ಮೊಳಕಾಲ್ಮೂರು ತಾಲೂಕಿನ ರಾಂಪುರದಲ್ಲಿ ಶಾಸಕ ಎನ್.ವೈ. ಗೋಪಾಲಕೃಷ್ಣ ರೈತರಿಗೆ ರೇಷ್ಮೆ ಕೃಷಿ ಸಲಕರಣೆಗಳನ್ನು ವಿತರಿಸಿದರು. ಕಾಂಗ್ರೆಸ್ ಮುಖಂಡ ನಾಗೇಶರಡ್ಡಿ, ಚಳ್ಳಕೆರೆ ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಮಹೇಶ್, ವಿಸ್ತರಣಾಧಿಕಾರಿ ಸುಷ್ಮಾ, ವಲಯ ಅಧಿಕಾರಿ ಬೋರಯ್ಯ ಇದ್ದರು
ಮೊಳಕಾಲ್ಮೂರು: ರಾಜ್ಯದಲ್ಲೆ ಪ್ರಸಿದ್ಧಿ ಪಡೆದಿರುವ ರೇಷ್ಮೆ ಕೃಷಿಗೆ ಹೆಚ್ಚು ಉತ್ತೇಜನ ಕೊಡುವ ಮೂಲಕ ರೈತರ ಆದಾಯ ದ್ವಿಗುಣಗೊಳಿಸಬೇಕು ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ಅಧಿಕಾರಿಗಳಿಗೆ ಸಲಹೆ ನೀಡಿದರು.
ತಾಲೂಕಿನ ರಾಂಪುರದಲ್ಲಿ ಮಂಗಳವಾರ ರೈತ ಫಲಾನುಭವಿಗಳಿಗೆ ರೇಷ್ಮೆ ಕೃಷಿ ಚಂದ್ರಿಕೆ, ಪ್ರೋನರ್ ಹಾಗೂ ಸೋಲಾರ್ ಲೈಟ್ ವಿತರಿಸಿ ಮಾತನಾಡಿ, ಮೊಳಕಾಲ್ಮೂರು ತಾಲೂಕು ಬರಗಾಲಕ್ಕೆ ತುತ್ತಾಗಿ ರೈತರು ಬೆಳೆನಷ್ಟ ಅನುಭವಿಸಿರಬಹುದು. ಆದರೆ, ರೇಷ್ಮೆ ಕೃಷಿ ಆದಾಯ ತಂದುಕೊಡುವ ಭರವಸೆಯಾಗಿ ಉಳಿದಿದೆ ಎಂದರು.
ರೇಷ್ಮೆ ಬೆಳೆ ಮತ್ತು ಗೂಡು ಉತ್ಪಾದನೆಗೆ ಈ ಭಾಗದ ಒಣಹವೆ ಯೋಗ್ಯವಾಗಿದೆ. ಮೊಳಕಾಲ್ಮೂರು ರೇಷ್ಮೆಗೂಡು ಅಂದರೆ ಮಾರುಕಟ್ಟೆಯಲ್ಲಿ ಬಹು ಬೇಡಿಕೆ ಇದೆ. ಸೀರೆ ತಯಾರಿ ಮತ್ತು ಮಾರಾಟದಲ್ಲೂ ಹೆಸರು ಪಡೆದಿದೆ ಎಂದು ಹೇಳಿದರು.
ಕೃಷಿ ಸಬಲೀಕರಣಕ್ಕೆ ಸರ್ಕಾರದ ಎಲ್ಲ ರೀತಿಯ ನೆರವನ್ನು ಅರ್ಹರಿಗೆ ತಲುಪಿಸಲು ಅಧಿಕಾರಿಗಳು ಪ್ರಯತ್ನಿಸಬೇಕು. ವಿಶೇಷವಾಗಿ ರೇಷ್ಮೆ ಕೃಷಿ ವಿಸ್ತರಣೆಗೆ ರೈತರಿಗೆ ಪ್ರೇರಣೆಯಾಗಿ ನಿಲ್ಲಬೇಕು ಎಂದು ತಿಳಿಸಿದರು.
ಚಳ್ಳಕೆರೆ ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಮಹೇಶ್ ಮಾತನಾಡಿ, ತೋಟಗಾರಿಕೆ ಬೆಳೆಗಳ ಪೈಕಿ ರೇಷ್ಮೆ ಕೃಷಿ ರೈತರ ಪಾಲಿಗೆ ವರದಾನವಾಗಿದೆ. ಇಲಾಖೆ ಮಾರ್ಗಸೂಚಿ ಅನ್ವಯ ಕೃಷಿ ಕೈಗೊಂಡೆ ಕಡಿಮೆ ಖರ್ಚಿನಲ್ಲಿ ಕೈತುಂಬಾ ಆದಾಯ ಪಡೆಯಬಹುದು. ಇಪ್ಪುನೇರಳೆ ನಾಟಿ, ಹುಳುಗಳ ಆರೈಕೆ, ಗೂಡು ಉತ್ಪಾದನೆ ಮನೆಗೆ ಸರ್ಕಾರದಿಂದ ಸಹಾಯಧನ ದೊರೆಯಲಿದೆ. ಇವುಗಳ ಸದುಪಯೋಗ ಪಡೆದು ಉತ್ತಮ ಬೆಳೆ ಬೆಳೆದರೆ ಆರ್ಥಿಕ ಸಬಲೀಕರಣ ಸಾಧ್ಯವಾಗಲಿದೆ ಎಂದರು.
ತಾಲೂಕಿನ ಕೊಂಡ್ಲಹಳ್ಳಿ, ಮಾರಮ್ಮನಹಳ್ಳಿ, ಉಡೇವು, ಕೋನಸಾಗರ ಮತ್ತಿತರ ಗ್ರಾಮಗಳ ರೈತರು 600 ಕ್ಕೂ ಹೆಚ್ಚು ಹೆಕ್ಟೇರ್‌ನಲ್ಲಿ ರೇಷ್ಮೆ ಬೆಳೆಯುತ್ತಿದ್ದು, ವಾರ್ಷಿಕ 3 ಸಾವಿರ್ ಟನ್ ಗೂಡು ಉತ್ಪಾದಿಸುಬತ್ತಿದ್ದಾರೆ. ಮಾರುಕಟ್ಟೆಯಲ್ಲಿ ಉತೃಷ್ಟ ರೇಷ್ಮೆ ಗೂಡು ಎನ್ನುವ ಹಿರಿಮೆಗೂ ಪಾತ್ರವಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ನಾಗೇಶರಡ್ಡಿ, ವಿಸ್ತರಣಾಧಿಕಾರಿ ಸುಷ್ಮಾ, ವಲಯ ಅಧಿಕಾರಿ ಬೋರಯ್ಯ ಹಾಗೂ ರೈತರು ಇದ್ದರು.