ನಾಯಕನಹಟ್ಟಿ: ಚಿತ್ರದುರ್ಗ ಜಿಲ್ಲೆಯ ಐತಿಹಾಸಿಕ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಸಣ್ಣ ಕಾರ್ತಿಕೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ಸಂಭ್ರಮದಿಂದ ಜರುಗಿತು.
ಕಾರ್ತಿಕೋತ್ಸವ ನಿಮಿತ್ತ ರಥವನ್ನು ಬಣ್ಣ ಬಣ್ಣದ ಬಾವುಟ, ಬೃಹತ್ ಹೂ ಹಾರಗಳಿಂದ ಸಿಂಗರಿಸಲಾಗಿತ್ತು. ಮಧ್ಯಾಹ್ನ 3 ಗಂಟೆಗೆ ಸಕಲ ಪೂಜಾ ವಿಧಿ-ವಿಧಾನಗಳೊಂದಿಗೆ ಸ್ವಾಮಿಯ ಉತ್ಸವಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಭಕ್ತರು ಸಂಭ್ರಮದಿಂದ ತೇರು ಎಳೆದು ಶ್ರೀ ತಿಪ್ಪೇರುದ್ರಸ್ವಾಮಿ ನಾಮಸ್ಮರಣೆ ಮಾಡಿದರು.
ರಥ ಸಾಗಿದ ದಾರಿಯುದ್ದಕ್ಕೂ ಮಹಿಳೆಯರು, ಮಕ್ಕಳು, ಬಾಳೆಹಣ್ಣು, ಕಾಳುಮೆಣಸು, ಮಂಡಕ್ಕಿ, ಬೆಲ್ಲದ ಚೂರನ್ನು ರಥಕ್ಕೆ ತೂರಿ ಭಕ್ತಿ ಸಮರ್ಪಿಸಿದರು. ಉತ್ಸವ ಒಳಮಠದಿಂದ ಸಾಗಿ ಆಂಜನೇಯ ದೇವಸ್ಥಾನದ ಮುಂಭಾಗದಿಂದ ಮತ್ತೆ ಒಳಮಠ ಸೇರಿತು.
ದೇವರ ಪಟ್ಟದ ಬಸವನನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ರಥದ ಮುಂದೆ ಬಸವ ಸಾಗುತ್ತಿದ್ದರೆ ಭಕ್ತರು ಪಾದಗಳಿಗೆ ಎರಗಿ ನಮಸ್ಕರಿಸುತ್ತಿದ್ದರು. ಸಂಜೆ ಸಕಲ ಬಿರುದಾವಳಿಗಳೊಂದಿಗೆ ಸ್ವಾಮಿಯನ್ನು ಗುಡಿ ತುಂಬಿಸಲಾಯಿತು.
ರಥೋತ್ಸವದ ನಂತರ ಭಕ್ತರಿಗೆ ಸಜ್ಜೆ ಮತ್ತು ಕಡ್ಲೆಕಾಳು ಮೊಳಕೆ, ಪ್ರಸಾದವಾಗಿ ವಿತರಿಸಲಾಯಿತು.
ರಥೋತ್ಸವಕ್ಕೆ ನಂದಿಧ್ವಜ ಕುಣಿತ, ಕರಡಿ ವಾದ್ಯ ಮೆರಗು ನೀಡಿದವು. ಸ್ಥಳೀಯ ಜನಪ್ರತಿನಿಧಿಗಳು, ಅಪಾರ ಭಕ್ತರು ಭಾಗವಹಿಸಿದ್ದರು.
ನ. 27ರಂದು ಶ್ರೀಕ್ಷೇತ್ರದಲ್ಲಿ ಲಕ್ಷದೀಪೋತ್ಸವ, 28 ರಂದು ದೊಡ್ಡ ಕಾರ್ತಿಕೋತ್ಸವ ಜರುಗಲಿದೆ.