ಬೆಳೆವಿಮೆಗೆ ಆಗ್ರಹಿಸಿ ರೈತರ ಬೃಹತ್ ಪ್ರತಿಭಟನೆ

ಚಳ್ಳಕೆರೆ ತಾಲೂಕು ಕಚೇರಿ ಮುಂಭಾಗದ ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ನಾಲ್ಕು ರೈತ ಸಂಘಟನೆಗಳ ಸಹಯೋಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ರೈತರು ಬೆಳೆ ವಿಮೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದರು.
ಚಳ್ಳಕೆರೆ ತಾಲೂಕು ಕಚೇರಿ ಮುಂಭಾಗದ ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ನಾಲ್ಕು ರೈತ ಸಂಘಟನೆಗಳ ಸಹಯೋಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ರೈತರು ಬೆಳೆ ವಿಮೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ರೈತ ಸಂಘಟನೆಗಳ ನಾಲ್ಕು ಬಣ ಭಾಗಿ
  • ಚಳ್ಳಕೆರೆ-ಚಿತ್ರದುರ್ಗ ರಸ್ತೆ ತಡೆ
ಚಳ್ಳಕೆರೆ: ಬೆಳೆ ವಿಮೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘಟನೆಗಳ ನಾಲ್ಕು ಬಣಗಳ ಜತೆಗೂಡಿ ಬುಧವಾರ ಸಾವಿರಾರು ರೈತರು ತಾಲೂಕು ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು.
ಚಳ್ಳಕೆರೆ ನಗರ ದೇವತೆ ಚಳ್ಳಕೆರೆ ಅಮ್ಮನ ದೇವಸ್ಥಾನದಿಂದ ಮೆರವಣಿಗೆ ಹೊರಟು ನೆಹರು ವೃತ್ತದ ಮಾರ್ಗವಾಗಿ ಅಂಬೇಡ್ಕರ್ ಸರ್ಕಲ್‌ಗೆ ಸಾಗಿ ಬಂದ ರೈತರು, ಎರಡು ಗಂಟೆಗಳ ಕಾಲ ಚಳ್ಳಕೆರೆ-ಚಿತ್ರದುರ್ಗ ಮಾರ್ಗದ ಪ್ರಧಾನ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ರೈತರಿಂದ ವಿಮಾ ವಂತಿಕೆ ಕಟ್ಟಿಸಿಕೊಳ್ಳುವಾಗ ಯಾವುದೇ ನಿಯಮ ಇರುವುದಿಲ್ಲ. ರೈತರಿಗೆ ವಿಮಾ ಹಣ ಬಿಡುಗಡೆಗೆ ನೂರಾರು ಕಾನೂನು ಹೇಳುತ್ತಾರೆ. ಹೆಣ್ಣುಮಕ್ಕಳ ಒಡವೆ ಮಾರಿ, ಸಾಲ ಮಾಡಿಕೊಂಡು ವಿಮೆ ಹಣ ಪಾವತಿಸಿದ್ದೇವೆ. ಕಳೆದ ವರ್ಷ ಸಂಪೂರ್ಣ ಮಳೆ ಕೊರತೆಯಾಗಿದೆ. ಶೇ.85 ರಷ್ಟು ಬೆಳೆ ನಷ್ಟ ಆಗಿರುವ ಬಗ್ಗೆ ಕಂದಾಯ ಮತ್ತು ಕೃಷಿ ಇಲಾಖೆಗಳು ನಡೆಸಿದ ಜಂಟಿ ಸಮೀಕ್ಷೆ ವರದಿ ಇದೆ. ತಾಲೂಕಿನ 40 ಪಂಚಾಯಿತಿಗಳಲ್ಲಿ 12 ರಲ್ಲಿ ಉತ್ತಮ ಮಳೆಯಾಗಿದೆ ಎಂದು ಸುಳ್ಳು ವರದಿ ನೀಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಸಿದರು.
ರೈತರ ಬೃಹತ್ ಹೋರಾಟಕ್ಕೆ ಮಣಿದು ತರಾತುರಿಯಲ್ಲಿ ಬಿಡಿಗಾಸಿನ ವಿಮಾ ಹಣ ಬಿಡುಗಡೆ ಮಾಡಲಾಗಿದೆ. ಕೆಲ ಪಂಚಾಯಿತಿಗಳಿಗೆ ನೂರರ ಲೆಕ್ಕದಲ್ಲಿ, ಇನ್ನೂ ಕೆಲ ಪಂಚಾಯತಿ ರೈತರಿಗೆ ಸಾವಿರ ಲೆಕ್ಕದಲ್ಲಿ ತಾರತಮ್ಯ ಮಾಡಲಾಗಿದೆ. ವಿಮೆ ಕಟ್ಟಿರುವ 36,707 ರೈತರಿಗೆ ಸಮಾನವಾಗಿ ವಿಮೆ ಹಣ ಬಿಡುಗಡೆ ಮಾಡಬೇಕು. ವಿಮೆಯಿಂದ ಕೈ ಬಿಟ್ಟಿರುವ 12 ಪಂಚಾಯಿತಿ ರೈತರಿಗೂ ನ್ಯಾಯ ಕೊಡಬೇಕು. ಜಿಲ್ಲೆಯ ಭದ್ರಾ ಮೇಲ್ದಂಡೆ ಯೋಜನೆ ಶೀಘ್ರ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.
ಆಕ್ರೋಶ: ತಾಲೂಕು ಕಚೇರಿಗೆ ಬೀಗ ಹಾಕುತ್ತೇವೆ ಎನ್ನುವ ಭಯಕ್ಕೆ ಕಚೇರಿಯ ಪ್ರಧಾನ ಗೇಟಿಗೆ ಅಧಿಕಾರಿಗಳೇ ಬೀಗ ಹಾಕಿ ರೈತರ ಸುತ್ತ ಪೊಲೀಸ್ ಸರ್ಪಗಾವಲು ನಿಯೋಜಿಸಲಾಗಿದೆ. ನಾವು ದೇಶಕ್ಕೆ ಆಹಾರ ಬೆಳೆಯುತ್ತೇವೆ. ಸರ್ಕಾರಗಳನ್ನು ಬದಲು ಮಾಡುತ್ತೇವೆ. ಸಕಾಲಕ್ಕೆ ವಿಮಾ ಕಂತು ಕಟ್ಟಿದ್ದೇವೆ. ಕಾನೂನು ಬದ್ಧವಾಗಿ ವಿಮಾ ಸೌಲಭ್ಯ ಕೇಳುತ್ತಿದ್ದೇವೆ. ಸುಮಾರು ಐದಾರು ತಿಂಗಳಿಂದ ಧರಣಿ, ಸತ್ಯಾಗ್ರಹ, ರಸ್ತೆ ತಡೆ ಚಳುವಳಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿ ಸಲ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಬೃಹತ್ ಪ್ರತಿಭಟನೆಗೆ ಹೆದರಿ, ಇಲ್ಲಿ ನೆರೆದಿರುವ ರೈತರಿಗಿಂತಲೂ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗುದೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮುಂಜಾಗ್ರತಾ ಕ್ರಮವಾಗಿ ಡಿಆರ್ ಸಿಬ್ಬಂದಿ ಸೇರಿ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
ಮನವಿ: ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಮನವಿ ಸ್ವೀಕರಿಸಿ, ಈಗಾಗಲೇ ಜಿಲ್ಲೆಯ ರೈತರಿಗೆ ಸುಮಾರು 81 ಕೋಟಿ ರೂ. ವಿಮೆ ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ. ಆದರೆ, ಚಳ್ಳಕೆರೆ ತಾಲೂಕಿನ ರೈತರಿಗೆ ಆಗಿರುವ ತಾರತಮ್ಯ, 12 ಪಂಚಾಯಿತಿಗಳಿಗೆ ವಿಮೆ ಹಣ ವಂಚನೆ ಆಗಿರುವ ಬಗ್ಗೆ ಪರಿಶೀಲನೆ ಮಾಡಿ, ಸರ್ಕಾರಕ್ಕೆ ಮತ್ತೊಮ್ಮೆ ವರದಿ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.
ರೈತ ಸಂಘಟನೆಗಳ ಮುಖಂಡರಾದ ರೆಡ್ಡಿಹಳ್ಳಿ ವೀರಣ್ಣ, ಕೆ. ಚಿಕ್ಕಣ್ಣ, ಕೆ.ಪಿ. ಭೂತಯ್ಯ, ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಸೇರಿ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net