

ಪ್ರಮುಖ ಮುಖ್ಯಾಂಶಗಳು
ಹಿರಿಯೂರು:"ತಾಲೂಕಿನ 10 ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ಸಮಸ್ಯೆ ಪರಿಹಾರಕ್ಕೆ ತಕ್ಷಣ ಕ್ರಮವಹಿಸಿ ಜನರಿಗೆ ನೀರು ಕೊಡಬೇಕು" ಎಂದು ಸಂಸದ ಗೋವಿಂದ ಎಂ. ಕಾರಜೋಳ ಅಧಿಕಾರಿಗಳಿಗೆ ತಾಕೀತು ಮಾಡಿದರು. Hydro fracturing
ಚಿತ್ರದುರ್ಗದ ಜಿಪಂ ಸಿಇಒ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ತುರ್ತು ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
"ಬೋರ್‌ವೆಲ್ ವಿಫಲಗೊಂಡಿರುವ ಹಾಗೂ ಖಾಸಗಿ ಕೊಳವೆಬಾವಿ ಲಭ್ಯವಿರದ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಒದಗಿಸಬೇಕು. ಓಬಳಾಪುರ ತಾಂಡಾಗೆ ಬಳಕೆಗಾಗಿ ಕೆರೆಯ ನೀರನ್ನು ನೀಡಿದರೂ, ಹತ್ತಿರದ ಗ್ರಾಮಗಳ ಆರ್‌ಒ (RO) ಪ್ಲಾಂಟ್‌ನಿಂದ 20 ಲೀಟರ್ ಕುಡಿಯುವ ನೀರಿನ ಕ್ಯಾನ್‌ಗಳನ್ನು ವಿತರಿಸಲು ವ್ಯವಸ್ಥೆ ಮಾಡಬೇಕು. ಇದಕ್ಕಾಗಿ ಆಟೋ ಟ್ರಾಲಿ ಅಥವಾ ಕಂಟೈನರ್ ವಾಹನ ಬಾಡಿಗೆ ಪಡೆಯುವಂತೆ" ಹೇಳಿದರು.
"ಮಳೆ ಇಲ್ಲದೆ ಅಂತರ್ಜಲ ಸಂಪೂರ್ಣ ಕುಸಿದಿರುವುದು ನಿಜ. ಆದರೆ ಸಾರ್ವಜನಿಕರಿಗೆ ಕುಡಿಯುವ ನೀರು ಒದಗಿಸುವುದು ನಮ್ಮ ಮೊದಲ ಆದ್ಯತೆ. ಬೋರ್‌ವೆಲ್‌ಗಳು ಬತ್ತಿ ಹೋಗಿವೆ ಎಂದು ಕೈಕಟ್ಟಿ ಕುಳಿತುಕೊಳ್ಳದೆ, ಅಂತರ್ಜಲ ಮಟ್ಟ ಕುಸಿದು ಬತ್ತಿಹೋಗಿರುವ ಅಸ್ತಿತ್ವದಲ್ಲಿರುವ ಬೋರ್‌ವೆಲ್‌ಗಳಿಗೆ 'ಹೈಡ್ರೋ ಫ್ರಾಕ್ಚರಿಂಗ್' ತಂತ್ರಜ್ಞಾನ ಬಳಸಿ ಮರುಪೂರಣ ಮಾಡಲು ಪ್ರಯತ್ನಿಸುವಂತೆ" ಸೂಚಿಸಿದರು. ಜೊತೆಗೆ, "ಬಹುಗ್ರಾಮ ಹಾಗೂ ಜೆಜೆಎಂ (JJM) ಅಡಿ ನೀರು ಸರಬರಾಜು ಮಾಡುವ ಪೈಪ್‌ಲೈನ್ ಲಿಂಕ್‌ಗಳ ಮೂಲಕ ಅಗತ್ಯವಿರುವ ಕಡೆಗೆ ನೀರು ಹರಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು" ಎಂದರು.
"ಕಳೆದ ವರ್ಷದ ಬೇಸಿಗೆಯಲ್ಲಿ ಜಿಲ್ಲೆಯಾದ್ಯಂತ ಒಟ್ಟು 800ಕ್ಕೂ ಹೆಚ್ಚು ಹೊಸ ಬೋರ್‌ವೆಲ್‌ಗಳನ್ನು ಕೊರೆಯಲಾಗಿತ್ತು. ಆದರೆ ಈ ಪ್ರಕ್ರಿಯೆಯನ್ನು ಗರಿಷ್ಠ ಮಟ್ಟಿಗೆ ನಿಯಂತ್ರಿಸಲಾಗಿದ್ದು, ಜಿಲ್ಲೆಯಲ್ಲಿ ಕೇವಲ 70 ಹೊಸ ಬೋರ್‌ವೆಲ್ ಕೊರೆಯಲಾಗಿದೆ. ಖಾಸಗಿ ಬೋರ್‌ವೆಲ್ ಬಾಡಿಗೆಗೆ ಪಡೆದು ಸಾರ್ವಜನಿಕರಿಗೆ ನೀರು ಒದಗಿಸಲು ಆದ್ಯತೆ ನೀಡಲಾಗುತ್ತಿದೆ" ಎಂದು ಜಿ.ಪಂ. ಸಿಇಒ ಡಾ. ಆಕಾಶ್ ಮಾಹಿತಿ ನೀಡಿದರು.
"ಹಿರಿಯೂರು ತಾಲೂಕಿನ 10 ಗ್ರಾಮ ಪಂಚಾಯಿತಿಗಳ 23 ಜನವಸತಿ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಈ ಗ್ರಾಮಗಳಲ್ಲಿ ಒಟ್ಟು 24 ಹೊಸ ಕೊಳವೆ ಬಾವಿಗಳನ್ನು ಕೊರೆಯಲಾಗಿದೆ. ಈ ಪೈಕಿ 7 ಕೊಳವೆ ಬಾವಿಗಳು ವಿಫಲವಾಗಿವೆ. ತಾಲೂಕಿನಾದ್ಯಂತ 181 ಶುದ್ಧ ಕುಡಿಯುವ ನೀರಿನ ಘಟಕಗಳು ಇದ್ದು, 175 ಕಾರ್ಯಾಚರಣೆ ನಡೆಸುತ್ತಿವೆ. 2 ದುರಸ್ತಿ ಹಂತದಲ್ಲಿದ್ದು, 4 ಸ್ಥಗಿತಗೊಂಡಿವೆ. ತಾಲೂಕಿನಲ್ಲಿ ಒಟ್ಟು 65 ಲಕ್ಷ ರೂ. ಹಣವನ್ನು ಕುಡಿಯುವ ನೀರಿನ ಸರಬರಾಜಿಗಾಗಿ ಬಿಡುಗಡೆ ಮಾಡಲಾಗಿದೆ" ಎಂದರು.
"ಪ್ರತಿ ಗ್ರಾಮ ಪಂಚಾಯಿತಿಗಳಿಗೂ ಆಡಳಿತಾಧಿಕಾರಿಗಳನ್ನು ನೇಮಿಸಲಾಗಿದೆ. ಪತ್ರಿಕೆಗಳಲ್ಲಿ ಬರುವ ವರದಿಗಳಿಗೆ ತಕ್ಷಣವೇ ಸ್ಪಂದಿಸಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಾಗಿದೆ" ಎಂದು ಡಾ. ಆಕಾಶ್ ತಿಳಿಸಿದರು.
ಬಹುಗ್ರಾಮ ಕುಡಿಯುವ ನೀರು ಯೋಜನೆ (MBS) ಹಾಗೂ ಜಲ ಜೀವನ್ ಮಿಷನ್ (JJM) ಯೋಜನೆಗಳ ಅಡಿಯಲ್ಲಿ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಕೈಗೊಳ್ಳಲಾದ ಕಾಮಗಾರಿಗಳು ನೀರಿನ ಸಮಸ್ಯೆಯನ್ನು ಸಾಕಷ್ಟು ನಿವಾರಿಸಿವೆ. ಮುಂದಿನ ವರ್ಷಗಳಲ್ಲಿ ಈ ಸಮಸ್ಯೆ ಇನ್ನಷ್ಟು ಬಗೆಹರಿಯಲಿದೆ. ಕೂಡಲೇ ಕಾಮಗಾರಿ ಪೂರ್ಣಗೊಳಿಸುವಂತೆ ಸಂಸದ ಗೋವಿಂದ ಎಂ. ಕಾರಜೋಳ ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿ.ಪಂ. ಉಪಕಾರ್ಯದರ್ಶಿ ಡಾ. ರಂಗಸ್ವಾಮಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಅಮರನಾಥ್ ಜೈನ್, ಸಹಾಯಕ ಇಂಜಿನಿಯರ್ ಅಸ್ಲಂ ಪಾಷಾ, ತಾಪಂ ಇಒ ಪ್ರಮೋದ್ ಸೇರಿದಂತೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳ ಆಡಳಿತಾಧಿಕಾರಿಗಳು ಹಾಗೂ ಪಿಡಿಒಗಳು ಇದ್ದರು.