ಚಿತ್ರದುರ್ಗ: ಶ್ರೇಷ್ಠ ಕಲಾವಿದ, ನಾಟಕಕಾರ ದಿ. ಅಶೋಕ್ ಬಾದರದಿನ್ನಿ ಅವರನ್ನು ನೆನಪು ಮಾಡಿಕೊಳ್ಳುವುದು ಪ್ರತಿಯೊಬ್ಬ ಕಲಾ ಪ್ರೇಮಿಗಳ ಆದ್ಯ ಕರ್ತವ್ಯ ಎಂದು ಬಾಪೂಜಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಕೆ.ಎಂ. ವೀರೇಶ್ ಹೇಳಿದರು.
ಬಾದರದಿನ್ನಿ ಆರ್ಟ್ಸ್ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಸಹಯೋಗದಲ್ಲಿ ನಗರದ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಾದರದಿನ್ನಿ ಅವರ ೭೫ನೇ ಜನ್ಮದಿನದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ `ಬಾದರದಿನ್ನಿ ಒಂದು ನೆನಪು' ರಂಗ ಉಪನ್ಯಾಸ ಮತ್ತು ರಂಗ ಗೀತೆಗಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಿರಿಗೆರೆ, ಸಾಣೇಹಳ್ಳಿ, ಮುರುಘಾಮಠದಲ್ಲಿ ರಂಗ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಬಾದರದಿನ್ನಿ ಅವರು ನಮ್ಮ ಸಂಸ್ಥೆಯಲ್ಲೂ ಅನೇಕ ವರ್ಷಗಳ ಕಾಲ ನೂರಾರು ಪ್ರಶಿಕ್ಷಣಾರ್ಥಿಗಳಿಗೆ ರಂಗಕಲೆ ಹೇಳಿಕೊಟ್ಟಿದ್ದಾರೆ. ಅವರ ಬಸವೇಶ್ವರ ನಾಟಕ ಮುಂಬಯಿ ಸೇರಿ ಹೊರ ರಾಜ್ಯಗಳಲ್ಲಿ ಪ್ರದರ್ಶನಗೊಂಡಿದೆ. ಅವರು ಅನೇಕ ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಸಿನಿಮಾಗಳಲ್ಲೂ ನಟಿಸಿ ಖ್ಯಾತಿ ಗಳಿಸಿದ್ದರು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ ಮಾತನಾಡಿ, ನಾಟಕಗಳಲ್ಲಿ ಹೇಗೆ ಅಭಿನಯಿಸಬೇಕೆಂಬುದನ್ನು ಬಾದರದಿನ್ನಿ ಕಲಿಸುತ್ತಿದ್ದರು. ಇಂತಹ ಪ್ರಸಿದ್ಧ ಕಲಾವಿದರ ಸಾಧನೆಯನ್ನು ಇಂದಿನ ಪೀಳಿಗೆಗೆ ಪರಿಚಯಿಸಬೇಕು. ರಂಗಕಲೆ ಉತೃಷ್ಟವಾದದ್ದಾಗಿದೆ ಎಂದರು.
ರAಗ ಕಲಾವಿದರಾದ ಸಿ.ಪಿ. ಜ್ಞಾನದೇವ್, ಕೆಪಿಎಂ ಗಣೇಶಯ್ಯ, ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಉಪ ಪ್ರಾಚಾರ್ಯ ಎಚ್.ಎನ್. ಶಿವಕುಮಾರ್ ಮಾತನಾಡಿದರು. ಪ್ರಕಾಶ್ ಬಾದರದಿನ್ನಿ, ಉಪನ್ಯಾಸಕರಾದ ಹನುಮಂತರೆಡ್ಡಿ, ಕೆಎಂಎಸ್ ಕಾಲೇಜು ಪ್ರಾಚಾರ್ಯರಾದ ಮಂಜುಳಾ, ರುದ್ರೇಶ್ ಇತರರು ಇದ್ದರು.
ಚನ್ನಬಸಪ್ಪ ಮತ್ತು ಸಂಗಡಿಗರು ರಂಗ ಗೀತೆಗಳನ್ನು ಪ್ರಸ್ತುತ ಪಡಿಸಿದರು.