

ಪ್ರಮುಖ ಮುಖ್ಯಾಂಶಗಳು
ರೈತಸಂಘದ ಜಿಲ್ಲಾಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಮಾತನಾಡಿ, "ಚಳ್ಳಕೆರೆ-ಮೊಳಕಾಲ್ಮೂರು ತಾಲೂಕು ಅತ್ಯಂತ ಬರಪೀಡಿತ ಪ್ರದೇಶವಾಗಿದ್ದು, ಜನರಿಗೆ ಸಮರ್ಪಕ ಶುದ್ಧ ಕುಡಿಯುವ ನೀರಿನ ಲಭ್ಯತೆ ಇಲ್ಲದೆ ಉಪ್ಪು ನೀರು ಸೇವನೆಯಿಂದ ಹಲವು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಈ ಬಗ್ಗೆ ಅನೇಕ ಬಾರಿ ತಾಲೂಕು ಆಡಳಿತದ ಗಮನ ಸೆಳೆದರೂ ಎಚ್ಚೆತ್ತುಕೊಂಡಿಲ್ಲ," ಎಂದು ಅಸಮಾಧಾನ ಹೊರಹಾಕಿದರು.
"ಕೆಲ ಗಡಿ ಗ್ರಾಮಗಳಲ್ಲಿ ಇಂದಿಗೂ ಕೆರೆ, ತೋಟದ ಬಾವಿಗಳ ನೀರು ಸೇವನೆ ಮಾಡುವ ಪರಿ ಇದೆ. ಇದಕ್ಕೆ ಯಾರು ಹೊಣೆ? ಶುದ್ಧ ನೀರಿನ ಘಟಕಗಳು ನಿಷ್ಕ್ರಿಯಗೊಂಡಿದ್ದರೂ ಸರಿಪಡಿಸಲಾಗಿಲ್ಲ. ಸಾರ್ವಜನಿಕ ಸೇವೆಗೆಂದು ಬರುವ ಅನುದಾನಗಳು ದಾರಿ ತಪ್ಪಿರುವುದಕ್ಕೆ ಇದು ತಾಜಾ ಉದಾಹರಣೆ," ಎಂದು ಆರೋಪಿಸಿದರು.
"ಮೊಳಕಾಲ್ಮೂರು ಸೇರಿದಂತೆ ಕೆಲ ಹಳ್ಳಿಗಳಿಗೆ ಈ ಹಿಂದೆ ಮಂಜೂರಾದ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣದ ಹೆಸರಿನಲ್ಲಿ ನಕಲಿ ಬಿಲ್ ಸೃಷ್ಟಿಸಿ, ಕೋಟ್ಯಂತರ ರೂ. ಹಣವನ್ನು ನಿರ್ಮಿತಿ ಕೇಂದ್ರದ ಅಧಿಕಾರಿಗಳು ನುಂಗಿ ಜನರಿಗೆ ನೀರಿನ ಸಂಕಷ್ಟ ತಂದಿಟ್ಟಿದ್ದಾರೆ. ಇದರಿಂದ ಜನರಿಗೆ ನೀರಿನ ಸಂಕಷ್ಟ ತಂದೊಡ್ಡಿದೆ. ಜಿಲ್ಲಾಡಳಿತ ಇದನ್ನು ಸೂಕ್ಷ್ಮವಾಗಿ ಪರಿಗಣಿಸಬೇಕು. ತಾಪಂ ಇಒ ಅವರು ನಮ್ಮ ಮನವಿಯನ್ನು ಪರಿಗಣಿಸಿ ಸರಿಪಡಿಸಬೇಕು," ಎಂದು ಆಗ್ರಹಿಸಿದರು.
ರೈತಸಂಘದ ರಾಜ್ಯ ಕಾರ್ಯಾಧ್ಯಕ್ಷ ಬೇಡರಡ್ಡಿಹಳ್ಳಿ ಬಸವರಡ್ಡಿ ಮಾತನಾಡಿ, "ಕೇಂದ್ರ ಸರ್ಕಾರದ ಬೆಳೆ ವಿಮಾ ಯೋಜನೆ ಮಾರ್ಗಸೂಚಿ ರೈತರ ಜೇಬಿಗೆ ಕನ್ನ ಹಾಕುವ ಕುತಂತ್ರ ಅಡಗಿದೆ. ಸಾಲ ಬಾಧೆಗೆ ತುತ್ತಾಗಿರುವ ರೈತಾಪಿ ವರ್ಗಕ್ಕೆ ಸೂಕ್ತ ವಿಮಾ ಪರಿಹಾರ ಕೊಡದೆ 7 ವರ್ಷದ ಸರಾಸರಿ ಬೆಳೆ ನಷ್ಟ ಪ್ರಮಾಣದ ಅವೈಜ್ಞಾನಿಕ ಮಾರ್ಗಸೂಚಿ ಮುಂದಿಟ್ಟಿರುವ ನಡೆ ಹಗಲು ದರೋಡೆ ಮಾಡಿದಂತೆ. ಇದನ್ನು ಸರಿಪಡಿಸಿ ರೈತರಿಗೆ ಸಾಮಾಜಿಕ ನ್ಯಾಯ ಕೊಡಿಸಿ ಎಂದು ಜಿಲ್ಲಾಡಳಿತಕ್ಕೆ ದುಂಬಾಲು ಬಿದ್ದರೂ ಪ್ರಯೋಜನವಾಗಿಲ್ಲ," ಎಂದರು.
"ಬಿ.ಜಿ.ಕೆರೆಯಲ್ಲಿ ಕೋಟ್ಯಂತರ ರೂ. ಹಣದಲ್ಲಿ ಸಾರ್ವಜನಿಕ ಆಸ್ಪತ್ರೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದರೂ ಜನ ಸೇವೆಗೆ ಅನುವು ಮಾಡಿಕೊಟ್ಟಿಲ್ಲ. ಸಾರ್ವಜನಿಕ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆಯಿಂದ ಖಾಸಗಿ ಅಥವಾ ದೂರದ ನಗರ-ಪಟ್ಟಣಗಳ ಮೊರೆ ಹೋಗುವ ಪರಿಗೆ ಜನ ಬೇಸತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳಿಗೆ ಮುಕ್ತಿ ಇಲ್ಲದಂತಾಗಿದೆ," ಎಂದು ದೂರಿದರು.
ರೈತಸಂಘದ ತಾಲೂಕು ಅಧ್ಯಕ್ಷ ಸೂರಮ್ಮನಹಳ್ಳಿ ರಾಜಣ್ಣ, ಜಿಲ್ಲಾಧ್ಯಕ್ಷ ರವಿಕುಮಾರ, ಚಂದ್ರಣ್ಣ, ನಿಂಗಣ್ಣ, ತಿಪ್ಪೇಸ್ವಾಮಿ, ಪ್ರಕಾಶ, ಹನುಮಣ್ಣ, ಸಿದ್ದಣ್ಣ, ಪಾಪಯ್ಯ, ಸೂರಯ್ಯ, ನಾಗರಾಜ, ಕೊಳ್ಳಣ್ಣ ಇತರರಿದ್ದರು.