ಚಿತ್ರದುರ್ಗದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಭೋವಿ ಜನೋತ್ಸವ ಹಿನ್ನೆಲೆಯಲ್ಲಿ ಹೊಳಲ್ಕೆರೆಯಲ್ಲಿ ಶನಿವಾರ ಜರುಗಿದ ಪೂರ್ವಭಾವಿ ಸಭೆಯಲ್ಲಿ ಶಾಸಕ ಡಾ. ಎಂ. ಚಂದ್ರಪ್ಪ ಸಮುದಾಯದ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದರು. Bhovi
ಹೊಳಲ್ಕೆರೆ: ಚಿತ್ರದುರ್ಗದಲ್ಲಿ ಜು. 19ರಂದು ಹಮ್ಮಿಕೊಂಡಿರುವ ರಾಷ್ಟ್ರೀಯ ಭೋವಿ ಜನೋತ್ಸವವನ್ನು ಹಬ್ಬದಂತೆ ಆಚರಿಸಿ ಗುರುಗಳಿಗೆ ಗೌರವ ಸಮರ್ಪಿಸಲಾಗುವುದು. ಭೋವಿ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಶಾಸಕ ಡಾ.ಎಂ. ಚಂದ್ರಪ್ಪ ಮನವಿ ಮಾಡಿದರು. Bhovi
ಪಟ್ಟಣದಲ್ಲಿ ಶನಿವಾರ ಆಯೋಜಿಸಿದ್ದ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿ, ಭೋವಿ ಸಮಾಜವನ್ನು ಸಂಘಟಿಸುವ ದೃಷ್ಟಿಯಿಂದ ಪ್ರತಿವರ್ಷ ಭೋವಿ ಜನೋತ್ಸವ ನಡೆಸಲಾಗುತ್ತಿದೆ. ಈ ಮೂಲಕವಾದರೂ ಸಮುದಾಯದವರು ಸಂಘಟಿತರಾಗಬೇಕಿದೆ. ರಾಜಕಾರಣಿಗಳನ್ನು ಕರೆಸಿ ಸಮುದಾಯದ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟು ಸರ್ಕಾರದ ಸೌಲಭ್ಯ ಕಲ್ಪಿಸಿಕೊಡುವ ಉದ್ದೇಶ ಗುರುಗಳದ್ದಾಗಿದೆ ಎಂದು ತಿಳಿಸಿದರು.
ಸಿರಿಗೆರೆ ತರಳಬಾಳು ಜಗದ್ಗುರುಗಳು ಪ್ರತಿವರ್ಷ ನಡೆಸುವ ತರಳಬಾಳು ಹುಣ್ಣಿಮೆಗೆ ಲಕ್ಷಾಂತರ ಭಕ್ತರು ಸೇರುತ್ತಾರೆ. ಅದರಂತೆ ನಮ್ಮ ಸಮುದಾಯದ ಜನರೂ ಸೇರಿ ಜನೋತ್ಸವವಕ್ಕೆ ಮೆರುಗು ತರಬೇಕಾಗಿದೆ ಎಂದರು.
ಎಷ್ಟು ಜನ ಸೇರಬಹುದೆಂದು ಅಂದಾಜು ಪಟ್ಟಿ ಸಿದ್ಧಪಡಿಸಿಕೊಟ್ಟಲ್ಲಿ ಯಾರಿಗೂ ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸುವುದಾಗಿ ಮುಖಂಡರಿಗೆ ಭರವಸೆ ನೀಡಿದರು.
ಮೀಸಲಾತಿಯಲ್ಲಿ ನಮಗೆ ಅನ್ಯಾಯವಾಗಿದೆ. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಇದೊಂದು ಅವಕಾಶ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಭೋವಿ ಜನೋತ್ಸವಕ್ಕೆ ಬರಲು ಒಪ್ಪಿಕೊಂಡಿದ್ದಾರೆ. ಗುರುಗಳು ಅಹವಾಲುಗಳನ್ನು ಸಲ್ಲಿಸಿ ಭೋವಿ ಸಮುದಾಯಕ್ಕೆ ಸಿಗಬೇಕಾದ ಸಾಮಾಜಿಕ ನ್ಯಾಯ ಕೊಡಿಸುವುದು ಅವರ ಉದ್ದೇಶವಾಗಿದೆ. ಹಾಗಾಗಿ ಸಮುದಾಯದವರು ಸ್ವಯಂ ಪ್ರೇರಿತರಾಗಿ ಜನೋತ್ಸವದಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.
ಭೋವಿ ಸಮಾಜದ ಅಧ್ಯಕ್ಷ ಕೃಷ್ಣಪ್ಪ, ಗೌರವಾಧ್ಯಕ್ಷ ತಿಪ್ಪೇಸ್ವಾಮಿ, ಹನುಮಂತಪ್ಪ, ಡಿ.ಸಿ. ಮೋಹನ್, ಮಂಜಣ್ಣ, ಅಣ್ಣಪ್ಪ, ಅಂಜನಿ, ನಟೇಶ್, ತಿಪ್ಪೇಸ್ವಾಮಿ, ಲಕ್ಷ್ಮಣ್ ನಾಗರಾಜ್, ದೇವಣ್ಣ ಇತರರು ಇದ್ದರು.