ಕೈಕೊಟ್ಟ ಮುಂಗಾರು ಮಳೆ, ಕೃಷಿ ಚಟುವಟಿಕೆ ಬಹುತೇಕ ಸ್ಥಗಿತ Rain

ಭರಮಸಾಗರ ಹೋಬಳಿಯಲ್ಲಿ ಮಳೆಯ ಕೊರತೆಯಿಂದ ಬಾಡಿ ಹೋಗುತ್ತಿರುವ ಬೆಳೆ. Rain
ಭರಮಸಾಗರ ಹೋಬಳಿಯಲ್ಲಿ ಮಳೆಯ ಕೊರತೆಯಿಂದ ಬಾಡಿ ಹೋಗುತ್ತಿರುವ ಬೆಳೆ. Rain
Published on

ಪ್ರಮುಖ ಮುಖ್ಯಾಂಶಗಳು

  • ಮನೆಯಲ್ಲೇ ಉಳಿದ ಬಿತ್ತನೆ ಬೀಜ, ರಸಗೊಬ್ಬರ
  • ತೋಟಗಾರಿಕೆ ಬೆಳೆ ಉಳಿಸಿಕೊಳ್ಳಲು ರೈತರ ಹರಸಾಹಸ
ಸಿ.ಎಂ. ನಾಡಿಗೇರ್, ಭರಮಸಾಗರ
ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟ ಪರಿಣಾಮ ಹೋಬಳಿ ವ್ಯಾಪ್ತಿಯಲ್ಲಿ ಕೃಷಿ ಚಟುವಟಿಕೆ ಬಹುತೇಕ ಸ್ಥಗಿತಗೊಂಡಿದೆ. ಬಿತ್ತನೆಗೆ ಸಾಲ ಮಾಡಿ ಕೂಡಿಟ್ಟುಕೊಂಡ ಬಿತ್ತನೆ ಬೀಜ, ಗೊಬ್ಬರ ಮನೆಯಲ್ಲೇ ಉಳಿದಿವೆ. ಈಗಾಗಲೇ ಬಿತ್ತಿದ ಬೆಳೆಗಳು ಮೊಳಕೆ ಹಂತದಲ್ಲೇ ಬಾಡಿ ಹೋಗುತ್ತಿವೆ. Rain
ಮೇ ತಿಂಗಳಲ್ಲಿ ಸುರಿಯಬೇಕಾಗಿದ್ದ ಕೃತಿಕಾ, ರೋಹಿಣಿ, ಜೂನ್‌ನಲ್ಲಿ ಬರಬೇಕಾಗಿದ್ದ ಮೃಗಶಿರ, ಆರಿದ್ರಾ, ಪುನರ್ವಸು ಮಳೆಗಳು ಕೈಕೊಟ್ಟಿವೆ. ಈಗ ರೈತರು ಜುಲೈ ಅಂತ್ಯದ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಮುಂಬರುವ ಮಳೆಗಳಾದರೂ ಕೈಹಿಡಿಯಲಿ ಎನ್ನುವ ಆಶಾ ಭಾವನೆ ಗ್ರಾಮೀಣರದ್ದಾಗಿದೆ.
ಒಂದು ಕಾಲದಲ್ಲಿ ಕೆರೆಗಳು ತುಂಬಿ ಅಂತರ್ಜಲ ಮಟ್ಟ ಏರಿಕೆಯಾಗಿ ಅನೇಕ ರೈತರು ಅಡಿಕೆ ಸೇರಿ ತೋಟಗಾರಿಕೆ ಬೆಳೆಗಳ ಮೊರೆ ಹೋಗಿದ್ದರು. ಆದರೆ, ಈ ಬಾರಿ ಮಳೆ ಕೊರತೆ, ಕೊಳವೆ ಬಾವಿಗಳಲ್ಲಿ ನೀರಿನ ಅಭಾವ, ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ತೋಟಗಳನ್ನು ಉಳಿಸಿಕೊಳ್ಳುವುದೇ ಸವಾಲಾಗಿದೆ. ರೈತರು ಟ್ಯಾಂಕರ್ ಮೂಲಕ ನೀರು ತಂದು ಸ್ಪ್ರಿಂಕ್ಲರ್ ಅಳವಡಿಸಿ ಬೆಳೆ ಉಳಿಸಿಕೊಳ್ಳುವ ಯತ್ನದಲ್ಲಿದ್ದಾರೆ. ಆದರೂ ಅಡಿಕೆ ಗಿಡಗಳಲ್ಲಿ ಹರಳು ಉದುರುತ್ತಿದ್ದು, ನಷ್ಟ ಉಂಟಾಗುವ ಆತಂಕ ಎದುರಾಗಿದೆ.
ಅಲ್ಪ ನೀರಿನಲ್ಲಿ ಬೆಳೆದ ಟೊಮ್ಯಾಟೊ, ಮೆಣಸಿನಕಾಯಿ ಮತ್ತಿತರ ತರಕಾರಿ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ತ್ತಮ ಬೆಲೆ ಸಿಗುತ್ತಿಲ್ಲ. ಒಂದೆಡೆ ಮಳೆ ಇಲ್ಲ, ಮತ್ತೊಂದೆಡೆ ಬೆಲೆ ಇಲ್ಲದ ಕಾರಣ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇನ್ನು ಶೇಕಡ 7.5 ಬಿತ್ತನೆ ಆಗಬೇಕಾಗಿದೆ: ಭರಮಸಾಗರ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯ ಸಿರಿಗೆರೆ ಹಾಗೂ ಬ್ಯಾಲಹಾಳು ಭಾಗದ ಐದು ಪಂಚಾಯಿತಿಗಳಲ್ಲಿ ಮಾತ್ರ ಸ್ವಲ್ಪ ಪ್ರಮಾಣದ ಮಳೆಯಾಗಿ ಸೀಮಿತ ಬಿತ್ತನೆ ನಡೆದಿದೆ. ಭರಮಸಾಗರ, ಇಸಾಮುದ್ರ ಹಾಗೂ ಕೊಗುಂಡೆ ಭಾಗದ 5 ಪಂಚಾಯಿತಿಗಳಲ್ಲಿ ಸಮರ್ಪಕ ಮಳೆಯಿಲ್ಲದ ಕಾರಣ ಬಹುತೇಕ ಬಿತ್ತನೆಯಾಗಿಲ್ಲ. ಪ್ರತಿ ವರ್ಷ ಈ ವೇಳೆಗೆ ಶೇ. 80ರಷ್ಟು ಮೆಕ್ಕೆಜೋಳ ಬಿತ್ತನೆ ಪೂರ್ಣಗೊಳ್ಳುತ್ತಿತ್ತು. ಈ ಬಾರಿ ಕೇವಲ 150 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ. 28 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆ ಶೂನ್ಯವಾಗಿದೆ ಎಂದು ಸಹಾಯಕ ಕೃಷಿ ಅಧಿಕಾರಿ ವನಜಾ ತಿಳಿಸಿದ್ದಾರೆ.
ಮಳೆಗಾಗಿ ದೇವರ ಮೊರೆ: ಮಳೆಗಾಗಿ ಭರಮಸಾಗರ, ಬ್ಯಾಲಹಾಳು ಸೇರಿ ಹಲವು ಗ್ರಾಮಗಳಲ್ಲಿ ವಿಶೇಷ ಪೂಜೆ, ದಾಸೋಹ, ಭಜನೆ ಹಾಗೂ ಜಾನಪದ ಆಚರಣೆಗಳು ನಿರಂತರ ನಡೆಯುತ್ತಿವೆ. ಬ್ಯಾಲಹಾಳು ಗ್ರಾಮದಲ್ಲಿ ಗ್ರಾಮಸ್ಥರು ಮಳೆ ಮಲ್ಲಪ್ಪನ ಪೂಜೆ, ಗಂಗಾ ಕಲಶ ಮೆರವಣಿಗೆ ನೆರವೇರಿಸಿ ಮಳೆರಾಯನನ್ನು ಪ್ರಾರ್ಥಿಸಿದ್ದಾರೆ.

ಈ ಬಾರಿ ಪ್ರಕೃತಿ ಮುನಿಸಿಕೊಂಡಿದೆ. ಸರ್ಕಾರ ಹಾಗೂ ಜಿಲ್ಲಾಡಳಿತ ತಕ್ಷಣ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬರಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಬೇಕು.

— ಲೋಲಾಕ್ಷಮ್ಮ ರೈತ ಮಹಿಳೆ

ರಸಗೊಬ್ಬರ, ಬಿತ್ತನೆ ಬೀಜಗಳಿಗೆ ಸರ್ಕಾರವೇ ಬೆಲೆ ನಿಗದಿ ಮಾಡುತ್ತದೆ. ಆದರೆ, ರೈತ ಬೆಳೆದ ಬೆಳೆಗೆ ಹಾಗೂ ಅವನ ಶ್ರಮಕ್ಕೆ ನ್ಯಾಯಯುತ ಬೆಲೆ ಸಿಗದಿರುವುದು ವಿಪರ್ಯಾಸ. ಸರ್ಕಾರ ಕೂಡಲೇ ಬರಗಾಲ ಘೋಷಿಸಿ ರೈತರ ನೆರವಿಗೆ ಬರಬೇಕು.

— ಪ್ರಭು ಪ್ರಗತಿಪರ ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net