ಸಿಎಂ ಶಿವಕುಮಾರ್ ಮೇಲೆ ನಿರೀಕ್ಷೆಗಳ ಮಹಾಪೂರ Tribute

ಹಿರಿಯೂರಿನ ನೆಹರು ಮೈದಾನದಲ್ಲಿ ದಿ. ಸುಧಾಕರ್ ನುಡಿ ನಮನ ಕಾರ್ಯಕ್ರಮದ ಸಿದ್ಧತೆಯನ್ನು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಪರಿಶೀಲಿಸಿದರು. ಸುಹಾಸ್ ಸುಧಾಕರ್, ಖಾದಿ ರಮೇಶ್, ಅಮೃತೇಶ್ವರಸ್ವಾಮಿ, ನಾಗೇಂದ್ರನಾಯ್ಕ, ಸುರೇಶ್‌ಬಾಬು ಇದ್ದರು. Tribute
ಹಿರಿಯೂರಿನ ನೆಹರು ಮೈದಾನದಲ್ಲಿ ದಿ. ಸುಧಾಕರ್ ನುಡಿ ನಮನ ಕಾರ್ಯಕ್ರಮದ ಸಿದ್ಧತೆಯನ್ನು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಪರಿಶೀಲಿಸಿದರು. ಸುಹಾಸ್ ಸುಧಾಕರ್, ಖಾದಿ ರಮೇಶ್, ಅಮೃತೇಶ್ವರಸ್ವಾಮಿ, ನಾಗೇಂದ್ರನಾಯ್ಕ, ಸುರೇಶ್‌ಬಾಬು ಇದ್ದರು. Tribute
Published on

ಪ್ರಮುಖ ಮುಖ್ಯಾಂಶಗಳು

  • ಹಿರಿಯೂರಿನಲ್ಲಿಂದು ಸುಧಾಕರ್ ನುಡಿ ನಮನ ಕಾರ್ಯಕ್ರಮ
  • ಸಿಗಲಿದೆಯಾ ಸಮಸ್ಯೆಗಳಿಗೆ ಪರಿಹಾರ ?
ಖಂಡೇನಹಳ್ಳಿ ಬಸವರಾಜ್ ಹಿರಿಯೂರು
ನಗರದ ನೆಹರು ಮೈದಾನದಲ್ಲಿ ಭಾನುವಾರ ಆಯೋಜಿಸಿರುವ ದಿ. ಸುಧಾಕರ್ ನುಡಿ-ನಮನ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಸಿಎಂ ಡಿ.ಕೆ.ಶಿವಕುಮಾರ್ ಅವರು ಔದಾರ್ಯ ತೋರಿ ತಾಲೂಕಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸೂಚಿಸುವರೇ ಎಂದು ಜನತೆ ಕುತೂಹಲದಿಂದ ಎದುರು ನೋಡುತ್ತಿದ್ದಾರೆ. Tribute
ತಾಲೂಕಿನಲ್ಲಿ ದಿ. ಸುಧಾಕರ್ ಅವರು ಅಭಿವೃದ್ಧಿಯ ಹೆಜ್ಜೆ ಗುರುತು ಮೂಡಿಸಿದ್ದು, ಅವರ ಸಾಧನೆ, ಜನಪರ ಕಾರ್ಯ, ಸಮಾಜಮುಖಿ ಚಿಂತನೆ, ಜಾತಿ ಬಲ ಇಲ್ಲದ ಕಡೆ ಜನ ಬೆಂಬಲದಿಂದ ಶಾಸಕ, ಮಂತ್ರಿಯಾಗಿದ್ದು, ಇಂದಿನ ಯುವ ರಾಜಕಾರಣಿಗಳಿಗೆ ಸ್ಪೂರ್ತಿಯಾಗಿದೆ. ನುಡಿ-ನಮನ ಕಾರ್ಯಕ್ರಮದಲ್ಲಿ ಸುಧಾಕರ್ ಅವರ ಸಾಧನೆ, ರಾಜಕೀಯ ಜೀವನ ಕುರಿತು ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಮಠಾಧೀಶರು, ಸಚಿವರು ನೆನಪುಗಳನ್ನು ಮೆಲುಕು ಹಾಕಲಿದ್ದಾರೆ.
ಜಿಲ್ಲೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಹಿಂದ ವರ್ಗದ ಜನರಿದ್ದು ನೀರಾವರಿ, ವಸತಿ, ಕೃಷಿ, ಶುದ್ಧ ಕುಡಿವ ನೀರು, ಗುಣಮಟ್ಟದ ಆರೋಗ್ಯ ಸೇವೆ, ಮೂಲ ಸೌಕರ್ಯಾಭಿವೃದ್ಧಿಗೆ ಆದ್ಯತೆ ನೀಡಿ, ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕಿದೆ. ದಕ್ಷಿಣ ಕಾಶಿ ಖ್ಯಾತಿಯ ಹಿರಿಯೂರಿಗೆ ಹಿಂದೆ ಮುಖ್ಯಮಂತ್ರಿಯಾಗಿದ್ದ ಎಸ್. ನಿಜಲಿಂಗಪ್ಪ, ವೀರಪ್ಪ ಮೊಯ್ಲಿ, ಜೆ.ಎಚ್. ಪಟೇಲ್, ಎಸ್.ಎಂ. ಕೃಷ್ಣ, ಎಚ್.ಡಿ. ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ ತಮ್ಮ ಅಧಿಕಾರಾವಧಿಯಲ್ಲಿ ಭೇಟಿ ನೀಡಿದ್ದರು. ಸಿಎಂ ಡಿ.ಕೆ. ಶಿವಕುಮಾರ್ ಭೇಟಿ ನೀಡುತ್ತಿರುವುದು ವಿಶೇಷ.
ಜಿಲ್ಲೆ ಕಂಡ ಮುತ್ಸದ್ದಿ ರಾಜಕಾರಣಿ ಬಿ.ಎಲ್. ಗೌಡ, ಕೆ.ಎಚ್. ರಂಗನಾಥ್, ಡಿ. ಮಂಜುನಾಥ್, ಎಚ್. ಏಕಾಂತಯ್ಯ ಹಾಗೂ ಡಿ. ಸುಧಾಕರ್ ಅವರನ್ನು ರಾಜ್ಯ ರಾಜಕೀಯಕ್ಕೆ ಕೊಡುಗೆ ನೀಡಿದ್ದು ತಾಲೂಕಿನ ಹೆಗ್ಗಳಿಕೆ. ಆದರೆ, ತಾಲೂಕಿನ ಬಹುದಿನಗಳ ಬೇಡಿಕೆಗಳು ಈಡೇರಿಲ್ಲ.
ಪರಶುರಾಮಪುರ, ಧರ್ಮಪುರ ತಾಲೂಕು ಕೇಂದ್ರ, ಸಮಗ್ರ ನೀರಾವರಿ ಯೋಜನೆ, ವಾಣಿ ವಿಲಾಸ ಸಕ್ಕರೆ ಕಾರ್ಖಾನೆ ಪುನಶ್ಚೇತನ, ತೋಟಗಾರಿಕೆ ವಿವಿ, ಧರ್ಮಪುರ ಏತ ನೀರಾವರಿ 2ನೇ ಹಂತದ ಯೋಜನೆಗೆ ಅನುದಾನ, ಕೆರೆಗಳಿಗೆ ನೀರು ತುಂಬಿಸುವುದು ಇತರ ಬೇಡಿಕೆಗಳು ಇನ್ನೂ ಜೀವಂತವಾಗಿವೆ.
ವಿವಿ ಸಾಗರಕ್ಕೆ 10 ಟಿಎಂಸಿ ಅಡಿ ನೀರು: ಜಿಲ್ಲೆಯ ಜೀವನಾಡಿ ವಿವಿ ಸಾಗರಕ್ಕೆ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ 10 ಟಿಎಂಸಿ ಅಡಿ ನೀರು ಮೀಸಲು, ಭದ್ರಾ ಮೇಲ್ದಂಡೆ ಕಾಮಗಾರಿಕೆ ವೇಗ ನೀಡುವುದು, ಸಕ್ಕರೆ ಕಾರ್ಖಾನೆ ಪುನಶ್ವೇತನ, ದಾವಣಗೆರೆ- ಚಿತ್ರದುರ್ಗ- ತುಮಕೂರು ನೇರ ರೈಲು ಮಾರ್ಗದ ಕಾಮಗಾರಿ ತ್ವರಿತ ಪೂರ್ಣಕ್ಕೆ ರೈತರು ಸಿಎಂಗೆ ಮನವಿ ಸಲ್ಲಿಸಲಿದ್ದಾರೆ.
ತೋಟಗಾರಿಕೆ ವಿವಿ: ವಿವಿ ಸಾಗರ, ಗಾಯತ್ರಿ ಜಲಾಶಯ ಹಾಗೂ ಬಬ್ಬೂರು ಕೃಷಿ ವಿಜ್ಞಾನ ಕೇಂದ್ರ ತಾಲೂಕಿನ ಕೃಷಿಕರ ಆಧಾರ ಸ್ತಂಭಗಳಾಗಿವೆ. ಜಿಲ್ಲೆಯಲ್ಲಿ ತೋಟಗಾರಿಕೆ ವಿಶ್ವ ವಿದ್ಯಾಲಯ ಸ್ಥಾಪಿಸಿದರೆ ಸಂಶೋಧನೆ, ಬೆಳೆಯಲ್ಲಿ ಬದಲಾವಣೆ ತರಲು ಸಾಧ್ಯವಿದೆ. ಇದರಿಂದ ರೈತರಿಗೆ ವರದಾನವಾಗಲಿದೆ. ಇಲ್ಲಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ತೋಟಗಾರಿಕೆ ವಿವಿ, ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ ರೈತರ ಪ್ರಮುಖ ಬೇಡಿಕೆಯಾಗಿದೆ.
ಪ್ರವಾಸೋಧ್ಯಮಕ್ಕೆ ಅನುಧಾನ: ಧರ್ಮಪುರ ಹೋಬಳಿ ಆಂಧ್ರಪ್ರದೇಶ ರಾಜ್ಯದ ಜತೆ ಗಡಿ ಹಂಚಿಕೊಂಡಿದ್ದು, ಕಾನೂನು ಸುವ್ಯವಸ್ಥೆಗೆ ಧರ್ಮಪುರದಲ್ಲಿ ಪೊಲೀಸ್ ಠಾಣೆ ಸ್ಥಾಪನೆ. ವಿವಿ ಸಾಗರ, ಗಾಯತ್ರಿ ಜಲಾಶಯದ ಬಳಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಅನುದಾನ.
ಅಭ್ಯರ್ಥಿ ಘೋಷಣೆ ಸಾಧ್ಯತೆ: ನುಡಿನಮನದಲ್ಲಿ ಸಿಎಂ ಡಿ.ಕೆ. ಶಿವಕುಮಾರ್, ಡಿಸಿಎಂ ಡಾ.ಜಿ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಸಂಪುಟ ಸಚಿವರು, ಸುಧಾಕರ್ ಕುಟುಂಬಸ್ಥರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪಕ್ಷದ ಅಭ್ಯರ್ಥಿ ಘೋಷಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಹಿರಿಯೂರು ತಾಲೂಕಿನ ಅಭಿವೃದ್ಧಿಗೆ ದಿ. ಸುಧಾಕರ್ ಸಾಕಷ್ಟು ಕೊಡುಗೆ ನೀಡಿದ್ದಾರೆ. ತಾಲೂಕಿನ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ಇದೆ. ಜೆ.ಜಿ. ಹಳ್ಳಿ, ಕಲ್ವಳ್ಳಿ ಭಾಗದ 16 ಕೆರೆಗಳಿಗೆ ನೀರು ತುಂಬಿಸಲು ರಾಜ್ಯ ಸರ್ಕಾರ 244 ಕೋಟಿ ರೂ. ಅನುದಾನ ನೀಡುವ ಮೂಲಕ ಸುಧಾಕರ್ ಕನಸು ನನಸಾಗಿಸಿದೆ.

— ಕೆ. ಪೂರ್ಣಿಮಾ ಮಾಜಿ ಶಾಸಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net