ಚಿತ್ರದುರ್ಗ: ಮನೋದಾಸ್ಯ, ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದ ಛಡಿ ಏಟಿನ ಚೌಡಯ್ಯ ಅವರು ವಿಶ್ವಮಾನವ ಸಂದೇಶ ಭಿತ್ತಿದ್ದವರೆಂದು ಸಾಹಿತಿ ಗೀತಾ ಭರಮಸಾಗರ ಹೇಳಿದರು.
ಜಿಲ್ಲಾಡಳಿತ, ಜಿಪಂ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಗಂಗಾಭಿಕ ಬೆಸ್ತರ ಸಂಘದ ಆಶ್ರಯದಲ್ಲಿ ಡಿಸಿ ಕಚೇರಿ ಯಲ್ಲಿ ಬುಧವಾರ ಆಯೋಜಿಸಿದ್ದ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಜಯಂತ್ಯುತ್ಸವದಲ್ಲಿ ಮಾತನಾಡಿದರು.
ಸಮಾಜದಲ್ಲಿದ್ದ ಜಾತಿ ಪದ್ಧತಿ, ಮೌಢ್ಯ, ಅನ್ಯಾಯಗಳನ್ನು ಚೌಡಯ್ಯನವರು ತಮ್ಮ ವಚನಗಳಲ್ಲಿ ಕಟುವಾಗಿ ಟೀಕಿಸಿದ್ದಾರೆ. ಸರ್ವಜ್ಞರ ವಚನಗಳನ್ನು ಸಿಡಿಲ ನುಡಿ ಎಂದು ಕರೆದರೆ, ಚೌಡಯ್ಯನವರ ವಚನಗಳನ್ನು ಛಡಿ ಏಟಿನ ನುಡಿ ಎಂದು ಬಣ್ಣಿಸಲಾಗಿದೆ. ಶೋಷಿತ ಸಮುದಾಯಗಳ ಏಳಿಗೆ, ಸಮಾನತೆಯ ತತ್ವ ಸಾರಿದ ಚೌಡಯ್ಯನವರ ಬದುಕು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿದೆ ಎಂದರು.
೧೨ನೇ ಶತಮಾನದ ವಚನ ಚಳವಳಿ ಸಮಾಜದ ಮೇಲೆ ಬೀರಿದ ಪ್ರಭಾವ ಅನನ್ಯ. ಸಮಾಜದ ನಾನಾ ಸ್ತರದವರು ಅನುಭವ ಮಂಟಪದ ಮೂಲಕ ತಮ್ಮೊಳಗಿನ ಬೆಳಕನ್ನು ಕಂಡುಕೊAಡರು. ಜನಸಾಮಾನ್ಯರಿಗೂ ಬೆಳಕಾದರು. ಆ ಕಾಲದ ಖ್ಯಾತ ಶಿವಶರಣ ಅಂಬಿಗರ ಚೌಡಯ್ಯ ವೃತ್ತಿಯಲ್ಲಿ ದೋಣಿ ನಡೆಸುವವರಾಗಿದ್ದರೂ ಪ್ರವೃತ್ತಿಯಲ್ಲಿ ಅನುಭಾವಿ. ಅಂಬಿಗರ ಚೌಡಯ್ಯ ನಿಷ್ಠುರವಾದಿಯಾಗಿದ್ದರು. ನೇರ ನಡೆ, ನಿರ್ಭೀತ ನುಡಿ, ದಿಟ್ಟ ನಿಲುವು ಅವರ ವಚನಗಳಲ್ಲಿ ಕಾಣಬಹುದು ಎಂದರು.
ಎಸಿ ಮೆಹೂಬ್‌ಜಿಲಾನಿ ಖುರೇಷಿ ಮಾತನಾಡಿ, ೧೨ನೇ ಶತಮಾನದಲ್ಲಿ ಬಸವಣ್ಣನವರ ನೇತÊತ್ವದಲ್ಲಿ ನಡೆದ ಸಾಮಾಜಿಕ ಕ್ರಾಂತಿ ಅಽಕಾರ ಅಥವಾ ಹಣಕೋಸ್ಕರ ನಡೆದಿದ್ದಲ್ಲ. ಅದು ಸತ್ಯವನ್ನು ಉಳಿಸುವುದಕ್ಕಾಗಿ ನಡೆದ ಮಹಾನ್ ಚಳವಳಿಯಾಗಿದೆ. ಅಂಬಿಗರ ಚೌಡಯ್ಯ ಸೇರಿ ಎಲ್ಲ ಶರಣರು ವಚನ ಸಾಹಿತ್ಯ ಉಳಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು ಎಂದರು.
ಜಿಲ್ಲಾ ಗಂಗಾಭಿಕ ಬೆಸ್ತರ ಸಂಘದ ಅಧ್ಯಕ್ಷ ಎಚ್.ಡಿ. ರಂಗಯ್ಯ ಮಾತನಾಡಿ, ಚಿತ್ರದುರ್ಗ ನಗರದಲ್ಲಿ ಅಂಬಿಗರ ಚೌಡಯ್ಯ ಸ್ಮಾರಕ ನಿರ್ಮಿಸಲು ಭೂಮಿ ಮಂಜೂರಾತಿ ಹಾಗೂ ಕುಲಕಸುಬಗಳಾದ ಮೀನುಗಾರಿಕೆ ಹಾಗೂ ಸುಣ್ಣ ಸುಡಲು ಸೂಕ್ತ ಸ್ಥಳಾವಕಾಶ ಕಲ್ಪಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಜಿಲ್ಲಾ ಗಂಗಾಭಿಕ ಬೆಸ್ತರ ಸಮಾಜದ ಹಿರಿಯ ಮುಖಂಡ ಚಂದ್ರಣ್ಣ ಮಾತನಾಡಿ, ಸಮುದಾಯ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ತೀರಾ ಹಿಂದುಳಿದಿದೆ. ಮೀನುಗಾರಿಕೆ ಹರಾಜು ಪ್ರಕ್ರಿಯೆಯಲ್ಲಿ ಸಮುದಾಯಕ್ಕೆ ಆದ್ಯತೆ ನೀಡಿ, ಕುಲಕಸುಬುಗಳಿಗೆ ಒತ್ತು ನೀಡಬೇಕೆಂದು ಕೋರಿದರು.
ತಹಸೀಲ್ದಾರ್ ಗೋವಿಂದರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ. ಗುರುನಾಥ್, ಪಿ. ಶ್ರೀನಿವಾಸ್, ಕೃಷ್ಣಮೂರ್ತಿ, ರಂಗನಾಥ್, ಶಿವಕುಮಾರ್, ಚಂದ್ರ, ಬಹುಗುಣ, ಶಶಿ, ಟಿಪ್ಪುಖಾಸಿಂ ಅಲಿ ಮತ್ತಿತರರು ಇದ್ದರು.
ಚಳ್ಳಕೆರೆ ತಾಲೂಕಿನ ನೆಲಗೇತನಹಟ್ಟಿ ಮುತ್ತುರಾಜ್ ತಂಡದ ಕಲಾವಿದರು ಗೀತಗಾಯನ ನಡೆಸಿಕೊಟ್ಟರು. ನವೀನ್ ಮಸ್ಕಲ್ ನಿರೂಪಿಸಿದರು.