ನಾಯಕನಹಟ್ಟಿ: ಹೋಬಳಿಯ ಹಲವೆಡೆ ಶುಕ್ರವಾರ ರಾತ್ರಿ ಬೀಸಿದ ಬಿರುಗಾಳಿ ಮತ್ತು ಮಳೆಗೆ ಅಲ್ಲಲ್ಲಿ ವಿದ್ಯುತ್ ಕಂಬಗಳು, ಮರಗಳು ಉರುಳಿವೆ.
ಪಟ್ಟಣದ ಚಳ್ಳಕೆರೆ ರಸ್ತೆಯ ದೊಡ್ಡಹಳ್ಳ ಸಮೀಪ ಸಿಮೆಂಟ್ ಇಟ್ಟಿಗೆ ಫ್ಯಾಕ್ಟರಿ ಚಾವಣೆ ಹಾರಿಹೋಗಿದೆ. ಪರಿಣಾಮ 100ಕ್ಕೂ ಹೆಚ್ಚು ಸಿಮೆಂಟ್ ಚೀಲಗಳು ನೀರಿನಲ್ಲಿ ತೊಯ್ದಿವೆ. ಸಮೀಪದಲ್ಲೇ ನಾಲ್ಕು ವಿದ್ಯುತ್ ಕಂಬಗಳು ಮುರಿದು ರಸ್ತೆಗೆ ಬಿದ್ದಿವೆ. ನಾಯಕನಹಟ್ಟಿ, ಮನುಮೈನಹಟ್ಟಿ, ಕುದಾಪುರ, ಐಐಎಸ್ಸಿ, ಡಿಆರ್‌ಡಿಒ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜು ಸ್ಥಗಿತವಾಗಿತ್ತು.
ಹೋಬಳಿಯ ಜೋಗಿಹಟ್ಟಿ ಗೌಡಗೆರೆ ಸಮೀಪ, ಗಜ್ಜುಗಾನಹಳ್ಳಿ ರಾಮಸಾಗರ ಮಧ್ಯೆ ಹಾಗೂ ಎನ್. ಮಹದೇವಪುರ ಹೊರವಲಯದ ಹಳ್ಳದಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿವೆ. ಹಲವೆಡೆಗಳಲ್ಲಿ ಮರಗಳು ವಿದ್ಯುತ್‌ಲೈನ್ ಮೇಲೆ ಮತ್ತು ರಸ್ತೆಯಲ್ಲಿ ಬಿದ್ದಿವೆ.
ಮಲ್ಲೂರಹಳ್ಳಿ, ಅಬ್ಬೇನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಸಾಧಾರಣವಾಗಿ ಮಳೆಯಾದರೆ, ತಿಮ್ಮಪ್ಪಯ್ಯನಹಳ್ಳಿ, ಎನ್.ದೇವರಹಳ್ಳಿ, ನೇರಲಗುಂಟೆ, ನೆಲಗೇತನಹಟ್ಟಿ, ನಾಯಕನಹಟ್ಟಿ ಪಪಂ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಹದ ಮಳೆಯಾಗಿದೆ.