ಚಳ್ಳಕೆರೆಯಲ್ಲಿ ನಾಳೆ ಬೃಹತ್ ಪ್ರತಿಭಟನೆಗೆ ರೈತರು ಸಜ್ಜು

ಚಳ್ಳಕೆರೆ ತಾಲೂಕಿನ ವಿವಿಧ ರೈತ ಸಂಘಟನೆಗಳು ಮೇ 27ರಂದು ಬೆಳೆ ವಿಮೆಗಾಗಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಸೋಮವಾರ ಪೊಲೀಸ್ ಉಪಾಧೀಕ್ಷಕ ಎಸ್.ಜಿ. ಸತ್ಯನಾರಾಯಣ ರಾವ್ ಕರೆದಿದ್ದ ಸಭೆಯಲ್ಲಿ ಭಾಗವಹಿಸಿದ್ದ ರೈತ ಮುಖಂಡರು.
ಚಳ್ಳಕೆರೆ ತಾಲೂಕಿನ ವಿವಿಧ ರೈತ ಸಂಘಟನೆಗಳು ಮೇ 27ರಂದು ಬೆಳೆ ವಿಮೆಗಾಗಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಸೋಮವಾರ ಪೊಲೀಸ್ ಉಪಾಧೀಕ್ಷಕ ಎಸ್.ಜಿ. ಸತ್ಯನಾರಾಯಣ ರಾವ್ ಕರೆದಿದ್ದ ಸಭೆಯಲ್ಲಿ ಭಾಗವಹಿಸಿದ್ದ ರೈತ ಮುಖಂಡರು.
Published on

ಪ್ರಮುಖ ಮುಖ್ಯಾಂಶಗಳು

  • ಬೆಳೆವಿಮೆ ಬಿಡುಗಡೆಗೆ ಆಗ್ರಹ
  • ತಾಲೂಕು ಕಚೇರಿಗೆ ಬೀಗ ಜಡಿಯುವ ಎಚ್ಚರಿಕೆ
2025-26ರಲ್ಲಿ ತಾಲೂಕಿನ 36,707 ರೈತರು ಬೆಳೆ ವಿಮೆಗೆ ವಂತಿಕೆ ಪಾವತಿಸಿದ್ದಾರೆ. ಕಳೆದ ವರ್ಷ ಮಳೆ ಕೊರತೆಯಿಂದ ಶೇಂಗಾ ಬೆಳೆ ಸಂಪೂರ್ಣ ನಷ್ಟವಾಗಿದೆ. ಬೆಳೆ ಕಳೆದುಕೊಂಡ ರೈತರಿಗೆ ವಿಮೆ ಬಿಡುಗಡೆಗೆ ಒತ್ತಾಯಿಸಿ ಅನೇಕ ಸಲ ಪ್ರತಿಭಟನೆ ನಡೆಸಿದ್ದರೂ ನ್ಯಾಯ ಸಿಕ್ಕಿಲ್ಲ. ರೈತ ಸಂಘಟನೆಗಳ ನಾಲ್ಕೂ ಬಣಗಳು ಒಗ್ಗೂಡಿ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದೇವೆ ಎಂದು ಸಂಘಟನೆ ಮುಖಂಡರು ತಿಳಿಸಿದ್ದಾರೆ.
ಈ ಸಂಬಂಧ ಈಗಾಗಲೇ ಪೂರ್ವಭಾವಿ ನಡೆಸಲಾಗಿದೆ. ವಿಮೆ ಹಣ ಪಾವತಿಸಿರುವ ಪ್ರತಿ ರೈತರ ಮನೆಯಿಂದ ಒಬ್ಬರು ಹೋರಾಟಕ್ಕೆ ಬರುವಂತೆ ಕರೆ ನೀಡಲಾಗಿದೆ. ಕರಪತ್ರ ಮುದ್ರಿಸಿ ಪ್ರತಿ ಹಳ್ಳಿಗಳಿಗೂ ತೆರಳಿ ಜಾಗೃತಿ ಮೂಡಿಸಿದ್ದೇವೆ. ನಗರದೇವತೆ ಚಳ್ಳಕೆರೆ ಅಮ್ಮ ದೇವಸ್ಥಾನದಿಂದ ನೆಹರು, ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಮೆರವಣಿಗೆಯಲ್ಲಿ ಸಾಗಿ, ತಾಲೂಕು ಕಚೇರಿ ಬಳಿ ಜಮಾವಣೆ ಆಗುತ್ತೇವೆ. ಕೂಡಲೇ ಅಧಿಕಾರಿಗಳು ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದಲ್ಲಿ ತಾಲೂಕು ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸುತ್ತೇವೆ. ಜೈಲಿಗೆ ಹಾಕಿದರೂ ಹೆದರುವುದಿಲ್ಲ ಎಂದಿದ್ದಾರೆ ಮುಖಂಡರಾದ ಕೆ.ಪಿ. ಭೂತಯ್ಯ, ಕೆ. ಚಿಕ್ಕಣ್ಣ, ರೆಡ್ಡಿಹಳ್ಳಿ ವೀರಣ್ಣ, ಬೇಡರೆಡ್ಡಿಹಳ್ಳಿ ಬಸವರೆಡ್ಡಿ.
ಪೊಲೀಸರ ಸಭೆ: ಈಗಾಗಲೇ ಅನೇಕ ಸಲ ಬೆಳೆ ವಿಮೆಗಾಗಿ ಹೋರಾಟ ಮಾಡಿದ್ದರೂ ನ್ಯಾಯ ಸಿಗದ ರೈತರು, ಬೃಹತ್ ಪ್ರತಿಭಟನೆಗೆ ಮುಂದಾಗಿರುವುದು ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆಗೆ ತಲೆನೋವಾಗಿದೆ. ಸೋಮವಾರ ಪೊಲೀಸ್ ಉಪಾಧೀಕ್ಷಕ ಎಸ್.ಜಿ. ಸತ್ಯನಾರಾಯಣರಾವ್ ತಮ್ಮ ಕಚೇರಿಯಲ್ಲಿ ರೈತ ಮುಖಂಡರ ಸಭೆ ನಡೆಸಿದ್ದಾರೆ.
ಪ್ರತಿಭಟನೆ ವೇಳೆ ಸಾರ್ವಜನಿಕರ ಆಸ್ತಿಗೆ ನಷ್ಟ ಉಂಟಾದಲ್ಲಿ, ಕಾನೂನು ವ್ಯವಸ್ಥೆ ಹದಗೆಟ್ಟಲ್ಲಿ, ಅಹಿತಕರ ಘಟನೆ ನಡೆದಲ್ಲಿ ಹೋರಾಟಗಾರರೇ ಕಾರಣ ಎನ್ನುವ ಒಪ್ಪಿಗೆ ಪತ್ರಕ್ಕೆ ಸಹಿ ಮಾಡಿಕೊಡಿ ಎಂದು ಒತ್ತಾಯ ಮಾಡಿದ್ದಾರೆ ಎನ್ನಲಾಗಿದೆ.
ಇದಕ್ಕೆ ಒಪ್ಪದ ರೈತ ಮುಖಂಡರು, ಬೆಳೆ ವಿಮೆಗಾಗಿ ವಿಮಾ ಕಂತು ಕಟ್ಟಿ ಕಾನೂನು ಬದ್ದವಾಗಿ ವಿಮೆ ಹಣ ಕೇಳುತ್ತಿದ್ದೇವೆ. ವರ್ಷ ಕಳೆದರೂ ವಿಮೆ ಹಣ ಕೊಡದ ಅಧಿಕಾರಗಳ ಮೇಲೆ ಪ್ರಕರಣ ದಾಖಲಿಸಬೇಕು. ಅದರ ಬದಲು ಈ ರೀತಿಯ ಒತ್ತಡಗಳಿಂದ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಬೇಡಿ ಎಂದು ಒಪ್ಪಿಗೆ ಪತ್ರಕ್ಕೆ ಸಹಿ ಹಾಕಲು ನಿರಾಕರಿಸಿದ್ದಾರೆ.
ಸಭೆಯಲ್ಲಿ ಕೆ.ಪಿ. ಭೂತಯ್ಯ, ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ರೆಡ್ಡಿಹಳ್ಳಿ ವೀರಣ್ಣ, ರವಿಕುಮಾರ್, ಗಂಗಾಧರ್, ಜಿ.ಎಚ್. ಹನುಮಂತಪ್ಪ, ರಾಜಣ್ಣ, ಮಲ್ಲಿಕಾರ್ಜುನ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net