Economic: ಆರ್ಥಿಕ ಬಲವರ್ಧನೆಗೆ ಶೈಕ್ಷಣಿಕ ಸಾಧನೆ ಅವಶ್ಯಕ

Economic: ಚಳ್ಳಕೆರೆಯಲ್ಲಿ ಶನಿವಾರ ಸಾಂಸ್ಕೃತಿಕ ಸಮಿತಿ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಟಿ.ರಘುಮೂರ್ತಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿದರು.
Economic: ಚಳ್ಳಕೆರೆಯಲ್ಲಿ ಶನಿವಾರ ಸಾಂಸ್ಕೃತಿಕ ಸಮಿತಿ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಟಿ.ರಘುಮೂರ್ತಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಟಿ. ರಘುಮೂರ್ತಿ ಹೇಳಿಕೆ
  • ಸಾಂಸ್ಕೃತಿಕ ಸಮಿತಿ ಕಾರ್ಯಕ್ರಮ
  • ಶಿಕ್ಷಣದ ಪ್ರಗತಿಗೆ ಮೊದಲ ಆದ್ಯತೆ
ಚಳ್ಳಕೆರೆ: ವಿದ್ಯಾರ್ಥಿಗಳು ಪಾಲಕರ ಆಸೆಯಂತೆ ಉತ್ತಮ ಬದುಕು ರೂಪಿಸಿಕೊಳ್ಳುವ ಸಂಕಲ್ಪ ಮಾಡಬೇಕು ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಕಾಲೇಜು ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆ, ಎನ್‌ಸಿಸಿ, ಯೂತ್ ರೆಡ್ ಕ್ರಾಸ್ ಘಟಕ ಮತ್ತು ಸಾಂಸ್ಕೃತಿಕ ಸಮಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಯಲುಸೀಮೆಯಲ್ಲಿ ಬುಡಕಟ್ಟು ಸಂಸ್ಕೃತಿ ಮತ್ತು ಬಡತನದ ಪರಿಸ್ಥಿತಿ ಇದೆ. ಇಲ್ಲಿ ಶಿಕ್ಷಣ ಬಲಗೊಳ್ಳಬೇಕು. ಸಾಮಾಜಿಕ ಮತ್ತುಆರ್ಥಿಕ ಬಲವರ್ಧನೆಗೆ ಶೈಕ್ಷಣಿಕ ಸಾಧನೆಯಲ್ಲಿ ಪರಿಹಾರ ಕಂಡುಕೊಳ್ಳಬೇಕು. ನನ್ನ ರಾಜಕೀಯ ಬದುಕಿನಲ್ಲಿ ಶಿಕ್ಷಣದ ಪ್ರಗತಿಗೆ ಮೊದಲ ಆದ್ಯತೆ ನೀಡಲಾಗಿದೆ ಎಂದರು.
ಸ್ಥಳೀಯವಾಗಿ ಉನ್ನತ ಶಿಕ್ಷಣ ಸಿಗಬೇಕು ಎನ್ನುವುದು ನನ್ನ ಗುರಿ. ಕ್ಷೇತ್ರದಲ್ಲಿ ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸಲಾಗಿದೆ. ಮೊದಲ ಹಂತದಲ್ಲಿ ಮೂರು ಜನ ವಿದ್ಯಾರ್ಥಿಗಳು ಉತ್ತಮ ದರ್ಜೆಯಲ್ಲಿ ಸಾಧನೆ ಮಾಡಿರುವುದು ಮಾದರಿಯಾಗಿದೆ. ಅದೇ ರೀತಿ ಪ್ರಥಮ ದರ್ಜೆ ಕಾಲೇಜನ್ನು ವಿಶ್ವ ವಿದ್ಯಾಲಯ ಮಾದರಿಯಲ್ಲಿ ಕಟ್ಟಲಾಗುತ್ತಿದೆ. ಈ ಸೌಲಭ್ಯವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಎ.ವಿ. ರಾಮಚಂದ್ರಪ್ಪ ಮಾತನಾಡಿ, ಮೆಕಾಲೆ ಜಾರಿಗೆ ತಂದ ಶಿಕ್ಷಣ ವ್ಯವಸ್ಥೆ ಸರ್ವರಿಗೂ ಸಮಾನ ಅವಕಾಶ ಕಲ್ಪಿಸಿದೆ. ಆದರೆ, ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ಜಾರಿ ಮಾಡುವ ಹುನ್ನಾರ ನಡೆಯುತ್ತಿದೆ. ಇದರಿಂದ ತಾರತಮ್ಯ ಮತ್ತು ಲಿಂಗಭೇದ ಹುಟ್ಟಿಕೊಳ್ಳಲಿದೆ. ಆದ್ದರಿಂದ ವಿದ್ಯಾರ್ಥಿಗಳು ಪ್ರಶ್ನಿಸುವ ಗುಣ ಕಲಿಯಬೇಕು. ವೈಜ್ಞಾನಿಕ ಚಿಂತನೆ ಬೆಳೆಸಿಕೊಳ್ಳಬೇಕು. ಗುಡಿಸಲು ಪರಿಸ್ಥಿತಿ ಮತ್ತು ಬೀದಿ ದೀಪದ ಬೆಳಕಲ್ಲಿ ಓದಿದ ಸಾಧಕರ ಆದರ್ಶ ತಿಳಿಯಬೇಕು ಎಂದು ಹೇಳಿದರು.
ಸಾಂಸ್ಕೃತಿಕ ಸಮಿತಿ ಸಂಚಾಲಕ ಡಾ. ಕೆ.ಆರ್. ರಾಜಕುಮಾರ್ ಮಾತನಾಡಿ, ಪಠ್ಯ ವಿಷಯಗಳು ಬೌದ್ಧಿಕ ಮನನ ಮಾಡುತ್ತವೆ. ಪಠ್ಯೇತರ ಚಟುವಟಿಕೆಗಳು ಸಾಮಾಜಿಕ ಜವಾಬ್ದಾರಿ ಕಲಿಸುತ್ತವೆ. ಆಧುನಿಕತೆಯ ಬದಲಾವಣೆಯನ್ನು ಅರ್ಥ ಮಾಡಿಸುತ್ತವೆ. ಎನ್‌ಸಿಸಿ ಮತ್ತು ಎನ್‌ಎಸ್‌ಎಸ್ ರಾಷ್ಟ್ರೀಯ ಸೇವಾ ಮನೋಭಾವನೆ ಬೆಳೆಸುತ್ತದೆ ಎಂದರು.
ದೆಹಲಿಯಲ್ಲಿ ನಡೆಯವ ಗಣರಾಜ್ಯೋತ್ಸವ ಕಾರ್ಯಕ್ಕೆ ಆಯ್ಕೆ ಆಗಿರುವ ವಿದ್ಯಾರ್ಥಿ ತೇಜು ಹಾಗೂ ಎನ್‌ಸಿಸಿ ಮತ್ತು ಚರ್ಚಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಶಾಸಕರು ಪ್ರಶಸ್ತಿ ಪತ್ರ ನೀಡಿದರು.
ಪ್ರಾಚಾರ್ಯ ಡಾ. ಎಂ.ಕೆ. ದೇವಪ್ಪ ಅಧ್ಯಕ್ಷತೆ ವಹಿಸಿದ್ದರು. ಡಾ.ಆರ್.ಎನ್. ಚನ್ನಕೇಶವ, ಟಿ. ವಿಜಯ್ಕುಮಾರ್, ಡಾ.ಜಿ.ವಿ. ರಾಜಣ್ಣ, ಪಿ. ಕೃಷ್ಣಮೂರ್ತಿ, ಡಾ. ಎಚ್. ಬಸವರಾಜ್, ಡಾ.ಜಿ. ಜಯಮ್ಮ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net