ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಶಾಸಕರ ಸಹಕಾರ ಅನನ್ಯ

ಚಿಕ್ಕಜಾಜೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಸರ್ಕಲ್ ಶಾಲೆ) ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಶಾಸಕ ಎಂ. ಚಂದ್ರಪ್ಪ ಉದ್ಘಾಟಿಸಿದರು. ಡಿ.ಸಿ. ಮೋಹನ್, ಬಿಇಒ ಶ್ರೀನಿವಾಸ್ ಇತರರಿದ್ದರು.
ಚಿಕ್ಕಜಾಜೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಸರ್ಕಲ್ ಶಾಲೆ) ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಶಾಸಕ ಎಂ. ಚಂದ್ರಪ್ಪ ಉದ್ಘಾಟಿಸಿದರು. ಡಿ.ಸಿ. ಮೋಹನ್, ಬಿಇಒ ಶ್ರೀನಿವಾಸ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಿಇಒ ಶ್ರೀನಿವಾಸ್ ಹೇಳಿಕೆ
  • ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೌಲಭ್ಯ
ಚಿಕ್ಕಜಾಜೂರು: ಶಿಕ್ಷಣ ಪ್ರೇಮಿ ಶಾಸಕ ಡಾ.ಎಂ. ಚಂದ್ರಪ್ಪ ಅವರು ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿರುವುದರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಲು ಸಾಧ್ಯವಾಗಿದೆ ಎಂದು ಬಿಇಒ ಶ್ರೀನಿವಾಸ್ ಹೇಳಿದರು.
ಚಿಕ್ಕಜಾಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೇವೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೊಳಲ್ಕೆರೆ ತಾಲೂಕಿನಲ್ಲೇ ಅತಿಹೆಚ್ಚು ಶಾಲೆಗಳು ಚಿಕ್ಕಜಾಜೂರಿನಲ್ಲಿವೆ. ನುರಿತ ಶಿಕ್ಷಕರಿದ್ದು, ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಕಳೆದ ಬಾರಿ 10ನೇ ತರಗತಿಯಲ್ಲಿ 2765 ವಿದ್ಯಾರ್ಥಿಗಳಲ್ಲಿ 2705 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಶಾಸಕರು ನಗದು ಬಹುಮಾನ ನೀಡುತ್ತಿರುವುದು, ವಿದ್ಯಾರ್ಥಿಗಳಿಗೆ ಸಾರಿಗೆ ಸೌಕರ್ಯ ಕಲ್ಪಿಸಿರುವುದು ಶ್ಲಾಘನೀಯ ಎಂದರು.
ಇದೇ ವೇಳೆ ಗ್ರಾಮದಲ್ಲಿ ನಿರ್ಮಿಸಿರುವ ಸಿಸಿ ರಸ್ತೆಯನ್ನು ಉದ್ಘಾಟಿಸಿದರು. ಆಂಜನೇಯ ಸ್ವಾಮಿ ಹಳೇ ದೇವಸ್ಥಾನದ ಪುನರ್ ನಿರ್ಮಾಣ, ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೌಲಭ್ಯಕ್ಕೆ ಶಾಸಕರು ಚಾಲನೆ ನೀಡಿದರು.
ಗ್ರಾಮದ ಈಡಿಗರ ಓಬಳಸ್ವಾಮಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 10 ಕೋಟಿ ರೂ. ಅನುದಾನ, ಜನತಾ ಕಾಲನಿಯ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ, ಸರ್ಕಲ್ ಹಿರಿಯ ಪ್ರಾಥಮಿಕ ಶಾಲೆಗಳಿಗೆ ತಲಾ ಎರಡು ಕೊಠಡಿಗಳನ್ನು ನಿರ್ಮಿಸಲು ಅನುದಾನ ನೀಡುವುದಾಗಿ ತಿಳಿಸಿದರು.
ಬಿ. ದುರ್ಗ, ಹಿರೇಕಂದವಾಡಿ, ಹಿರೇಎಮ್ಮಿಗನೂರು, ಕೊಡಗವಳ್ಳಿಹಟ್ಟಿ ಶಾಲೆಗಳ ಅಭಿವೃದ್ಧಿಗೆ ತಲಾ 10 ಕೋಟಿ ರೂ. ಅನುದಾನ ನೀಡಲಾಗಿದೆ. ಹೊಳಲ್ಕೆರೆಯಲ್ಲಿ ಎರಡು ಕೋಟಿ ರೂ. ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣ, 18 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಸ್ಟೇಡಿಯಂ ನಿರ್ಮಿಸಲು ಅನುದಾನ ನೀಡಿದ್ದೇನೆ. ಕ್ಷೇತ್ರದ 493 ಹಳ್ಳಿಗಳಲ್ಲಿ ಒಂದಿಲ್ಲೊಂದು ಕೆಲಸ ಮಾಡುವ ಮೂಲಕ ಸಾಮಾಜಿಕ ನ್ಯಾಯ ಕೊಟ್ಟಿರುವೆ ಎಂದರು.
ತಾಲೂಕಿನಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಆಸ್ಪತ್ರೆಗಳನ್ನು ನಿರ್ಮಿಸಲಾಗಿದೆ. ಚಿಕ್ಕಜಾಜೂರಿನ ಮುಖ್ಯ ರಸ್ತೆಯಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಮಳಿಗೆಗೆಳನ್ನು ನಿರ್ಮಿಸಲಾಗಿದೆ ಎಂದರು.
ಹಾಸ್ಟೆಲ್, ಬೀದಿ ದೀಪಕ್ಕೆ ಮನವಿ: ಇದೇ ವೇಳೆ ಗ್ರಾಮದ ವಾಯು ವಿಹಾರಿ ಸಂಘದ ಅಧ್ಯಕ್ಷ ಜಿ. ನಟರಾಜ್ ಹಾಗೂ ಸದಸ್ಯರು ಗ್ರಾಮದಲ್ಲಿ ಮೆಟ್ರಿಕ್ ನಂತರದ ಹಾಸ್ಟೆಲ್ ಆರಂಭಿಸಬೇಕು. ರೈಲ್ವೆ ಮೇಲು ಸೇತುವೆ ಮೇಲಿನ ರಸ್ತೆಗೆ ಬೀದಿ ದೀಪ ಅಳವಡಿಸಬೇಕೆಂದು ಮನವಿ ಸಲ್ಲಿಸಿದರು.
ಗ್ರಾಪಂ ಮಾಜಿ ಅಧ್ಯಕ್ಷ ಡಿ.ಸಿ. ಮೋಹನ್ ಮಾತನಾಡಿದರು. ಇಸಿಒ ಬಸವರಾಜಪ್ಪ, ಸಿಆರ್‌ಪಿ ನಯಾಜ್, ಪಿಡಿಒ ಜಯಪ್ಪ, ಗ್ರಾಪಂ ಮಾಜಿ ಅಧ್ಯಕ್ಷೆ ಅಂಜಲಿ ಮೋಹನ್, ಸದಸ್ಯರಾದ ಶ್ರೀಕಾಂತ್, ಜಮೀರ್ ಪಾಷಾ, ಆನಂದಪ್ಪ, ಎಸ್‌ಕೆಡಿಆರ್‌ಡಿಪಿ ಯೋಜನಾಧಿಕಾರಿ ಪ್ರಶಾಂತ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net