ಪವನ ಯಂತ್ರಗಳ ತೆರವಿಗೆ ಆಗ್ರಹ

ಜನವಸತಿ ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ಅಳವಡಿಸಿರುವ ಪವನ ವಿದ್ಯುತ್ ಯಂತ್ರಗಳ ತೆರವಿಗೆ ಒತ್ತಾಯಿಸಿ ರೈತಸಂಘದ ಪದಾಧಿಕಾರಿಗಳು ತಹಸೀಲ್ದಾರ್ ನಾಗವೇಣಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ, ಬೇಡರಡ್ಡಿಹಳ್ಳಿ ಬಸವರಡ್ಡಿ, ಸೂರಮ್ಮನಹಳ್ಳಿ ರಾಜಣ್ಣ, ಕೆ.ಟಿ. ತಿಪ್ಪೇಸ್ವಾಮಿ ಇತರರಿದ್ದರು.
ಜನವಸತಿ ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ಅಳವಡಿಸಿರುವ ಪವನ ವಿದ್ಯುತ್ ಯಂತ್ರಗಳ ತೆರವಿಗೆ ಒತ್ತಾಯಿಸಿ ರೈತಸಂಘದ ಪದಾಧಿಕಾರಿಗಳು ತಹಸೀಲ್ದಾರ್ ನಾಗವೇಣಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ, ಬೇಡರಡ್ಡಿಹಳ್ಳಿ ಬಸವರಡ್ಡಿ, ಸೂರಮ್ಮನಹಳ್ಳಿ ರಾಜಣ್ಣ, ಕೆ.ಟಿ. ತಿಪ್ಪೇಸ್ವಾಮಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮೊಳಕಾಲ್ಮೂರಿನಲ್ಲಿ ರೈತರ ಪ್ರತಿಭಟನೆ
  • ತಹಸೀಲ್ದಾರ್‌ಗ ಮನವಿ ಸಲ್ಲಿಕೆ
ಮೊಳಕಾಲ್ಮೂರು: ಜನವಸತಿ ಪ್ರದೇಶದಲ್ಲಿ ಅಳವಡಿಸಿರುವ ಪವನ ಯಂತ್ರಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿ ರೈತಸಂಘದ ಪದಾಧಿಕಾರಿಗಳು ಬುಧವಾರ ತಾಲೂಕು ಆಡಳಿತ ಸೌಧದ ಮುಂದೆ ಪ್ರತಿಭಟನೆ ನಡೆಸಿದರು.
ತಾಲೂಕಿನ ಅನೇಕ ಕಡೆಗಳಲ್ಲಿ ಪವನ ವಿದ್ಯುತ್ ಯಂತ್ರಗಳನ್ನು ಅಳವಡಿಸಲು ಕೆಲ ಮಾನದಂಡಗಳನ್ನು ಪಾಲಿಸಿಲ್ಲ. ಕರ್ಕಶ ಶಬ್ಧದಿಂದ ಜನ, ಜಾನುವಾರುಗಳಿಗೆ ಕಿರಿಕಿರಿ ತಂದೊಡ್ಡಿದೆ. ಅಡವಿಯ ಪ್ರಾಣಿ, ಪಕ್ಷಿಗಳ ಜೀವಕ್ಕೂ ಕುತ್ತು ತರುವ ಆಂತಕವಿದೆ. ಅಧಿಕಾರಿಗಳು ಕಂಪನಿ ಮಾಲೀಕರ ಜತೆ ಶಾಮೀಲಾಗಿರುವ ಸಂಶಯವಿದೆ. ಜನರ ಸುರಕ್ಷತೆ ದೃಷ್ಟಿಯಿಂದ ಶಾಸಕರು ಅವುಗಳ ತೆರವಿಗೆ ತಾಲೂಕು ಹಾಗೂ ಜಿಲ್ಲಾಡಳಿತಕ್ಕೆ ಒತ್ತಡ ತರಬೇಕು ಎಂದು ಆಗ್ರಹಿಸಿದರು.
ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ ಮಾತನಾಡಿ, ಪವನ ವಿದ್ಯುತ್ ಯಂತ್ರ ಮತ್ತು ಸೊಲಾರ್‌ನಿಂದ ರೈತರಿಗೆ ಆಗಿರುವ ತೊಂದರೆ ನಿವಾರಿಸಬೇಕು. ಒಂದು ಯಂತ್ರಕ್ಕೆ 25 ಲಕ್ಷ ರೂ. ವರೆಗೂ ರೈತರಿಗೆ ಪರಿಹಾರ ಕೊಡಬೇಕು. ಅಧಿಕಾರಿಗಳು ಹಾಗೂ ರಾಜಕೀಯ ಪ್ರಭಾವದಲ್ಲಿ 8-10 ಲಕ್ಷ ಕೊಟ್ಟು ಅಗ್ರಿಮೆಂಟ್ ಮಾಡಿಕೊಂಡಿರುವ ನಡೆ ಸರಿಯಲ್ಲ ಎಂದು ಆಕ್ಷೇಪಿಸಿದರು.
ಎಲ್ಲ ರೈತರಿಗೂ ಸೂಕ್ತ ಪರಿಹಾರ ಸಿಗಬೇಕು. ಕೆಲವೆಡೆ ತೋಟದ ಮನೆ ಹತ್ತಿರದಲ್ಲೇ ಯಂತ್ರಗಳನ್ನು ಅಳವಡಿಸಿರುವುದರಿಂದ ಶಬ್ಧಕ್ಕೆ ಮನೆಯಲ್ಲಿರುವ ಸಣ್ಣ ಮಕ್ಕಳು ಹಾಗೂ ಸಾಕು ಪ್ರಾಣಿಗಳು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ಹೊಸದಾಗಿ ಪವನ ವಿದ್ಯುತ್ ಯಂತ್ರಗಳ ಅಳವಡಿಕೆ ಕಾಮಗಾರಿ ಕೆಲಸ ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ಜನರ ಕಷ್ಟ ಕಾರ್ಪಣ್ಯ ಕೇಳುವವರೇ ಇಲ್ಲದಂತಾಗಿದೆ. ಅಧಿಕಾರ ಯಾರಿಗೂ ಶಾಶ್ವತವಲ್ಲ. ಗ್ಯಾರಂಟಿ ಹೆಸರಿನಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಜನಹಿತ ಮರೆತಿದೆ. ಬರಗಾಲದ ಛಾಯೆ ಎದುರಾಗಿದ್ದರೂ ಪೂರಕ ಸಿದ್ಧತೆ ಮಾಡಿಕೊಂಡಿಲ್ಲ. ತಾಲೂಕಿನ ಆಯ್ದ ಕಡೆ ಗೋಶಾಲೆಗಳನ್ನು ತೆರೆಯಬೇಕು. ಸಮರ್ಪಕ ಮೇವು, ನೀರಿನ ವ್ಯವಸ್ಥೆ ಆಗಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಬೇಡರಡ್ಡಿಹಳ್ಳಿ ಬಸವರಡ್ಡಿ ಮಾತನಾಡಿ, ರೈತರಿಗೆ ಹಣದ ಆಸೆ ತೋರಿಸಿ ಜಮೀನುಗಳಲ್ಲಿ ಹಾಕುತ್ತಿರುವ ಗಾಳಿ ಯಂತ್ರಗಳ ಹಾವಳಿ ಹೆಚ್ಚಾಗಿದೆ. ಕಂಪನಿಯವರು ನಿಗದಿ ಮಾಡಿದ ಹಣಕ್ಕೆ ರೈತರು ಒಪ್ಪದಿದ್ದರೆ ಅಧಿಕಾರ ಮತ್ತು ರಾಜಕೀಯ ಪ್ರಭಾವದ ಒತ್ತಡ ತರುತ್ತಿದ್ದಾರೆ. ಕೋನಸಾಗರದ ಸಮೀಪ ಇಂಜಿನಿಯರ್ ಬಸಯ್ಯ ಅವರ ತೋಟದ ಪಕ್ಕದಲ್ಲಿ ಹಾಕಿರುವ ಸೋಲಾರ್ ಘಟಕಕ್ಕೆ ದಾರಿ ಇಲ್ಲ. ಪಕ್ಕದಲ್ಲಿರುವ ಅರಣ್ಯ ಒತ್ತುವರಿ ಮಾಡಿದ್ದಾರೆ. ಗಾಳಿ ಯಂತ್ರಗಳ ಅಳವಡಿಕೆಗೂ ಸಹಿತ ಸರ್ಕಾರದ ಮಾರ್ಗಸೂಚಿ ಅನ್ವಯಿಸಿಲ್ಲ. ಹೀಗಿದ್ದರೂ ತಾಲೂಕು ಆಡಳಿತ ಮೌನ ವಹಿಸಿದೆ ಎಂದು ಆಪಾದಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಸೂರಮ್ಮನಹಳ್ಳಿ ರಾಜಣ್ಣ, ಜಿಲ್ಲಾಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ, ಮಹೇಶ, ಮುತ್ತಯ್ಯ, ಪ್ರಕಾಶ, ಮಹಲಿಂಗಪ್ಪ, ನಿಂಗಣ್ಣ, ಬಸವರಾಜ್, ಮುಕ್ಕಣ್ಣ, ಶಿವಮೂರ್ತಿ, ವೀರಣ್ಣ, ನಾಗರಾಜ, ಲೋಕೇಶ್, ಮಲ್ಲಯ್ಯ, ಸೂರನಾಯಕ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net