

ಪ್ರಮುಖ ಮುಖ್ಯಾಂಶಗಳು
ಹಿರಿಯೂರು:"ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ರಕ್ಷಣೆ ಮಾಡುವುದು ನಮ್ಮ ಹೊಣೆ" ಎಂದು ಯುವ ಮುಖಂಡ ಸುಹಾಸ್ ಸುಧಾಕರ್ ಹೇಳಿದರು. protection
ನಗರದ ಕಾಂಗ್ರೆಸ್ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
"ಜಾತ್ಯತೀತ ತತ್ವ, ಸಾಮಾಜಿಕ ನ್ಯಾಯ ಕಾಂಗ್ರೆಸ್ ಪಕ್ಷದ ಜೀವಾಳ. ಕಾರ್ಯಕರ್ತರೇ ನಮ್ಮ ಶಕ್ತಿ. ಪಕ್ಷದ ಗೆಲುವು ತಳಮಟ್ಟದಲ್ಲಿ ದುಡಿಯುವ ಕಾರ್ಯಕರ್ತರ ಪರಿಶ್ರಮ, ಸಂಘಟನಾ ಶಕ್ತಿಯ ಮೇಲೆ ನಿಂತಿರುತ್ತದೆ," ಎಂದು ತಿಳಿಸಿದರು.
"ದಿ. ಡಿ. ಸುಧಾಕರ್ ಅವರು 2008ರಿಂದ ಹಿರಿಯೂರಿನ ಅಭಿವೃದ್ಧಿಗೆ ಅವಿರತ ಶ್ರಮಿಸಿದ್ದು, ಜನರು, ಕಾರ್ಯಕರ್ತರ ನಾಡಿಮಿಡಿತ ಅರಿತು ಶಾಸಕ, ಮಂತ್ರಿಯಾಗಿ ಕ್ಷೇತ್ರದಲ್ಲಿ ಜನ ಮೆಚ್ಚುವಂತಹ ಕೆಲಸ ಮಾಡಿದ್ದಾರೆ. ಇಲ್ಲಿನ ಜನರ ಪ್ರೀತಿ ವಿಶ್ವಾಸಕ್ಕೆ ನಮ್ಮ ಕುಟುಂಬ ಎಂದಿಗೂ ಚಿರಋಣಿ. ಜನ ಸೇವೆ, ನಮ್ಮ ತಂದೆಯ ಕನಸು ಸಾಕಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು," ಎಂದರು.
"ಕಾರ್ಯಕರ್ತರ ಒತ್ತಾಸೆಯಂತೆ ಹಿರಿಯೂರಿನಲ್ಲಿ ಡಿ. ಸುಧಾಕರ್ ಅವರಿಗೆ ನುಡಿ-ನಮನ ಕಾರ್ಯಕ್ರಮ ಆಯೋಜಿಸಿ, ಸಿಎಂ-ಡಿಸಿಎಂ ಅವರನ್ನು ಆಹ್ವಾನಿಸಬೇಕು. ತಾಲೂಕಿನ ಪ್ರತಿ ಹಳ್ಳಿಗೂ ಭೇಟಿ ನೀಡಿ ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ತುಂಬಬೇಕು," ಎಂದು ಕಾರ್ಯಕರ್ತರು ಮನವಿ ಮಾಡಿದರು.
"ಕೆಲವರು ವೈಯಕ್ತಿಕ ಪ್ರತಿಷ್ಠೆಗೆ ಸುಹಾಸ್ ಅವರನ್ನು ಕೈಗೊಂಬೆ ಮಾಡಿಕೊಳ್ಳಲು ಯತ್ನಿಸುತ್ತಿದ್ದಾರೆ. ಕಚೇರಿಯಲ್ಲಿರುವ ಕೆಲವರನ್ನು ಬದಲಾಯಿಸಬೇಕು. ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಗೌರವಿಸಿ ಅವಕಾಶ ನೀಡಬೇಕು," ಎಂದು ಒತ್ತಾಯಿಸಿದರು.
"ಮುಂಬರುವ ಉಪ ಚುನಾವಣೆಯಲ್ಲಿ ದಿ. ಸುಧಾಕರ್ ಅವರ ಕುಟುಂಬದಿಂದ ಯಾರೇ ಸ್ಪರ್ಧಿಸಿದರೂ ಗೆಲುವಿಗೆ ಶಕ್ತಿ ಮೀರಿ ಶ್ರಮಿಸಲಾಗುವುದು," ಎಂದು ಕಾರ್ಯಕರ್ತರು ಭರವಸೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಗ್ರಾಮಾಂತರ ಅಧ್ಯಕ್ಷ ಎಂ.ಎಸ್. ಈರಲಿಂಗೇಗೌಡ, ಜಿಪಂ ಮಾಜಿ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು, ಮಾಜಿ ಸದಸ್ಯರಾದ ಗೀತಾ, ನಾಗೇಂದ್ರನಾಯ್ಕ, ತಾಪಂ ಮಾಜಿ ಅಧ್ಯಕ್ಷ ಚಂದ್ರಪ್ಪ, ಮಹಮ್ಮದ್ ಫಕ್ರುದ್ದೀನ್, ಡಾ.ಜೆ.ಆರ್. ಸುಜಾತಾ, ಮುಖಂಡರಾದ ಕಲ್ಲಹಟ್ಟಿ ಹರೀಶ್, ಜ್ಞಾನೇಶ್, ಪ್ರದೀಪ್, ಹೇಮಂತ್ ಯಾದವ್, ಅಂಬಿಕಾ, ಮಂಜುಳಾ, ಪಿ.ಡಿ. ಕೋಟೆ ನಾಗಣ್ಣ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ, ನಗರಸಭೆ ಮಾಜಿ ಅಧ್ಯಕ್ಷ ಟಿ. ಚಂದ್ರಶೇಖರ್, ಈ. ಮಂಜುನಾಥ್, ರಂಗಯ್ಯ, ಶ್ರವಣಗೆರೆ ಗೌಡಪ್ಪ, ಜಿ.ಎಲ್. ಮೂರ್ತಿ, ಗುರುಪ್ರಸಾದ್, ಎಂ.ಡಿ. ಸಣ್ಣಪ್ಪ, ಜಿಪಂ ಕೆಡಿಪಿ ಸದಸ್ಯ ತಿಮ್ಮಣ್ಣ, ಚಂದ್ರು, ಜಿ. ದಾದಾಪೀರ್, ಸಾದತ್‌ವುಲ್ಲಾ ಇತರರು ಇದ್ದರು.