ಹಿರಿಯೂರು: ಬುಡಕಟ್ಟು ಪರಂಪರೆ ಹೊಂದಿರುವ ಕಾಡುಗೊಲ್ಲ ಸಮುದಾಯಕ್ಕೆ ಎಸ್‌ಟಿ ಮೀಸಲಾತಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ಚಿತ್ರದುರ್ಗದಿಂದ ವಿಧಾನಸೌಧದವರೆಗೆ ಮಠಾಧೀಶರ ನೇತೃತ್ವದಲ್ಲಿ ಪಾದಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ ಎಂದು ನೆಲಮಂಗಲ ಸಮೀಪದ ವನಕಲ್ಲು ಮಠದ ರಮಾನಂದ ಸ್ವಾಮೀಜಿ ಹೇಳಿದರು. Reservation
ತಾಲೂಕಿನ ಜೆ.ಜಿ. ಹಳ್ಳಿಯಲ್ಲಿ ಮಂಗಳವಾರ ಆಯೋಜಿಸಿದ್ದ ಕಾಡುಗೊಲ್ಲ ಸಮುದಾಯದ ಪ್ರಮುಖರ ಸಭೆಯಲ್ಲಿ ಮಾತನಾಡಿ, ಈ ಮೊದಲು ಬುರುಜಿರೊಪ್ಪ ಗ್ರಾಮದ ಗಣಪತಿ ದೇವಸ್ಥಾನದಿಂದ ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿತ್ತು. ವಿವಿಧ ಮಠಾಧೀಶರು ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವ ಕಾರಣ ಈ ಪಾದಯಾತ್ರೆ ರದ್ದುಪಡಿಸಿ ಚಿತ್ರದುರ್ಗದಿಂದ ವಿಧಾನಸೌಧದವರೆಗೆ ಸಾವಿರಾರು ಸಂಖ್ಯೆಯಲ್ಲಿ ಪಾದಯಾತ್ರೆ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸ್ವಾಮೀಜಿ ತಿಳಿಸಿದರು.
ಕಾಡುಗೊಲ್ಲರು ಇಂದಿಗೂ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕವಾಗಿ ಹಿಂದುಳಿದಿದ್ದಾರೆ. ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪರಿಶಿಷ್ಟ ಪಂಗಡದ ಮೀಸಲಾತಿ ಅನಿವಾರ್ಯ. ಹಿಂದುಳಿದ ಸಮುದಾಯದ ಬಹುತೇಕ ಮಠಾಧೀಶರು ನಮ್ಮ ಬೇಡಿಕೆಗೆ ಸ್ಪಂದಿಸಿದ್ದಾರೆ. ಅವರೆಲ್ಲರ ನೇತೃತ್ವದಲ್ಲಿ ಪಾದಯಾತ್ರೆ ನಡೆಸಲಾಗುವುದು. ಇದು ಕಾಡುಗೊಲ್ಲ ಸಮುದಾಯದ ಅಳಿವು ಉಳಿವಿನ ಹೋರಾಟ ಎಂದೇ ಭಾವಿಸಿದ್ದೇವೆ ಎಂದರು.
ರಾಜ್ಯ ಸರ್ಕಾರ ಕೇಂದ್ರದಿಂದ ಕೇಳಿರುವ ಕೆಲವು ಪ್ರಶ್ನೆಗಳಿಗೆ ಉತ್ತರಿಸಿ ಕಡತ ಕಳಿಸಿದರೆ ಎಸ್‌ಟಿ ಮೀಸಲಾತಿಗೆ ಆದೇಶ ಹೊರಡಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುತ್ತೇವೆ. ನಮ್ಮ ಹೋರಾಟಕ್ಕೆ ಕಾಡುಗೊಲ್ಲ ಸಮುದಾಯದ ಎಲ್ಲರೂ ಸಹಕರಿಸಬೇಕು ಎಂದು ಸ್ವಾಮೀಜಿ ಮನವಿ ಮಾಡಿದರು.
ಜಿಪಂ ಮಾಜಿ ಸದಸ್ಯ ಸಿ.ಬಿ. ಪಾಪಣ್ಣ ಮಾತನಾಡಿ, ಬಯಲು ಸೀಮೆ ಜಿಲ್ಲೆಗಳಲ್ಲಿ ಕಾಡುಗೊಲ್ಲರು ಹೆಚ್ಚಿನ ಸಖ್ಯೆಯಲ್ಲಿದ್ದು, ಕೃಷಿ, ಪಶು ಪಾಲನೆಯಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಸಮುದಾಯದ ಮಕ್ಕಳ ಭವಿಷ್ಯಕ್ಕೆ ಎಸ್ಟಿ ಮೀಸಲಾತಿ ಅನಿವಾರ್ಯ. ಪಕ್ಷಾತೀತವಾಗಿ ಪಾದಯಾತ್ರೆ ಬೆಂಬಲಿಸಬೇಕು. 21 ಜನ ಅಹಿಂದ ವರ್ಗದ ಸ್ವಾಮೀಜಿಗಳ ನೇತೃತ್ವದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.