ಕಡೇಹುಡೆ ಗ್ರಾಮದ ರೈತರೊಬ್ಬರು ತಮ್ಮ ಹೊಲದಲ್ಲಿ ದಾಳಿಂಬೆ ಗಿಡಗಳನ್ನು ನೆಡಲು ಸಿದ್ಧತೆ ಮಾಡಿಕೊಂಡಿದ್ದರು. ಗಿಡ ನೆಡುವ ಮುನ್ನ ಹೊಲದಲ್ಲಿ ತೋಡಲಾಗಿದ್ದ ಕುಳಿಗಳ ಬಳಿ ಪೂಜೆ ಕೈಗೊಳ್ಳುತ್ತಿದ್ದ ವೇಳೆ ಚಿರತೆಯು ಹೊಲದ ಸುತ್ತಲೂ ಮುಕ್ತವಾಗಿ ಅಡ್ಡಾಡುತ್ತಿರುವುದು ಕಂಡುಬಂದಿದೆ. ಇದನ್ನು ಗಮನಿಸಿ ತಕ್ಷಣವೇ ಎಚ್ಚೆತ್ತ ರೈತರು, ಗಿಡಮರಗಳ ಮರೆಯಲ್ಲಿ ಅಡಗಿ ನಿಂತು ದೂರದಿಂದಲೇ ಚಿರತೆಯ ಫೋಟೋ ಹಾಗೂ ವಿಡಿಯೋಗಳನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಪ್ರಸ್ತುತ ದೊಡ್ಡಚೆಲ್ಲೂರು ಮತ್ತು ಕಡೇಹುಡೆ ಗ್ರಾಮದ ಕೆಲವು ಯುವಕರು ಈ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಸುತ್ತಮುತ್ತಲಿನ ಹಳ್ಳಿಗಳ ಜನರನ್ನು ಮತ್ತಷ್ಟು ಆತಂಕಕ್ಕೀಡುಮಾಡಿದೆ.