

ಪ್ರಮುಖ ಮುಖ್ಯಾಂಶಗಳು
ಕೂನಿಕೆರೆ ಗ್ರಾಪಂ ವ್ಯಾಪ್ತಿಯ ಎ.ವಿ. ಕೊಟ್ಟಿಗೆ ಗ್ರಾಮಕ್ಕೆ ಕೊಳವೆ ಬಾವಿಯಿಂದ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಗ್ರಾಮದಿಂದ 4 ಕಿ.ಮೀ. ದೂರದಲ್ಲಿರುವ ಎರಡು ಕೊಳವೆಬಾವಿಗಳಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ಅಂತರ್ಜಲ ಕುಸಿತದಿಂದ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಗ್ರಾಪಂ ಅಧಿಕಾರಿಗಳಿಗೆ ಸಮಸ್ಯೆ ಬಗ್ಗೆ ಹೇಳಿದರೆ ಹಾರಿಕೆ ಉತ್ತರ ನೀಡುತ್ತಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ತಾಲೂಕಿನಲ್ಲಿ ಎರಡು ಜಲಾಶಯಗಳಿದ್ದರೂ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ, ಜೀವನಾಡಿ ವಿವಿ ಸಾಗರ ಜಲಾಶಯದಲ್ಲಿ ಅಪಾರ ಪ್ರಮಾಣದ ನೀರಿದ್ದರೂ ಪ್ರಯೋಜನವಾಗುತ್ತಿಲ್ಲ. ಸಮುದ್ರಕ್ಕೆ ನೆಂಟಸ್ತನ, ಉಪ್ಪಿಗೆ ಬರ ಎನ್ನುವಂತಾಗಿದೆ ತಾಲೂಕಿನ ಜನರ ಸ್ಥಿತಿ.
ಬಹುಗ್ರಾಮ, ಜಲ ಜೀವನ್ ಮಿಷನ್ ಕುಡಿಯುವ ನೀರಿನ ಯೋಜನೆ ಕಾಮಗಾರಿಗಳು ಸಕಾಲಕ್ಕೆ ಪೂರ್ಣಗೊಳ್ಳದೆ, ಬೇಸಿಗೆ ವೇಳೆ ಎದುರಾಗುವ ಗ್ರಾಮೀಣ ಭಾಗದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.
ಸರ್ಕಾರಗಳು ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಕೋಟ್ಯಂತರ ಅನುದಾನ ನೀಡುತ್ತಿದ್ದರೂ, ಅನುಷ್ಠಾನದ ವೈಫಲ್ಯದಿಂದಾಗಿ ಗ್ರಾಮೀಣರು ಕುಡಿಯುವ ನೀರಿಗೆ ಅಲೆಯುವುದನ್ನು ತಪ್ಪಿಸಲು ಸಾಧ್ಯವಾಗಿಲ್ಲ.
ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಗಮನ ಸೆಳೆಯಲು ಸ್ಥಳೀಯ ಸಂಸ್ಥೆಗಳಲ್ಲಿ ಜನಪ್ರತಿನಿಧಿಗಳಿಲ್ಲ. ಸ್ಥಳೀಯ ಶಾಸಕರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಂಸದರು ಕ್ಷೇತ್ರದ ಕಡೆ ಅಪರೂಪಕ್ಕೆ ಬರುತ್ತಾರೆ. ನೀರಿನ ಸಮಸ್ಯೆ ಹೇಳಿದರೆ ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಾರೆ. ತಾಲೂಕಿನ ಪರಿಸ್ಥಿತಿ ಅಯೋಮಯವಾಗಿದೆ ಎಂಬುದು ಜನರ ಅಳಲಾಗಿದೆ.
2009 ರಲ್ಲಿ ಅನುಮೋದನೆಯಾಗಿ 2013ರಲ್ಲಿ ಆರಂಭವಾದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಇಲ್ಲಿಯವರೆಗೆ ಪೂರ್ಣವಾಗಿಲ್ಲ. ಜೆ.ಜಿ. ಹಳ್ಳಿ-ಐಮಂಗಲ ಹೋಬಳಿಗೆ ಯಾವುದೇ ಶಾಶ್ವತ ನೀರಾವರಿ ಸೌಲಭ್ಯ ಇಲ್ಲ.
ಜನರಿಗೆ ಸಂಜೀವಿನಿಯಾಗಬೇಕಿದ್ದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಗ್ರಹಣ ಹಿಡಿದಿದೆ. ಅನುದಾನದ ಕೊರತೆಯಿಂದ ಜಲ ಜೀವನ್ ಮಿಷನ್ ಕಾಮಗಾರಿ ಪೂರ್ಣಗೊಂಡಿಲ್ಲ. ಕೆಲವೆಡೆ ಆಮೆಗತಿಯಲ್ಲಿದೆ.
ವಿವಿ ಸಾಗರ ಜಲಾಶಯದ ನೀರಿನ ಸದ್ಬಳಕೆಗೆ ಪಕ್ಕದ ತಾಲೂಕಿನ ಜನಪ್ರತಿನಿಧಿಗಳು ತೋರಿದ ಬದ್ಧತೆ ನಮಗೆ ಮಾದರಿಯಾಗಬೇಕಿದೆ.
ಜಲಾಶಯ ನಿರ್ಮಾಣವಾಗಿ ಶತಮಾನ ಕಳೆದರೂ ತಾಲೂಕಿನ ಕಟ್ಟಕಡೆಯ ಹಳ್ಳಿಗೂ ವಿವಿ ಸಾಗರದ ನೀರು ತಲುಪಿಲ್ಲ.
ಬಹುಗ್ರಾಮ, ಜಲ ಜೀವನ್ ಮಿಷನ್ ಕುಡಿಯುವ ನೀರಿನ ಕಾಮಗಾರಿಗೆ ವೇಗ ನೀಡಿ ಕಾಲಮಿತಿಯಲ್ಲಿ ಪೂರ್ಣಗೊಳಿಸಿದರೆ ಮಾತ್ರ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ.
ಹಿರಿಯೂರು ತಾಲೂಕಿನ ದಿಂಡಾವರ, ಕರಿಯಾಲ, ಆನೆಸಿದ್ರಿ ಗ್ರಾಮಗಳಲ್ಲಿ ಸಮಸ್ಯೆ ಉಂಟಾಗಿದ್ದು, ಈಗಾಗಲೆ ಖಾಸಗಿ ಕೊಳವೆ ಬಾವಿಯಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ಎ.ವಿ. ಕೊಟ್ಟಿಗೆಯಲ್ಲಿ ಅಂತರ್ಜಲ ಕುಸಿತದಿಂದ ಸಮಸ್ಯೆಯಾಗಿದೆ. ಖಾಸಗಿ ಬೋರ್‌ವೆಲ್ ಗುರುತಿಸಿ ಶೀಘ್ರ ಸಮಸ್ಯೆ ಪರಿಹಾರಕ್ಕೆ ಕ್ರಮವಹಿಸಲಾಗುವುದು.