PDO: ಕೇಂದ್ರ ಸ್ಥಾನದಲ್ಲಿದ್ದು ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಿ

PDO: ಹೊಸದುರ್ಗದ ತಾಪಂ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಗ್ರಾಪಂ ಪಿಡಿಒಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಶಾಸಕ ಬಿ.ಜಿ. ಗೋವಿಂದಪ್ಪ ಮಾತನಾಡಿದರು.
PDO: ಹೊಸದುರ್ಗದ ತಾಪಂ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಗ್ರಾಪಂ ಪಿಡಿಒಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಶಾಸಕ ಬಿ.ಜಿ. ಗೋವಿಂದಪ್ಪ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಬಿ.ಜಿ. ಗೋವಿಂದಪ್ಪ ತಾಕೀತು
  • ಪಿಡಿಒಗಳ ಪ್ರಗತಿ ಪರಿಶೀಲನಾ ಸಭೆ
  • ಕೆಲಸದಲ್ಲಿ ಅನಗತ್ಯ ವಿಳಂಬ ಧೋರಣೆ ಅನುಸರಿಸುತ್ತಾರೆ ಎನ್ನುವ ಆರೋಪ
ಹೊಸದುರ್ಗ: ಗ್ರಾಮೀಣ ಜನರ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ಜವಾಬ್ದಾರಿ ಹೊತ್ತಿರುವ ಪಿಡಿಒ pdo ಗಳು ಗ್ರಾಪಂ ಕೇಂದ್ರ ಸ್ಥಾನದಲ್ಲಿದ್ದು ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಶಾಸಕ ಬಿ.ಜಿ. ಗೋವಿಂದಪ್ಪ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಹುತೇಕ ಗ್ರಾಪಂ ಪಿಡಿಒಗಳು ಜನರ ಕೈಗೆ ಸಿಗುವುದಿಲ್ಲ, ಕೆಲಸದಲ್ಲಿ ಅನಗತ್ಯ ವಿಳಂಬ ಧೋರಣೆ ಅನುಸರಿಸುತ್ತಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಇನ್ನು ಮುಂದೆ ಇದಕ್ಕೆ ಅವಕಾಶ ನೀಡದೆ ಕಚೇರಿ ವೇಳೆಯಲ್ಲಿ ಪಂಚಾಯಿತಿಯಲ್ಲಿದ್ದು ಜನರ ಕೆಲಸ ಮಾಡಬೇಕು. ಜನರನ್ನು ಕಚೇರಿಗಳಿಗೆ ಅಲೆದಾಡಿಸದೆ ಸರಿಯಾದ ಮಾಹಿತಿ ನೀಡಬೇಕು ಎಂದು ತಾಕೀತು ಮಾಡಿದರು.
ತಾಲೂಕಿನಲ್ಲಿ ಜೆಜೆಎಂ ಕುಡಿವ ನೀರಿನ ಕಾಮಗಾರಿ ಕುರಿತು ವ್ಯಾಪಕ ದೂರುಗಳಿವೆ. ಕಾಮಗಾರಿ ಕಳಪೆಯಾಗಿರುವ ಹಾಗೂ ಸಮರ್ಪಕವಾಗಿ ಅನುಷ್ಠಾನಗೊಳ್ಳದಿರುವ ಕುರಿತು ದೂರುಗಳಿವೆ. ಕಾಮಗಾರಿ ಪೂರ್ಣಗೊಳಿಸುವ ಹೊಣೆ ಅಧಿಕಾರಿಗಳ ಮೇಲಿದೆ ಎಂದರು.
ಅಧಿಕಾರಿಗಳು ಸ್ಥಳಕ್ಕೆ ತೆರಳಿ ಕಾಮಗಾರಿ ಪರಿಶೀಲಿಸಿ ಗುತ್ತಿಗೆದಾರರಿಂದ ಕೆಲಸ ತೆಗೆದುಕೊಳ್ಳಬೇಕು. ಕೆಲಸ ಪೂರ್ಣವಾಗದೆ ಕಾಮಗಾರಿ ಹಣ ಪಾವತಿಸಿದರೆ ಅಧಿಕಾರಿಗಳೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆ ಪಂಪ್‌ಸೆಟ್‌ಗಳಿಗೆ ಸಂಪರ್ಕ ಕಲ್ಪಿಸಲು ಬೆಸ್ಕಾಂ ಮುಂಗಡವಾಗಿ ಹಣ ಪಾವತಿಸುವಂತೆ ಸೂಚಿಸುತ್ತಿರುವುದು ಸರಿಯಲ್ಲ. ಸರ್ಕಾರ ಬೆಸ್ಕಾಂಗೆ ಹಣ ಪಾವತಿಸುತ್ತದೆ. ಆದರೆ, ಮುಂಗಡವಾಗಿ ಹಣ ನೀಡಿದರೆ ಮಾತ್ರ ಸಂಪರ್ಕ ನೀಡುತ್ತೇವೆನ್ನುವ ಧೋರಣೆ ಸರಿಯಲ್ಲ. ಕೂಡಲೇ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಸಮಸ್ಯೆ ಎದುರಾಗುವ ಸಂಭವವಿದೆ ಎಂದು ಎಚ್ಚರಿಸಿದರು.

ಉಂಡಾಡಿ ಗುಂಡ

ಗ್ರಾಪಂಗಳಲ್ಲಿ ಪಿಡಿಒಗಳು ಸರಿಯಾಗಿ ಕೆಲಸ ಮಾಡದೆ ಉಂಡಾಡಿ ಗುಂಡರಂತೆ ವರ್ತಿಸುತ್ತಿದ್ದಾರೆ. ಕಳೆದ ಎರಡೂವರೆ ವರ್ಷಗಳಿಂದ ಪಂಚಾಯತ್ ರಾಜ್ ಇಲಾಖೆ ನಿಷ್ಕ್ರಿಯವಾಗಿದೆ. ಗ್ರಾಮೀಣ ಪ್ರದೇಶದ ವಸತಿರಹಿತರಿಗೆ ಸೂರು ಕಲ್ಪಿಸಿ ಕೊಡುವ ಚಿಂತನೆ ಇಲ್ಲದಂತಾಗಿದೆ. ಗ್ರಾಪಂಗಳ ವ್ಯಾಪ್ತಿಯಲ್ಲಿ ಲಭ್ಯವಿರುವ ಸರ್ಕಾರಿ ಜಾಗದಲ್ಲಿ ವಸತಿಗೆ ಬಡಾವಣೆಗಳ ನಿರ್ಮಾಣಕ್ಕೆ ಯಾವುದೇ ಪಿಡಿಒ ಮುಂದಾಗಿಲ್ಲ. ಒಬ್ಬ ಪಿಡಿಒ ಕೂಡ ಜಾಗ ಮಂಜೂರಾತಿಗೆ ನನಗೆ ಮನವಿ ಮಾಡಿಲ್ಲ. ಪಿಡಿಒಗಳು ಸೂರು ಕಲ್ಪಿಸುವ ಕೆಲಸ ಪ್ರಾಮಾಣಿಕವಾಗಿ ಮಾಡಬೇಕು ಎಂದು ಶಾಸಕರು ತಾಕೀತು ಮಾಡಿದರು.
ತಾಪಂ ಇಒ ಸುನಿಲ್‌ಕುಮಾರ್, ಗ್ಯಾರೆಂಟಿ ಸಮಿತಿ ಅಧ್ಯಕ್ಷ ಮಹಮ್ಮದ್ ಇಸ್ಮಾಯಿಲ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net