ಶೇಂಗಾ, ತೊಗರಿ ಬೆಳೆ ವಿಮೆ ವಿಳಂಬ:ಹೆದ್ದಾರಿ ತಡೆ..crop insurance

ಚಳ್ಳಕೆರೆ ತಾಲೂಕಿನ ಗರಣಿ‌ ಕ್ರಾಸ್ ಬಳಿ ಬುಧವಾರ ಬೆಳೆ ವಿಮೆ ಮತ್ತು ಪರಿಹಾರಕ್ಕಾಗಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. crop insurance
ಚಳ್ಳಕೆರೆ ತಾಲೂಕಿನ ಗರಣಿ‌ ಕ್ರಾಸ್ ಬಳಿ ಬುಧವಾರ ಬೆಳೆ ವಿಮೆ ಮತ್ತು ಪರಿಹಾರಕ್ಕಾಗಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. crop insurance
Published on

ಪ್ರಮುಖ ಮುಖ್ಯಾಂಶಗಳು

  • ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲ್ಲೂಕಿನ ರೈತರಿಗೆ ಶೇಂಗಾ ಮತ್ತು ತೊಗರಿ ಬೆಳೆ ನಷ್ಟ
  • ರಾಜ್ಯ ರೈತ ಸಂಘಟನೆ ವತಿಯಿಂದ ಗರಣಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ
  • ಸ್ಥಳಕ್ಕೆ ತಹಸೀಲ್ದಾರ್ ರೇಹಾನ್ ಪಾಷಾ ಭೇಟಿ

ಚಳ್ಳಕೆರೆ: ರಾಜ್ಯ ರೈತ ಸಂಘಟನೆಯ ಪದಾಧಿಕಾರಿಗಳು ಬುಧವಾರ ಚಳ್ಳಕೆರೆ ತಾಲ್ಲೂಕಿನ ತಳುಕು ಸಮೀಪದ ಗರಣಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಬೃಹತ್ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರು ಆಡಳಿತ ಸರ್ಕಾರಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಶೇಂಗಾ ಮತ್ತು ತೊಗರಿ ಬೆಳೆ ನಷ್ಟದಿಂದ ಸಂಕಷ್ಟಕ್ಕೀಡಾಗಿರುವ ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲ್ಲೂಕಿನ ರೈತರಿಗೆ ಕೂಡಲೇ ಮಧ್ಯಂತರ ಬೆಳೆ ವಿಮೆ ಮತ್ತು ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

"ಸರ್ಕಾರಗಳು ಚಳ್ಳಕೆರೆ ಮತ್ತು ಮೊಳಕಾಲ್ಮೂರು ಎರಡೂ ಕ್ಷೇತ್ರಗಳನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿವೆ. ಈ ವರ್ಷ ಮುಂಗಾರು ಮಳೆ ಆರಂಭದಿಂದಲೂ ಸಮಸ್ಯೆ ಉಂಟಾಗಿದೆ. ಬೆಂಕಿ ರೋಗ ಮತ್ತು ಮಳೆಯ ಕೊರತೆಯಿಂದಾಗಿ ಶೇಂಗಾ ಮತ್ತು ತೊಗರಿ ಬೆಳೆ ಸಂಪೂರ್ಣ ನಾಶವಾಗಿದೆ. ಇದುವರೆಗೂ ಯಾವುದೇ ಪರಿಹಾರ ನೀಡಲಾಗಿಲ್ಲ," ಎಂದು ದೂರಿದರು.

ವಿಮಾ ಕಂಪನಿಗಳ ವಿರುದ್ಧ ಗಂಭೀರ ಆರೋಪ

ರೈತರಿಂದ ವಿಮೆ ಹಣ ಕಟ್ಟಿಸಿಕೊಂಡಿರುವ ವಿಮಾ ಕಂಪನಿಗಳು ಶೇ. 25 ರಷ್ಟು ಮಧ್ಯಂತರ ವಿಮೆ ನೀಡುತ್ತೇವೆ ಎಂದು ಭರವಸೆ ನೀಡಿದ್ದವು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ವಿಮೆ ಹಣವೂ ರೈತರಿಗೆ ಸಿಗುತ್ತಿಲ್ಲ. ತಾಲ್ಲೂಕು ಆಡಳಿತ ಮತ್ತು ಕೃಷಿ ಇಲಾಖೆಗಳು ಕೇವಲ ಬೆಳೆ ನಷ್ಟ ಸಮೀಕ್ಷೆ ನಡೆಸುವ ನೆಪದಲ್ಲಿ ಕಾಲ ಕಳೆಯುತ್ತಿವೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಸಚಿವ ಸ್ಥಾನದ ಬೇಡಿಕೆ

ಈ ಭಾಗದಲ್ಲಿ ಎಸ್ಸಿ, ಎಸ್ಟಿ ಜನಾಂಗದವರು ಹೆಚ್ಚಾಗಿದ್ದೇವೆ. ಬದುಕಿನ ಭದ್ರತೆ ಇಲ್ಲ. ಕೂಲಿ ಮಾಡುವ ಕೈಗಳಿಗೆ ಸ್ಥಳೀಯವಾಗಿ ಕೆಲಸ ಸಿಗುತ್ತಿಲ್ಲ. ಈ ಎರಡು ಕ್ಷೇತ್ರಗಳ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಶಾಸಕರಾದ ಟಿ. ರಘುಮೂರ್ತಿ ಇಲ್ಲವೇ ಎನ್. ವೈ. ಗೋಪಾಲಕೃಷ್ಣ ಇವರಲ್ಲಿ ಯಾರಿಗಾದರೂ ಸಚಿವ ಸ್ಥಾನ ನೀಡಬೇಕು ಎಂದು ರೈತ ಸಂಘಟನೆ ಸರ್ಕಾರವನ್ನು ಬಲವಾಗಿ ಆಗ್ರಹಿಸಿತು.

ತಹಸೀಲ್ದಾರ್ ಭರವಸೆ

ಪ್ರತಿಭಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ರೇಹಾನ್ ಪಾಷಾ ಅವರು ರೈತರೊಂದಿಗೆ ಮಾತನಾಡಿದರು. "ತಾಲ್ಲೂಕಿನಲ್ಲಿ ಮಳೆಯ ಕೊರತೆಯಿಂದ ಬೆಳೆ ನಷ್ಟವಾಗಿರುವ ಬಗ್ಗೆ ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಶೀಘ್ರದಲ್ಲಿಯೇ ಬೆಳೆ ಪರಿಹಾರ ಮತ್ತು ವಿಮೆ ಹಣ ಬಿಡುಗಡೆಗೆ ಅವಕಾಶ ಆಗಲಿದೆ. ನಿಮ್ಮ ಬೇಡಿಕೆಗಳ ಮನವಿ ಪತ್ರವನ್ನು ಸರ್ಕಾರಕ್ಕೆ ಕಳುಹಿಸಿ ಕೊಡುತ್ತೇನೆ" ಎಂದು ಭರವಸೆ ನೀಡಿದರು.

ರಾಜ್ಯ ರೈತ ಸಂಘದ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಹಿರೇಹಳ್ಳಿ ರಾಜಣ್ಣ, ಟಿ. ಗಂಗಾಧರ, ವೆಂಕಟೇಶ, ರವಿ ಕುಮಾರ್, ಶಿವಮೂರ್ತಿ, ಮೈಲಾರಿ, ರಾಮಸ್ವಾಮಿ, ಈರಣ್ಣ, ಅಂಜೀನಪ್ಪ, ಚಿತ್ತಯ್ಯ ಸೇರಿದಂತೆ ಅನೇಕ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net