ಪರಶುರಾಮಪುರದಲ್ಲಿ ಬಿಸಿಎಂ ಹಾಸ್ಟೆಲ್ ಸ್ಥಾಪನೆಗೆ ಒತ್ತಾಯ College

ಪರಶುರಾಮಪುರದ ಸರ್ಕಾರಿ ಕಾಲೇಜು. College
ಪರಶುರಾಮಪುರದ ಸರ್ಕಾರಿ ಕಾಲೇಜು. College
Published on

ಪ್ರಮುಖ ಮುಖ್ಯಾಂಶಗಳು

  • ವಿವಿಧ ಕಾಲೇಜುಗಳ 700ಕ್ಕೂ ಅಧಿಕ ಹಿಂದುಳಿದ ವರ್ಗದ ವಿದ್ಯಾರ್ಥಿಗಳು
  • ಊಟ, ವಸತಿ ವ್ಯವಸ್ಥೆ ಇಲ್ಲದೆ ನಗರಗಳತ್ತ ಚಿತ್ತ
ಪರಶುರಾಮಪುರ: ಕಾಲೇಜು ವಿದ್ಯಾರ್ಥಿಗಳಿಗೆ ಹೋಬಳಿ ಕೇಂದ್ರದಲ್ಲಿ ಸರ್ಕಾರ ಬಿಸಿಎಂ ಹಾಸ್ಟೆಲ್ ಮಂಜೂರು ವಾಡಬೇಕೆಂದು ಗ್ರಾಮಸ್ಥರ ಒತ್ತಾಸೆಯಾಗಿದೆ. College
ಪರಶುರಾಮಪುರದಲ್ಲಿ ಕರ್ನಾಟಕ ಪಬ್ಲಿಕ್‌ಸ್ಕೂಲ್‌ನ ಪಿಯು ವಿಭಾಗ, ಸರ್ಕಾರಿ ಐಟಿಐ ಕಾಲೇಜು, ಸರ್ಕಾರಿ ಪ್ರಥಮದರ್ಜೆ ಕಾಲೇಜು, ವೇದಾವತಿ ಬಿಇಡಿ ಕಾಲೇಜು, ಶಾರದಾ ನಂದಗೋಕುಲ ಐಟಿಐ ಕಾಲೇಜು, ಸರ್ವೋದಯ ಪಿಯು ಕಾಲೇಜು ಸೇರಿ ಹಲವು ಶಿಕ್ಷಣ ಸಂಸ್ಥೆಗಳಿವೆ.
ಗ್ರಾಮದಲ್ಲಿ 2 ಮೆಟ್ರಿಕ್‌ಪೂರ್ವ ಬಾಲಕ, ಬಾಲಕಿಯರ ವಸತಿ ನಿಲಯ, 4,050 ವಿದ್ಯಾರ್ಥಿಗಳಿಗೆ ಎಸ್‌ಸಿ, ಎಸ್‌ಟಿ ಕಾಲೇಜು ವಸತಿ ನಿಲಯಗಳಿವೆ. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಅನುಕೂಲಕ್ಕೆ ಹಾಸ್ಟೆಲ್ ವ್ಯವಸ್ಥೆ ಇಲ್ಲ.
ಹೋಬಳಿಯಲ್ಲಿ 700ಕ್ಕೂ ಅಧಿಕ ಸಂಖ್ಯೆಯಲ್ಲಿ ಹಿಂದುಳಿದ ವರ್ಗಗಳ ಕಾಲೇಜು ವಿದ್ಯಾರ್ಥಿಗಳಿದ್ದಾರೆ. ಹಾಸ್ಟೆಲ್ ವ್ಯವಸ್ಥೆ ಇಲ್ಲದ ಕಾರಣ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ನಗರ ಪ್ರದೇಶಗಳಿಗೆ ಹೋಗುವಂತಾಗಿದೆ.
ಗ್ರಾಮದಿಂದ 2ಕಿಮೀ ದೂರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಇಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ತಮ್ಮ ಗ್ರಾಮಗಳಿಂದ ನಿತ್ಯ ಓಡಾಡುವುದು ಕಷ್ಟವಾಗಿದೆ. ಆದ ಕಾಣ ವರ್ಷದಿಂದ ವರ್ಷಕ್ಕೆ ದಾಖಲಾತಿ ಪ್ರಮಾಣ ಕುಸಿಯುತ್ತಿದೆ. ಬಡ ಕೂಲಿ ಕಾರ್ಮಿಕರ ಮಕ್ಕಳ ಶಿಕ್ಷಣದ ದೃಷ್ಟಿಯಿಂದ ಕಾಲೇಜುಗಳನ್ನು ತೆರೆಯಲಾಗಿದೆ. ಆದರೆ, ವಸತಿ ನಿಲಯದ ವ್ಯವಸ್ಥೆ ಇಲ್ಲದೆ ಆರ್ಥಿಕ ಸಂಕಷ್ಟ ನಡುವೆ ನಗರ ಪ್ರದೇಶಗಳಿಗೆ ಉನ್ನತ ವ್ಯಾಸಂಗಕ್ಕಾಗಿ ಹೋಗುತ್ತಿದ್ದಾರೆ.
ಪರಶುರಾಮಪುರ ಹೋಬಳಿ 52 ಹಳ್ಳಿಗಳು, 10 ಗ್ರಾಪಂ ಕೇಂದ್ರಗಳನ್ನು ಹೊಂದಿದ್ದು ಆಂಧ್ರ ಗಡಿ ಅಂಚಿನಲ್ಲಿದೆ. ದೂರದ ನಗರ ಪ್ರದೇಶಗಳಿಗೆ ಹೋಗಿ ವಿದ್ಯಾಭ್ಯಾಸ ಪಡೆಯುವುದು ಆರ್ಥಿಕ ಹೊರೆಯಾಗಲಿದೆ.
ಹೋಬಳಿ ವ್ಯಾಪ್ತಿಯ ಪರಶುರಾಮಪುರ, ಪಿ ಮಹದೇವಪುರ, ಸಿದ್ದೇಶ್ವರನದುರ್ಗ, ಟಿ.ಎನ್. ಕೋಟೆ, ಬೆಳಗೆರೆ, ಪಗಡಲಬಂಡೆ, ಜಾಜೂರು, ಚೌಳೂರು, ದೇವರಮರಿಕುಂಟೆ, ಸಿ.ಎನ್.ಹಳ್ಳಿ, ದೊಡ್ಡಚೆಲ್ಲೂರು ಗ್ರಾಪಂ ವ್ಯಾಪ್ತಿಯ ನೂರಾರು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬಿಸಿಎಂ ಹಾಸ್ಟೆಲ್ ಆರಂಭಿಸಬೇಕು ಎಂದು ಗ್ರಾಮಸ್ಥರಾದ ಹೊರಕೇರಿ ಕೇಶವ, ತಿಪ್ಪೇರುದ್ರಪ್ಪ, ಬೊಮ್ಮಯ್ಯ, ಮುತ್ತಯ್ಯ, ಶಿವಲಿಂಗಪ್ಪ, ರಂಗನಾಥ, ಸಾಕಮ್ಮ, ಚಿತ್ರಲಿಂಗಪ್ಪ, ಭಾರತಿ, ದೇವಿಕಾ, ಭೂಮಿಕಾ, ತಿಮ್ಮಯ್ಯ, ರಾಜು, ನಾಗರಾಜು, ರಾಮಣ್ಣ, ರಾಜಣ್ಣ, ವೆಂಕಟೇಶ ಇತರರು ಒತ್ತಾಯಿಸಿದ್ದಾರೆ.
"

ಹೋಬಳಿಯ ಹಿಂದುಳಿದ ವರ್ಗದ ಮಕ್ಕಳಿಗೆ ಪಿಯುಸಿ, ಪದವಿ ಹಂತದ ಶಿಕ್ಷಣ ಪಡೆಯಲು ಹೋಬಳಿ ಕೇಂದ್ರದಲ್ಲಿ ಒಂದು ಬಿಸಿಎಂ ಹಾಸ್ಟಲ್ ಅಗತ್ಯವಿದೆ. ಹಾಸ್ಟೆಲ್ ಇಲ್ಲದ ಕಾರಣ ವಿದ್ಯಾರ್ಥಿಗಳು ದೂರದ ನಗರಗಳಿಗೆ ತೆರಳುತ್ತಿದ್ದಾರೆ.

— ದೊಡ್ಡಗೊಲ್ಲರಹಟ್ಟಿ ಕೃಷ್ಣಪ್ಪ, ಗ್ರಾಪಂ ವಾಜಿ ಸದಸ್ಯ.
"

ಪರಶುರಾಮಪುರ ಹೋಬಳಿಯ ಮಕ್ಕಳು ವಿದ್ಯಾಭ್ಯಾಸಕ್ಕೆ ದೂರದ ನಗರ ಪ್ರದೇಶಕ್ಕೆ ಹೋಗುವುದು ಕಷ್ಟಕರ. ಸರ್ಕಾರ ಇಲ್ಲಿ ಬಿಸಿಎಂ ಹಾಸ್ಟೆಲ್ ಮಂಜೂರು ಮಾಡಿ ಅನುಕೂಲ ಮಾಡಿಕೊಡಬೇಕು.

— ಟಿ.ಎಂ. ವಾಲ್ಮೀಕಿ, ಪದಾಧಿಕಾರಿ ವಾಲ್ಮೀಕಿ ಯುವಕ ಸಂ. ಪರಶುರಾಮಪುರ
"

ಪರಶುರಾಮಪುರ ಹೋಬಳಿಯಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಐಟಿಐ, ಪಿಯು, ಬಿಇಡಿ, ಪದವಿ ಕೋರ್ಸ್‌ಗಳಿಗೆ ದಾಖಲಾತಿ ಮತ್ತು ಹಾಜರಾತಿ ಹೆಚ್ಚಿಸಬೇಕಾದರೆ ಬಿಸಿಎಂ ಹಾಸ್ಟೆಲ್ ಮಂಜೂರು ಮಾಡಬೇಕು. ಇದರಿಂದ ಗಡಿಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ.

— ಧನಂಜಯ ಎಂ.ಬಿ. ಪ್ರಾಚಾರ್ಯ, ಸರ್ಕಾರಿ ಪದವಿ ಕಾಲೇಜು, ಪರಶುರಾಮಪುರ
"

ಗ್ರಾಮಸ್ಥರ ಮನವಿಯಂತೆ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಿಸಿಎಂ ವಿದ್ಯಾರ್ಥಿಗಳ ಮಾಹಿತಿ ಪಡೆದು ಪರಶುರಾಮಪುರ ಹೋಬಳಿ ಕೇಂದ್ರದಲ್ಲಿ ಬಿಸಿಎಂ ವಸತಿ ನಿಲಯ ಮಂಜೂರಾತಿಗೆ ಇಲಾಖೆ ಮೇಲಾಧಿಕಾರಿಗೆ ಸಾರ್ವಜನಿಕರ ಮನವಿ ಪತ್ರದೊಂದಿಗೆ ವರದಿ ಕಳುಹಿಸಲಾಗುವುದು.

— ರಮೇಶ, ಬಿಸಿಎಂ ಅಧಿಕಾರಿ, ತಾಲೂಕು ಬಿಸಿಎಂ ಇಲಾಖೆ, ಚಳ್ಳಕೆರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net