ಗ್ರಾಮೀಣ ಸರ್ಕಾರಿ ಶಾಲೆಗಳ ಮುಚ್ಚುವ ಹುನ್ನಾರ

ಚಳ್ಳಕೆರೆ ಬಿಇಒ ಕಚೇರಿ ಆವರಣದಲ್ಲಿ ಗುರುವಾರ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಶಾಲೆಗಳ ವಿಲೀನಗೊಳಿಸುವ ಮ್ಯಾಗ್ನೆಟ್ ಯೋಜನೆ ರದ್ದು ಪಡಿಸುವಂತೆ ಬಿಇಒ ಕೆ.ಎಸ್. ಸುರೇಶ್ ಅವರಿಗೆ ಮನವಿ ಸಲ್ಲಿಸಿದರು. ಜೆ. ಯಾದವರೆಡ್ಡಿ, ಮಹಂತೇಶ್, ಕೆ. ಈರಣ್ಣ, ಅಭಿಷೇಕ್, ಚಿಕ್ಕಣ್ಣ, ನಾಗೇಂದ್ರ ಇದ್ದರು.
ಚಳ್ಳಕೆರೆ ಬಿಇಒ ಕಚೇರಿ ಆವರಣದಲ್ಲಿ ಗುರುವಾರ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಶಾಲೆಗಳ ವಿಲೀನಗೊಳಿಸುವ ಮ್ಯಾಗ್ನೆಟ್ ಯೋಜನೆ ರದ್ದು ಪಡಿಸುವಂತೆ ಬಿಇಒ ಕೆ.ಎಸ್. ಸುರೇಶ್ ಅವರಿಗೆ ಮನವಿ ಸಲ್ಲಿಸಿದರು. ಜೆ. ಯಾದವರೆಡ್ಡಿ, ಮಹಂತೇಶ್, ಕೆ. ಈರಣ್ಣ, ಅಭಿಷೇಕ್, ಚಿಕ್ಕಣ್ಣ, ನಾಗೇಂದ್ರ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರದ ವಿರುದ್ಧ ಜೆ. ಯಾದವರೆಡ್ಡಿ ಆರೋಪ
  • ಸ್ಕೂಲ್‌ಗಳ ವಿಲೀನ ಖಂಡಿಸಿ ಚಳ್ಳಕೆರೆಯಲ್ಲಿ ಪ್ರತಿಭಟನೆ
ಚಳ್ಳಕೆರೆ: ಸರ್ಕಾರ ಕೆಪಿಎಸ್ ಶಾಲೆಗಳನ್ನು ಆರಂಭಿಸಿ ಗ್ರಾಮೀಣ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆಸಿದೆ ಎಂದು ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಜಿಲ್ಲಾಧ್ಯಕ್ಷ ಜೆ. ಯಾದವರೆಡ್ಡಿ ಆರೋಪಿಸಿದರು.
ನಗರದ ಬಿಇಒ ಕಚೇರಿ ಆವರಣದಲ್ಲಿ ಗುರುವಾರ ಎಐಡಿಎಸ್‌ಒ ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಸಹಯೋಗದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ 70 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಕೇವಲ ಅತಿಥಿ ಶಿಕ್ಷಕರನ್ನು ನೇಮಸಿಕೊಂಡು ಸರ್ಕಾರಿ ಶಾಲೆಗಳನ್ನು ಅತಂತ್ರ ಸ್ಥಿತಿಗೆ ದೂಡಲಾಗುತ್ತಿದೆ. ಕೆಪಿಎಸ್ ಶಾಲೆಗಳ ಹೆಸರಲ್ಲಿ ಹಳ್ಳಿಗಳ ಸರ್ಕಾರಿ ಸ್ಕೂಲ್ಗಳ ಅಸ್ತಿತ್ವ ನಾಶ ಮಾಡಲಾಗುತ್ತಿದೆ. ಇಡೀ ರಾಜ್ಯದ 40 ಸಾವಿರ ಹಳ್ಳಿಗಳಲ್ಲಿ ಶಾಲೆಗಳನ್ನು ಮುಚ್ಚಲು ಸರ್ಕಾರ ಮುಂದಾಗಿದೆ. ಇದರಿಂದ ಹಳ್ಳಿಗಳ ಮಕ್ಕಳು ಶಿಕ್ಷಣದಿಂದ ವಂಚಿತರಾಗಲಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಬಡ ಕುಟುಂಬದ ಮತ್ತು ಗ್ರಾಮೀಣ ಮಕ್ಕಳನ್ನು ಮತ್ತೆ ಜೀತ ಪದ್ಧತಿಗೆ ತಳ್ಳುವ ಕೆಲಸವಾಗುತ್ತಿದೆ. ಮ್ಯಾಗ್ನೆಟ್ ಯೋಜನೆಯಿಂದ ಹತ್ತಾರು ಹಳ್ಳಿಗಳ ಶಾಲೆಗಳನ್ನು ವಿಲೀನ ಮಾಡುವುದನ್ನು ಕೈಬಿಡಬೇಕು. ಇಲ್ಲದಿದ್ದಲ್ಲಿ ಶಾಲೆಗಳನ್ನು ಉಳಿಸಿಕೊಳ್ಳಲು ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಎಐಡಿಎಸ್‌ಒ ರಾಜ್ಯ ಕಾರ್ಯದರ್ಶಿ ಮಹಂತೇಶ್ ಮಾತನಾಡಿ, ಕೆಪಿಎಸ್ ಶಾಲೆ ಹೆಸರಲ್ಲಿ ಅಂಗನವಾಡಿ ವ್ಯವಸ್ಥೆಗೆ ದಕ್ಕೆ ತರಲು ಸರ್ಕಾರ ಮುಂದಾಗಿದೆ. ಕೆಪಿಎಸ್ ಶಾಲೆ ಆರಂಭಿಸುವ ಮೂಲಕ ಶಿಕ್ಷಣವನ್ನು ಖಾಸಗೀಕರಣ ಮಾಡುವ ಹುನ್ನಾರ ಇದೆ. ಸುಸಜ್ಜಿತ ಶಾಲೆ ಕಟ್ಟಿದರೆ ಸಾಲದು, ಮೂಲ ಸೌಕರ್ಯ ಮತ್ತು ಅಗತ್ಯ ಶಿಕ್ಷಕರನ್ನು ನೇಮಕಾತಿ ಮಾಡಬೇಕು ಎಂದರು.
ಈಗಾಗಲೇ ರಾಮಜೋಗಿಹಳ್ಳಿಯಲ್ಲಿ ಆರಂಭಿಸಿರುವ ಕೆಪಿಎಸ್ ಶಾಲೆಗೆ ಕರೇಕಾಟ್ಲಹಟ್ಟಿ, ಜನ್ನೇನಹಳ್ಳಿ, ಲಂಬಾಣಿ ಹಟ್ಟಿ, ಹೊಸ ಮುಚ್ಚಗುಂಟೆ, ನಲಜಾವನಹಟ್ಟಿ ಹಾಗೂ ಸುತ್ತಮುತ್ತಲಿನ ಶಾಲೆಗಳ ವಿಲೀನ ಕೈಬಿಡಬೇಕು. ಕೆಪಿಎಸ್ ಶಾಲೆ ಕುರಿತು ಹಳ್ಳಿಗಳಿಗೆ ಪ್ರಚಾರಕ್ಕೆ ಬರಬಾರದು. ಕೆಪಿಎಸ್ ಶಾಲೆ ದಾಖಲಾತಿಗೆ ಪಾಲಕರನ್ನು ಒತ್ತಾಯಿಸಬಾರದು. ಗ್ರಾಮೀಣ ಸರ್ಕಾರಿ ಶಾಲೆಗಳಿಗೆ ಅಗತ್ಯ ಮೂಲ ಸೌಕರ್ಯ ಮತ್ತು ಶಿಕ್ಷಕರನ್ನು ನಿಯೋಜಿಸಿ ಉಳಿಸುವ ಪ್ರಯತ್ನ ಮಾಡಬೇಕು. ಇಲ್ಲದಿದ್ದಲ್ಲಿ ಸರ್ಕಾರದ ವಿರುದ್ಧ ಹೋರಾಟ ರೂಪಿಸುತ್ತೇವೆ ಎಂದು ಎಚ್ಚರಿಸಿದರು.
ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಕೆ. ಚಿಕ್ಕಣ್ಣ, ಅಭಿಷೇಕ್, ಚಿಕ್ಕಣ್ಣ, ನಾಗೇಂದ್ರ, ಗಿರೀಶ್, ರಂಗಸ್ವಾಮಿ, ಸಂತೋಷ, ರತ್ನಮ್ಮ, ಪಾಪಮ್ಮ ಇದ್ದರು.
ಪೋಟೋ: ಸಿಎಲ್ಕೆ ಎಐಡಿಎಸ್‌ಒ 11
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net