ಅಧಿಕಾರಿಗಳ ವಿರುದ್ಧ ರೈತ ಸಂಘ ಪ್ರತಿಭಟನೆ

ಕೃಷಿಗೆ ಕೆರೆ ಮಣ್ಣು ಹೊಡೆದುಕೊಳ್ಳಲು ಅವಕಾಶ ಕೊಡುವಂತೆ ಆಗ್ರಹಿಸಿ ಚಳ್ಳಕೆರೆ ತಾಲೂಕು ಕಚೇರಿ ಮುಂದೆ ಗುರುವಾರ ರೈತ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಮಲ್ಲಿಕಾರ್ಜುನ, ಮಲ್ಲಾರೆಡ್ಡಿ, ಚಂದ್ರಣ್ಣ, ತಿಪ್ಪೇಸ್ವಾಮಿ, ರವಿಕುಮಾರ್, ಈರಣ್ಣ, ಒಬಳೇಶ ಇದ್ದರು.
ಕೃಷಿಗೆ ಕೆರೆ ಮಣ್ಣು ಹೊಡೆದುಕೊಳ್ಳಲು ಅವಕಾಶ ಕೊಡುವಂತೆ ಆಗ್ರಹಿಸಿ ಚಳ್ಳಕೆರೆ ತಾಲೂಕು ಕಚೇರಿ ಮುಂದೆ ಗುರುವಾರ ರೈತ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಮಲ್ಲಿಕಾರ್ಜುನ, ಮಲ್ಲಾರೆಡ್ಡಿ, ಚಂದ್ರಣ್ಣ, ತಿಪ್ಪೇಸ್ವಾಮಿ, ರವಿಕುಮಾರ್, ಈರಣ್ಣ, ಒಬಳೇಶ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರೈತರ ವಿರುದ್ಧ ಪ್ರಕರಣ ದಾಖಲಿಸಿದ ಕ್ರಮಕ್ಕೆ ಅಸಮಾಧಾನ
  • ತಾಲೂಕು ಕಚೇರಿ ಮುಂದೆ ಆಕ್ರೋಶ
ವಿಜಯವಾಣಿ ಸುದ್ದಿಜಾಲ ಚಳ್ಳಕೆರೆ
ಕೃಷಿ ಚಟುವಟಿಕೆಗಳಿಗೆ ಕೆರೆ ಮಣ್ಣು ಬಳಕೆ ಮಾಡಿಕೊಂಡ ರೈತರ ಮೇಲೆ ಪ್ರಕರಣ ದಾಖಲಿಸಿರುವ ಅಧಿಕಾರಿಗಳ ವಿರುದ್ಧ ಗುರುವಾರ ತಾಲೂಕು ಕಚೇರಿ ಮುಂದೆ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಸಂಘದ ಉಪಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಮಾತನಾಡಿ, ಚಳ್ಳಕೆರೆ ತಾಲೂಕಿನ ಬಂಜಗೆರೆ ಗ್ರಾಮದ ಕೆರೆಯಲ್ಲಿ ರೈತರು ತಮ್ಮ ಜಮೀನುಗಳಿಗೆ ಕೆರೆಮಣ್ಣು ಹೊಡೆದುಕೊಳ್ಳುವಾಗ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಐದಾರು ರೈತರ ಟ್ರಾೃಕ್ಟರ್‌ಗಳನ್ನು ಪೊಲೀಸರ ವಶಕ್ಕೆ ಒಪ್ಪಿಸಿ ದಂಡ ವಿಧಿಸಿದ್ದಾರೆ ಎಂದು ಆರೋಪಿಸಿದರು.
ಕೆರೆಯಲ್ಲಿ ಮಳೆ ನೀರು ನಿಲ್ಲಿಸುವ ಉದ್ದೇಶದಿಂದ ಸಣ್ಣ ನೀರಾವರಿ ಇಲಾಖೆ ಕೆರೆ ಹೂಳೆತ್ತಿಸುವ ಕೆಲಸ ಮಾಡಬೇಕು. ಆದರೆ, ರೈತರು ಇಲಾಖೆಯಿಂದ ಅನುಮತಿ ಪಡೆದು ತಮ್ಮ ಜಮೀನಿಗೆ ಕೆರೆ ಮಣ್ಣು ಬಳಕೆ ಮಾಡಿಕೊಳ್ಳುತ್ತಾರೆ. ಇದನ್ನು ಅಕ್ರಮ ಎಂಬಂತೆ ಸ್ಥಳೀಯರು ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ರೈತರನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತರು ಕಷ್ಟಪಟ್ಟು ದುಡಿದು ದೇಶಕ್ಕೆ ಅನ್ನ ನೀಡುತ್ತಾರೆ. ಇಲಾಖೆಗಳು ರೈತರಿಗೆ ಸಬ್ಸಿಡಿ ಹೆಸರಲ್ಲಿ ಮತ್ತು ಬೆಳೆ ವಿಮೆ ಯೋಜನೆಯಲ್ಲಿ ಮೋಸ ಮಾಡುತ್ತಿವೆ. ಮೊದಲು ರೈತರಿಗೆ ಸ್ವಾತಂತ್ರೃ ಕೊಡಬೇಕು. ಪ್ರಕೃತಿ ಜತೆಯಲ್ಲಿ ಮುಕ್ತವಾಗಿ ಬದುಕಲು ಅವಕಾಶ ಕಲ್ಪಿಸಿ ಕೊಡಬೇಕು ಎಂದು ಆಗ್ರಹಿಸಿದರು.
ರಾಜಕೀಯ ನಾಯಕರ ಹೆಸರು ಹೇಳಿಕೊಂಡು ಅಕ್ರಮವಾಗಿ ಮರಳು ದಂಧೆ ಮಾಡುವವರ ಮತ್ತು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಮಣ್ಣು ಸಾಗಾಟ ಮಾಡಿ, ಹಣ ಸಂಪಾದನೆ ಮಾಡುವ ದಂಧೆಕೊರರು ಇದ್ದಾರೆ. ಅವರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ರೇಹಾನ್ ಪಾಷ, ಕೆರೆಯಲ್ಲಿ ಹೂಳೆತ್ತಲು ಅವಕಾಶ ಕೊಡುತ್ತೇವೆ. ಮಣ್ಣು ಸಾಗಾಟಕ್ಕೆ ಬಳಸುವ ಟ್ರಾೃಕ್ಟರ್‌ಗಳ ದಾಖಲೆಗಳ ನವೀಕರಣ ಮತ್ತು ರೈತರ ಜಮೀನಿನ ಮಾಹಿತಿ ನೀಡಿದರೆ ಸಾಕು. ಸಾರ್ವಜನಿಕರಿಂದ ಯಾವುದೇ ದೂರು ಬಂದರೂ ರೈತರ ವಿರುದ್ಧ ಕ್ರಮ ಜರುಗಿಸುವುದಿಲ್ಲ ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಮಲ್ಲಿಕಾರ್ಜುನ, ಚಂದ್ರಶೇಖರ್, ಗಂಗಾಧರ್, ಗಿಡ್ಡರೆಡ್ಡಿ, ಈರಣ್ಣ, ಮಲ್ಲಾರೆಡ್ಡಿ, ಚಂದ್ರಣ್ಣ, ರುದ್ರಮ್ಮನಹಳ್ಳಿ ತಿಪ್ಪೇಸ್ವಾಮಿ, ಡಿ.ಎಸ್. ಸುರೇಶ್, ಉಮೇಶ್, ಒಬಳೇಶ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net