಕೆಂಬುದು ಬಹುಕಾಲದ ಬೇಡಿಕೆಯಾಗಿತ್ತು. ಮಕ್ಕಳಿಗೆ ಮೂಲಸೌಕರ್ಯ ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಮಂಡಲ ಮಾಜಿ ಅಧ್ಯಕ್ಷ ಶೈಲೇಶ್ ಕುಮಾರ್ ಮಾತನಾಡಿ, ಶಾಸಕ ಡಾ. ಎಂ. ಚಂದ್ರಪ್ಪ ಅವರು ಶಾಲಾ ಕೊಠಡಿಗಳ ನಿರ್ಮಾಣ, ಮಕ್ಕಳಿಗೆ ಬಸ್ ಸೌಲಭ್ಯ, ಕೆರೆ ಹೂಳೆತ್ತಿಸುವ, ನಿರಂತರ ವಿದ್ಯುತ್ ನೀಡುವಂತಹ ಕಾಮಗಾರಿಗಳನ್ನು ಕೈಗೊಂಡಿದ್ದಾರೆ. 25 ವರ್ಷ ಗ್ರಾಮೀಣ ಜನರೊಂದಿಗೆ ಬೆರೆತು ಕೆಲಸ ಮಾಡಿದ ಅನುಭವಕ್ಕೆ ಅವರಿಗೆ ಡಾಕ್ಟರೇಟ್ ಗೌರವವೂ ದೊರೆತಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮಕ್ಕೆ ಮುನ್ನ ಶಾಲಾ ಮಕ್ಕಳಿಂದ ಪ್ರಾರ್ಥನೆ ನಡೆಯಿತು. ಪಿ. ಕುಮಾರ್ ಸ್ವಾಗತಿಸಿದರು.
ಯುವ ಬಿಜೆಪಿ ಮುಖಂಡ ಡಿ.ಎಸ್. ಪ್ರವೀಣ್, ಗ್ರಾಪಂ ಅಧ್ಯಕ್ಷೆ ರೇಣುಕಮ್ಮ, ಬಿಇಒ ಗಿರಿಜಾ, ತಾಪಂ ಮಾಜಿ ಸದಸ್ಯ ಕಲ್ಲೇಶ್, ಎಸ್‌ಡಿಎಂಸಿ ಅಧ್ಯಕ್ಷ ಆರ್. ರುದ್ರೇಶ್, ಗ್ರಾಪಂ ಸದಸ್ಯರಾದ ರಂಗಪ್ಪ, ಕೆ.ಎನ್. ರಾಮಪ್ಪ, ರಾಜಣ್ಣ, ತಿಪ್ಪಣ್ಣ, ವನಜಾಕ್ಷಮ್ಮ, ಹನುಮಂತಪ್ಪ, ಕೆ.ಇ. ರಾಜಣ್ಣ, ಉಪ ತಹಸೀಲ್ದಾರ್ ವನಜಾ, ಪಿಡಿಒ ಮಧುರ, ಮುಖ್ಯ ಶಿಕ್ಷಕಿ ಜಿ.ಸಿ. ವೀಣಾ, ಮುಖಂಡರಾದ ಕೆ.ಎಂ. ರುದ್ರಪ್ಪ, ಪಾಂಡುರಂಗಪ್ಪ, ಪಣಿಯಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net