ಚಿತ್ರದುರ್ಗ: ಕಡಿಮೆ ಬಡ್ಡಿ ದರದಲ್ಲಿ ನೂರಾರು ಕೋಟಿ ರೂ. ಸಾಲ ಕೊಡಿಸುತ್ತೇವೆಂದು ಜನರನ್ನು ವಂಚಿಸುತ್ತಿದ್ದ ಆರೋಪಿಗಳಾದ ನಗರದ ಎನ್. ಚಂದ್ರಶೇಖರ್ ಹಾಗೂ ಮಂಗಳೂರಿನ ರೋಷನ್‌ಸಲ್ಡಾನ ವಿರುದ್ಧ ಹೊಸ ಕಾಯ್ದೆಗಳನ್ನು ಬಳಸಿಕೊಂಡು ಪ್ರಕರಣ ದಾಖಲಿಸಿ ವಿಚಾರ ಣೆ ತೀವ್ರಗೊಳಿಸುವುದಾಗಿ ಎಸ್.ಪಿ. ರಂಜಿತ್‌ಕುಮಾರ್‌ಬAಡಾರು ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹಲವು ವರ್ಷಗಳಿಂದ ಮನಿ ಡಬ್ಲಿಂಗ್ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಆರೋಪಿ ಚಂದ್ರಶೇಖರ್, ಈಚಿನ ವರ್ಷಗಳಲ್ಲಿ ರೋಷನ್‌ಸಲ್ಡಾನನೊಂದಿಗೆ ಕಡಿಮೆ ದರದಲ್ಲಿ ನೂರು ಕೋಟಿ ರೂ.ವರೆಗೆ ಸಾಲ ಕೊಡಿಸುವುದಾಗಿ ಜನರನ್ನು ನಂಬಿಸುತ್ತಿದ್ದರು. ಚಂದ್ರಶೇಖರ್ ಫೈನ್ಸಾನ್ಸಿಯರ್ ಹಾಗೂ ಸಲ್ಡಾನ್ ಕನ್ಸಲ್ಟೆಂಟ್ ರೀತಿ ವರ್ತಿಸುತ್ತಾ ಜನರನ್ನು ಯಾಮಾರಿಸುತ್ತಿದ್ದರು.
ಆಡ್ವಾನ್ಸ್ ಇಂಟ್ರೆಸ್ಟ್ ಇತ್ಯಾದಿ ಹೆಸರಲ್ಲಿ ಜನರಿಂದ ಹಣ ಪಡೆದ ಬಳಿಕ ಅವರ ಕೈಗೆ ಆರೋಪಿತರು ಸಿಗುತ್ತಿರಲಿಲ್ಲ. ಮಂಗಳವಾರ ಬೆಂಗಳೂರಿನವರೊಬ್ಬರು ದೂರು ದಾಖಲಿಸಿದ್ದಾರೆ. ಮಹಾರಾಷ್ಟç, ಗೋವಾ, ಕೇರಳ, ಆಂಧ್ರಪ್ರದೇಶ ಮೊದಲಾದ ರಾಜ್ಯಗಳ ಜನರು ಮೋಸ ಹೋಗಿದ್ದಾರೆ.
ಇನ್ನೂ ಹಲವರು ಪ್ರಕರಣ ದಾಖಲಿಸಲು ಮುಂದೆ ಬರುತ್ತಿದ್ದಾರೆ. ಹೊಸ ಕಾಯ್ದೆಗಳ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ನಡೆಸಿ ದರೆ ಕಳೆದುಕೊಂಡಿರುವ ಹಣವನ್ನು ನೊಂದವರು ಮರಳಿ ಪಡೆಯಲು ಅವಕಾಶವಿದೆ. ಆದ್ದರಿಂದ ಹಣ ಕಳೆದುಕೊಂಡವರು ಶೀಘ್ರ ದೂರು ಕೊಡಬೇಕೆಂದು ಮನವಿ ಮಾಡಿದರು.
ವಂಚನೆ ಪ್ರಕರಣಗಳ ತನಿಖೆಯಲ್ಲಿ ಪೊಲೀಸರು ಲೋಪ ಎಸಗಿದ್ದಾರೆಯೇ ಎಂಬುದರ ಕುರಿತಂತೆ ಎಎಸ್‌ಪಿ ಡಾ. ಶಿವಕುಮಾರ್ ವಿಚಾರಣೆ ನಡೆಸುತ್ತಿದ್ದಾರೆ. ಅವರ ತನಿಖಾ ವರದಿ ಕೈ ಸೇರಿದ ಬಳಿಕ, ಪೊಲೀಸರು ತಪ್ಪೆಸಗಿದ್ದರೆ ಕ್ರಮ ಜರಗಿಸಲಾಗುವುದು ಎಂದು ಎಸ್‌ಪಿ ಹೇಳಿದರು.