ನಾಯಕನಹಟ್ಟಿ ಸಮೀಪದ ಕುದಾಪುರದ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ವಿಶ್ವ ಜ್ಯೂನಿಯರ್ ಒಲಂಪಿಯಾಡ್ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳೊಂದಿಗೆ ಶುಕ್ರವಾರ ಮುಂಬಯಿನ ಹೋಮಿ ಬಾಬಾ ಶಿಕ್ಷಣ ಮತ್ತು ವಿಜ್ಞಾನ ಕೇಂದ್ರದ ನಿರ್ದೇಶಕ ಪ್ರೊ. ಅರ್ನಾಬ್ ಭಟ್ಟಾಚಾರ್ಯ ಸಂವಾದ ನಡೆಸಿದರು.
ಐಐಎಸ್ಸಿಯಲ್ಲಿ ವಿಶ್ವ ಜ್ಯೂನಿಯರ್ ಒಲಂಪಿಯಾಡ್ ವಿದ್ಯಾರ್ಥಿಗಳೊಂದಿಗೆ ಸಂವಾದ
ನಾಯಕನಹಟ್ಟಿ: ಸೌರ ವಿದ್ಯುತ್ ಬಗ್ಗೆ ವಿಜ್ಞಾನ ವಿದ್ಯಾರ್ಥಿಗಳಿಗೆ ಹೆಚ್ಚಿನ ಜ್ಞಾನ ಅವಶ್ಯ ಎಂದು ಮುಂಬಯಿನ ಹೋಮಿ ಬಾಬಾ ಶಿಕ್ಷಣ ಮತ್ತು ವಿಜ್ಞಾನ ಕೇಂದ್ರದ ನಿರ್ದೇಶಕ, ವಿಜ್ಞಾನಿ ಪ್ರೊ. ಅರ್ನಾಬ್ ಭಟ್ಟಾಚಾರ್ಯ ಹೇಳಿದರು.
ಸಮೀಪದ ಕುದಾಪುರದ ಭಾರತೀಯ ವಿಜ್ಞಾನ ಸಂಸ್ಥೆಯ ಕೌಶಲಾಭಿವೃದ್ಧಿ ಕೇಂದ್ರದಲ್ಲಿ ಜ್ಯೂನಿಯರ್ ಒಲಂಪಿಯಾಡ್ ವಿದ್ಯಾರ್ಥಿಗಳಿಗೆ ಆಯೋಜಿಸಿರುವ ತರಬೇತಿ ಶಿಬಿರದಲ್ಲಿ ಶುಕ್ರವಾರ ಮಾತನಾಡಿದರು.
ಪಾವಗಡದ ಏಷ್ಯಾದ ಅತಿದೊಡ್ಡ ಸೋಲಾರ್ ಪಾರ್ಕ್‌ನಲ್ಲಿ 2050 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಹಲವು ಕಂಪನಿಗಳು ಒಂದೆಡೆ ಸೇರಿ ವಿದ್ಯುತ್ ಉತ್ಪಾದನೆ ಮಾಡುತ್ತಿವೆ. ಅಲ್ಲಿಗೆ ಭೇಟಿ ನೀಡಿ ನಂತರ ಇಲ್ಲಿಗೆ ಬಂದಿರುವೆ. ನೂರಾರು ಎಕರೆ ವಿಸ್ತೀರ್ಣದಲ್ಲಿ ಸೋಲಾರ್ ಪಾರ್ಕ್ ಹರಡಿದೆ. ಸೂರ್ಯನ ಶಾಖದಿಂದ ಸಸ್ಯಗಳು ತಮ್ಮ ಆಹಾರ ಉತ್ಪಾದಿಸುತ್ತವೆ. ಸೌರಶಕ್ತಿಯಿಂದ ನಮ್ಮ ಪರಿಸರ ಜೀವಿಸುತ್ತಿದೆ ಎಂದು ತಿಳಿಸಿದರು.
ವಿಶ್ವ ಜ್ಯೂನಿಯರ್ ಒಲಂಪಿಯಾಡ್‌ನಲ್ಲಿ ಭಾಗವಹಿಸಲು ಇಲ್ಲಿ ತರಬೇತಿ ನೀಡಲಾಗುತ್ತಿದೆ. ಮುಂದಿನ ವಿಜ್ಞಾನಿಗಳಾಗುವ ನೀವು ಸೌರಶಕ್ತಿಯ ಮುಂದಿನ ಹಂತಗಳಲ್ಲಿ ಯಾವ ರೀತಿ ಸಂಶೋಧನೆ ನಡೆಸಬಹುದೆಂದು ಯೋಚಿಸಬೇಕಾಗಿದೆ. ಪಾವಗಡದಲ್ಲಿ ಏಷ್ಯಾದ ಅತೀದೊಡ್ಡ ಸೋಲಾರ್‌ಪಾರ್ಕ್ ಯಾಕೆ ಸ್ಥಾಪಿಸಿದ್ದಾರೆ ಎಂದರೆ ಇಲ್ಲಿ ಸೂರ್ಯನ ಶಾಖ ಪ್ರಖರವಾಗಿರುತ್ತದೆ. ಈ ಐಐಎಸ್‌ಸಿಯಲ್ಲಿಯೂ ಸೋಲಾರ್ ತಂತ್ರಜ್ಞಾನದಿಂದ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಬಿಡುವಿನ ವೇಳೆ ಉಪನ್ಯಾಸಕರೊಂದಿಗೆ ಅಲ್ಲಿಗೆ ಭೇಟಿ ನೀಡಿ ಹೆಚ್ಚಿನ ಜ್ಞಾನ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಸೋಲಾರ್ ಪ್ಯಾನೆಲ್ ಸ್ವಚ್ಛತೆಗೆ ರೋಬೋಟಿಕ್ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಸಂಶೋಧನೆಯಾಗಬೇಕಿದೆ. ಇತ್ತೀಚೆಗೆ ಎಲ್ಲ ಕ್ಷೇತ್ರಗಳಲ್ಲೂ ರೋಬೋಟಿಕ್ ಬಳಕೆಯಾಗುತ್ತಿದೆ. ಸೋಲಾರ್ ಕ್ಷೇತ್ರದಲ್ಲೂ ಅದರ ಬಳಕೆ ಹೆಚ್ಚಾಗಬೇಕಿದೆ ಎಂದರು.
ಸೋಲಾರ್ ಪ್ಯಾನಲ್ ಯಾವ ರೀತಿಯಲ್ಲಿ ರೂಪುಗೊಂಡಿದೆ ಮತ್ತು ಸೂರ್ಯನ ಶಾಖವನ್ನು ಹೀರಿಕೊಂಡು ಯಾವ ತೆರನಾಗಿ ವಿದ್ಯುತ್ ಉತ್ಪಾದನೆಯಾಗುತ್ತಿದೆ ಎಂದು ವಿವರಿಸಿದರು. ಸೋಲಾರ್ ವಿದ್ಯುತ್ ಉತ್ಪಾದನೆ ಹೆಚ್ಚಿದರೆ ಕಲ್ಲಿದ್ದಲು ಮತ್ತು ಥರ್ಮಲ್‌ನಿಂದ ವಿದ್ಯುತ್ ಉತ್ಪಾದನೆ ಕಡಿಮೆಯಾಗುತ್ತದೆ. ಇದರಿಂದ ಪರಿಸರವೂ ಚೆನ್ನಾಗಿರುತ್ತದೆ ಎಂದು ತಿಳಿಸಿದರು.
ಐಐಎಸ್ಸಿ ಕೌಶಲಾಭಿವೃದ್ಧಿ ಕೇಂದ್ರದ ಮುಖ್ಯಸ್ಥ ಪ್ರೊ. ಸುಬ್ಬಾರೆಡ್ಡಿ ಮಾತನಾಡಿ, ಈ ಮೊದಲು ಜ್ಯೂನಿಯರ್ ವಿಶ್ವ ಒಲಂಪಿಯಾಡ್ ವಿದ್ಯಾರ್ಥಿಗಳಿಗೆ ಮುಂಬೈನ ಹೋಮಿ ಬಾಬಾ ಶಿಕ್ಷಣ ಸಂಸ್ಥೆಯಲ್ಲಿ ತರಬೇತಿ ನೀಡಲಾಗುತ್ತಿತ್ತು. ಕಳೆದ ವರ್ಷದಿಂದ ಐಐಎಸ್‌ಸಿಯಲ್ಲಿ ತರಬೇತಿ ನೀಡಲಾಗುತ್ತಿದೆ ಎಂದರು.
ಪ್ರೊ. ಅಚ್ಯುತ್, ಭಾರತೀಯ ಭೌತ ವಿಜ್ಞಾನ ಪ್ರಾಧ್ಯಾಪಕರ ವೇದಿಕೆ ಪ್ರಧಾನ ಕಾರ್ಯದರ್ಶಿ ಪ್ರೊ. ರೇಖಾ ಘೋರ್ಪಡೆ, ಪ್ರೊ. ರಾಘವೇಂದ್ರ, ಹೇಮಂತ್ ಇತರರು ಇದ್ದರು.