ಹಿರಿಯೂರಿನ ರೋಟರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ರೆಡ್‌ಕ್ರಾಸ್ ಸಂಸ್ಥೆಯ ಸರ್ವ ಸದಸ್ಯರ ಸಭೆಯಲ್ಲಿ ಗಾಯತ್ರಿ ಶಿವರಾಂ, ನಗರ ಸಭೆ ಮಾಜಿ ಸದಸ್ಯ ಜಿ. ಪ್ರೇಮ್‌ಕುಮಾರ್, ಎಂ.ಎಸ್. ರಾಘವೇಂದ್ರ, ವೆಂಕಟೇಶ್ ಇದ್ದರು.
ಹಿರಿಯೂರು: ಸಮಾಜಮುಖಿ ಕಾರ್ಯದಲ್ಲಿ ತೊಡಗುವವರಿಗೆ ಹೃದಯ ಶ್ರೀಮಂತಿಕೆ ಇರಬೇಕು ಎಂದು ನಗರಸಭೆ ಮಾಜಿ ಸದಸ್ಯ ಜಿ.ಪ್ರೇಮ್‌ಕುಮಾರ್ ಹೇಳಿದರು.
ನಗರದ ರೋಟರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.
ಮನುಷ್ಯ ಹುಟ್ಟುವಾಗ ಬಡತನವಿದ್ದರೂ, ದೇವರ ಅನುಗ್ರಹ, ಪರಿಶ್ರಮದಿಂದ ಹಣ ಸಂಪಾದಿಸಿದಾಗ ದುಡಿದ ಒಂದು ಭಾಗವನ್ನು ಸಮಾಜಮುಖಿ ಕಾರ್ಯಕ್ಕೆ ವಿನಿಯೋಗಿಸಬೇಕು. ಪ್ರಸ್ತುತ ಯುವಕರು ತಮ್ಮ ಜನ್ಮದಿನದ ನೆಪದಲ್ಲಿ ಲಕ್ಷಾಂತರ ರೂ. ವ್ಯರ್ಥವಾಗಿ ಖರ್ಚು ಮಾಡಿ ಮೋಜು ಮಸ್ತಿಯಲ್ಲಿ ತೊಡಗುತ್ತಾರೆ. ರೋಟರಿ, ರೆಡ್‌ಕ್ರಾಸ್ ಸಂಸ್ಥೆಗಳು ಸಮಾಜಕ್ಕಾಗಿ ನಿಸ್ವಾರ್ಥ ಸೇವೆ ಮಾಡುತ್ತಿದ್ದು, ಇಂತಹ ಸಂಸ್ಥೆಗಳ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.
ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಪತಿ ಗಾಯತ್ರಿ ಶಿವರಾಂ ಮಾತನಾಡಿ, ರೆಡ್‌ಕ್ರಾಸ್ ಸಂಸ್ಥೆ ಸಮಾಜ ಸೇವೆಗೆ ಹೆಸರಾಗಿದೆ. ಸಮಾಜಮುಖಿ ಸೇವೆ ಮೂಲಕ ಸತತ 11ನೇ ಬಾರಿ ರಾಜ್ಯಪಾಲರ ಪ್ರಶಸ್ತಿ ಪಡೆದ ಸಂಸ್ಥೆಯಾಗಿದೆ ಎಂದರು.
ಪ್ರಸ್ತುತ ಜಗತ್ತನ್ನು ಕಾಡುತ್ತಿರುವ ಮಾರಕ ರೋಗ ಕ್ಯಾನ್ಸರ್ ಬಗ್ಗೆ ಗ್ರಾಮೀಣ ಭಾಗದಲ್ಲಿ ಜಾಗೃತಿ, ಕ್ಯಾನ್ಸರ್ ತಪಾಸಣಾ ಶಿಬಿರಗಳನ್ನು ನಡೆಸುತ್ತಿದೆ ಎಂದು ತಿಳಿಸಿದರು.
ನಿವೃತ್ತ ಮುಖ್ಯ ಶಿಕ್ಷಕ ಎಸ್. ಜೋಗಪ್ಪ ಮಾತನಾಡಿ, ರೆಡ್‌ಕ್ರಾಸ್ ಸಂಸ್ಥೆಯ ಸಮಾಜಮುಖಿ ಕಾರ್ಯ, ನಿಸ್ವಾರ್ಥ ಜನ ಸೇವೆ ಮಾದರಿಯಾಗಿದೆ. ನಾವು ಸಂಪಾದಿಸಿದ ಹಣ ಸಮಾಜಕ್ಕೆ ಸದ್ವಿನಿಯೋಗವಾದರೆ ಉಸಿರು ನಿಂತ ಮೇಲೂ ಸಮಾಜದಲ್ಲಿ ಹೆಸರು ಶಾಶ್ವತವಾಗಿ ಇರುತ್ತದೆ ಎಂದರು.
ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷ ಎಚ್.ಎಸ್. ಸುಂದರ್‌ರಾಜ್, ಎಂ.ಎಸ್. ರಾಘವೇಂದ್ರಪ್ಪ, ಸಣ್ಣ ಭೀಮಣ್ಣ, ವೆಂಕಟೇಶ್, ಪ್ರವೀಣ್, ಎ. ರಾಘವೇಂದ್ರ, ಬಿ.ಕೆ. ನಾಗಣ್ಣ, ಸತೀಶ್‌ಬಾಬು, ಪಾರ್ವತಮ್ಮ, ಸರಸ್ವತಿ, ಗೌರಮ್ಮ, ವೀಣಾ, ಗೀತಾ, ಸಿದ್ದರಾಮಣ್ಣ, ಮಹಾಬಲೇಶ್ವರ ಶ್ರೇಷ್ಠಿ, ಡಾ.ಡಿ. ಧರಣೀಂದ್ರಯ್ಯ ಇತರರಿದ್ದರು.