

ಪ್ರಮುಖ ಮುಖ್ಯಾಂಶಗಳು
ಹೊಸದುರ್ಗ:ಪಟ್ಟಣದಲ್ಲಿ ಪ್ರಧಾನ ಮಂತ್ರಿ ಉದ್ಯೋಗ ಸೃಜನ ಕಾರ್ಯಕ್ರಮ (PMEGP) ಯೋಜನೆಯಡಿ ಸಾಲ ಹಾಗೂ ಸಹಾಯಧನ ಕೊಡಿಸುವುದಾಗಿ ನಂಬಿಸಿ ತಾಲೂಕಿನ 300ಕ್ಕೂ ಹೆಚ್ಚು ಜನರಿಂದ ಲಕ್ಷಾಂತರ ರೂ. ಹಣ ಪಡೆದು ವಂಚಿಸಿರುವ ಘಟನೆ ನಡೆದಿದೆ. ವಂಚಕರನ್ನು ಪೊಲೀಸರಿಗೆ ಒಪ್ಪಿಸಿದ್ದು, ತನಿಖೆ ಆರಂಭವಾಗಿದೆ. fraud
ಗದಗ ಮೂಲದ ಯಮನೂರ ಗುರಿಕಾರ ಹಾಗೂ ಶ್ರೀನಿವಾಸ ರಾಮಣ್ಣ ಮಂಚಾಲೆ ಎಂಬುವವರು ಪಟ್ಟಣದ ಹುಳಿಯಾರು ರಸ್ತೆಯ ರಾಜವೀರ ಮದಕರಿನಾಯಕ ವೃತ್ತದಲ್ಲಿ 'ಶ್ರೀ ವಿಜಯ ಗ್ರೂಪ್' ಹೆಸರಿನಲ್ಲಿ ಕಚೇರಿ ತೆರೆದಿದ್ದರು. ತಾಲೂಕಿನ ಜನರಿಗೆ ಉದ್ಯಮ ಹಾಗೂ ವ್ಯವಹಾರ ಆರಂಭಿಸಲು ಬ್ಯಾಂಕಿನಿಂದ ಶೇ. 35ರಷ್ಟು ಸಹಾಯಧನದ ಸಾಲ ಕೊಡಿಸುವುದಾಗಿ ಪ್ರಚಾರ ಮಾಡಿದ್ದರು.
ಆಕರ್ಷಕ ಕರಪತ್ರ ಹಾಗೂ ಸಾಮಾಜಿಕ ಜಾಲತಾಣದ ಮೂಲಕ ಜನರನ್ನು ಸಂಪರ್ಕಿಸಿ ಆಧಾರ್ ಕಾರ್ಡ್, ವೋಟರ್ ಐಡಿ, ಪಾನ್ ಕಾರ್ಡ್, ಫೋಟೋ, ಪಡಿತರ ಚೀಟಿ ಸೇರಿದಂತೆ ಕೆಲವು ದಾಖಲೆಗಳನ್ನು ನೀಡಿದರೆ 5 ರಿಂದ 25 ಲಕ್ಷದವರೆಗೆ ಸಾಲ ಕೊಡಿಸುವುದಾಗಿ ನಂಬಿಸಿದ್ದರು.
ಅನಕ್ಷರಸ್ಥರು, ಅಂಗವಿಕಲರು ಹಾಗೂ ಮಹಿಳೆಯರನ್ನೇ ಗುರಿಯಾಗಿಸಿಕೊಂಡು, ಬ್ಯಾಂಕ್ ಸಾಲಕ್ಕೆ ಪ್ರತಿಯಾಗಿ ಶೇ. 10ರಷ್ಟು ಕಮಿಷನ್ ನೀಡಬೇಕು, ದಾಖಲೆ ಸಿದ್ಧಪಡಿಸಲು ಹಾಗೂ ಬ್ಯಾಂಕಿನ ಅಧಿಕಾರಿಗಳಿಗೆ ಮುಂಗಡ ಕೊಡಬೇಕೆಂದು ಹೇಳಿ, 10 ಲಕ್ಷದವರೆಗೆ ಸಾಲಕ್ಕೆ 15 ಸಾವಿರ ಹಾಗೂ 25 ಲಕ್ಷ ಸಾಲಕ್ಕೆ 30 ಸಾವಿರ ರೂ. ವಸೂಲಿ ಮಾಡಿದ್ದರು.
ಅರ್ಜಿ ಸಲ್ಲಿಸಲು ಮೇ 15 ಕೊನೆಯ ದಿನ ನಿಗದಿಪಡಿಸಿದ್ದು, ಹಣ ನೀಡಿದವರಿಗೆ ಪ್ರತಿಯಾಗಿ ಗದಗ ಎಸ್‌ಬಿಐ (SBI) ಬ್ಯಾಂಕಿನ ಉಳಿತಾಯ ಖಾತೆ ಹೊಂದಿದ ಚೆಕ್‌ಗಳನ್ನು ನೀಡಿದ್ದರು. ನಂಬಿಕೆ ಇಲ್ಲದಿದ್ದರೆ ಜೂ. 6ರಂದು ಚೆಕ್ ಮೂಲಕ ಹಣ ಬಿಡಿಸಿಕೊಳ್ಳಬಹುದೆಂದು ಹೇಳಿದ್ದರು. ಜನರು ತಮ್ಮ ಪರಿಚಯದವರಿಂದಲೂ ಹಣ ಕೊಡಿಸಿದ್ದರು.
ವಂಚಕರು ಈ ಹಿಂದೆ ಲಿಂಗಸೂರು ತಾಲೂಕಿನಲ್ಲಿ ಇದೇ ತರದ ವಂಚನೆ ಮಾಡಿ ಹಣ ಲಪಟಾಯಿಸಿ ಪರಾರಿಯಾಗಿದ್ದರು. ವಂಚಕರು ಹೊಸದುರ್ಗದಲ್ಲಿ ಇರುವ ಮಾಹಿತಿ ತಿಳಿದ ಲಿಂಗಸೂರಿನವರು ಶುಕ್ರವಾರ ಬೆಳಗ್ಗೆ ಹೊಸದುರ್ಗದ ಕಚೇರಿಗೆ ಬಂದು ಗಲಾಟೆ ಮಾಡಿದರು. ಸ್ಥಳದಲ್ಲಿದ್ದ ವಂಚಕ ಶ್ರೀನಿವಾಸ ಮಂಚಾಲೆಯನ್ನು ಪೊಲೀಸ್ ಠಾಣೆಗೆ ಕರೆತಂದಾಗ ವಂಚನೆಯ ಜಾಲ ಬಯಲಾಗಿದೆ.
ಶುಕ್ರವಾರ ಸಂಜೆ ವೇಳೆಗೆ ನೂರಕ್ಕೂ ಹೆಚ್ಚು ಜನರು ಹೊಸದುರ್ಗ ಠಾಣೆಗೆ ದೂರು ನೀಡಲು ಜಮಾಯಿಸಿದ್ದರು. ವಂಚನೆಯಾದ ಹಣದ ಕುರಿತು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಹಣ ಹೂಡಿಕೆ ಮಾಡಿದ್ದ ವಿರೂಪಾಕ್ಷ ನಾಯಕ್ ಮಾತನಾಡಿ, "ಸಾಲ ಕೊಡಿಸುವುದಾಗಿ ನಂಬಿಸಿ 25 ಸಾವಿರ ರೂ. ಪಡೆದಿದ್ದಾರೆ. ಲಿಂಗಸೂರಿನ ಜನ ಬಂದು ಮಾಹಿತಿ ನೀಡದಿದ್ದರೆ ಆರೋಪಿಗಳು ನಮ್ಮ ಹಣದೊಂದಿಗೆ ಪರಾರಿಯಾಗುತ್ತಿದ್ದರು. ವಂಚಕರನ್ನು ಪೊಲೀಸರಿಗೆ ಒಪ್ಪಿಸಿದ್ದು, ನ್ಯಾಯ ದೊರೆಯುವ ವಿಶ್ವಾಸವಿದೆ" ಎಂದರು.