Development: ಜನಪರ ಆಡಳಿತ ಸರ್ಕಾರಕ್ಕೆ ಶ್ರೀರಕ್ಷೆ

Development: ಹಿರಿಯೂರು ತಾಲೂಕಿನ ಬಬ್ಬೂರಿನಲ್ಲಿ ನೂತನ ಅಂಗನವಾಡಿ ಕೇಂದ್ರವನ್ನು ಜಿಲ್ಲಾ ಸಚಿವ ಡಿ. ಸುಧಾಕರ್ ಲೋಕಾರ್ಪಣೆ ಮಾಡಿದರು.
Development: ಹಿರಿಯೂರು ತಾಲೂಕಿನ ಬಬ್ಬೂರಿನಲ್ಲಿ ನೂತನ ಅಂಗನವಾಡಿ ಕೇಂದ್ರವನ್ನು ಜಿಲ್ಲಾ ಸಚಿವ ಡಿ. ಸುಧಾಕರ್ ಲೋಕಾರ್ಪಣೆ ಮಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಸಚಿವ ಡಿ.ಸುಧಾಕರ್ ಹೇಳಿಕೆ
  • ಬಬ್ಬೂರಿನಲ್ಲಿ ಅಂಗನವಾಡಿ ಕಟ್ಟಡ ಲೋಕಾರ್ಪಣೆ
  • ಅಭಿವೃದ್ಧಿ ಕೆಲಸಗಳಿಗೆ ಸರ್ಕಾರ ಅಗತ್ಯ ಅನುದಾನ
ಹಿರಿಯೂರು: ಜನಪರ ಆಡಳಿತ, ಅಭಿವೃದ್ಧಿ ಪರ ಚಿಂತನೆ ರಾಜ್ಯ ಸರ್ಕಾರಕ್ಕೆ ಶ್ರೀರಕ್ಷೆಯಾಗಿದೆ ಎಂದು ಜಿಲ್ಲಾ ಸಚಿವ ಡಿ. ಸುಧಾಕರ್ ಹೇಳಿದರು.
ತಾಲೂಕಿನ ಬಬ್ಬೂರಿನಲ್ಲಿ ಭಾನುವಾರ ನೂತನ ಅಂಗನವಾಡಿ ಕೇಂದ್ರ ಲೋಕಾರ್ಪಣೆ, ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಪಂಚ ಗ್ಯಾರಂಟಿಗಳ ಜತೆ ಇತರ ಅಭಿವೃದ್ಧಿ ಕೆಲಸಗಳಿಗೂ ಸರ್ಕಾರ ಅಗತ್ಯ ಅನುದಾನ ನೀಡಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ನಾಯಕತ್ವದಲ್ಲಿ ರಾಜ್ಯ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗಿದೆ ಎಂದರು.
ಹಿರಿಯೂರು-ಧರ್ಮಪುರ ರಾಜ್ಯ ಹೆದ್ದಾರಿ ಅಭಿವೃದ್ಧಿ, ಜೆ.ಜಿ.ಹಳ್ಳಿ ಹೋಬಳಿ ವ್ಯಾಪ್ತಿಯ ಕೆರೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯಕ್ಕೆ ಸರ್ಕಾರದ ಮಟ್ಟದಲ್ಲಿ ಶಕ್ತಿ ಮೀರಿ ಪ್ರಯತ್ನಿಸಿದ್ದು, ಶೀಘ್ರ ನೀರಾವರಿ ಯೋಜನೆ ಕನಸು ನನಸಾಗಲಿದೆ ಎಂದು ತಿಳಿಸಿದರು.
ಕೃಷಿ ಪಂಪ್‌ಸೆಟ್‌ಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಕೆಗೆ ತಾಲೂಕಿನ ವಿವಿಧೆಡೆ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪಿಸಲಾಗಿದೆ. ಶೀಘ್ರ ಲೋಕಾರ್ಪಣೆ ಮಾಡಲಾಗುವುದು. ವೇದಾವತಿ ನದಿಗೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ವಿಶೇಷ ಅನುದಾನ ಮೀಸಲಿಡಲಾಗಿದೆ. ಸಂಗೇನಹಳ್ಳಿ ಸಮೀಪ ವೇದಾವತಿ ನದಿಗೆ ತೂಗು ಸೇತುವೆ ನಿರ್ಮಾಣಕ್ಕೆ ಶೀಘ್ರ ಚಾಲನೆ ನೀಡಲಾಗುವುದು ಎಂದರು.

ಅಂಗನವಾಡಿ ಕೇಂದ್ರಗಳಿಗೆ ಅನುದಾನ

ಮಕ್ಕಳ ಕಲಿಕೆಗೆ ಮೊದಲ ಮೆಟ್ಟಿಲಾಗಿರುವ ಅಂಗನವಾಡಿ ಕೇಂದ್ರಗಳ ಸ್ಥಾಪನೆ, ಅಗತ್ಯ ಮೂಲ ಸೌಕರ್ಯ, ಶುದ್ಧ ಕುಡಿವ ನೀರು, ಮಕ್ಕಳ ಸುರಕ್ಷತೆ, ಗುಣಮಟ್ಟದ ಆಹಾರ ವಿತರಣೆಗೆ ಕ್ರಮವಹಿಸಲಾಗಿದೆ. ಅಗತ್ಯ ಇರುವೆಡೆ ಹೊಸ ಅಂಗನವಾಡಿ ಸ್ಥಾಪನೆಗೆ ವಿಶೇಷ ಅನುದಾನ ನೀಡಲಾಗುವುದು ಎಂದು ಹೇಳಿದರು.
ತಾಪಂ ಮಾಜಿ ಸದಸ್ಯ ಓಂಕಾರಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಹೇಮಂತ್ ಯಾದವ್, ಸದಸ್ಯ ಏಕಾಂತಪ್ಪ, ಗಿರೀಶ್, ಗೌರೀಶ್, ಪ್ರಕಾಶ್, ಪ್ರಶಾಂತ್, ಉಮೇಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net