ಕೃಷಿ ಚಟುವಟಿಕೆಗಳಿಗೆ ಕೆರೆ ಮಣ್ಣು ಬಳಕೆಗೆ ಅವಕಾಶ ಕೊಡಿ Agricultural

Agricultural ಚಳ್ಳಕೆರೆ ತಾಲೂಕು ಕಚೇರಿಯ ಮುಂದೆ ಗುರುವಾರ ಪ್ರತಿಭಟನೆ ನಡೆಸಿದ ರೈತ ಸಂಘದ ಪದಾಧಿಕಾರಿಗಳು ರೈತರು ಕೆರೆ ಮಣ್ಣು ಹೊಲಕ್ಕೆ ಹಾಕಿಕೊಳ್ಳಲು ಅವಕಾಶ ಕೊಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
Agricultural ಚಳ್ಳಕೆರೆ ತಾಲೂಕು ಕಚೇರಿಯ ಮುಂದೆ ಗುರುವಾರ ಪ್ರತಿಭಟನೆ ನಡೆಸಿದ ರೈತ ಸಂಘದ ಪದಾಧಿಕಾರಿಗಳು ರೈತರು ಕೆರೆ ಮಣ್ಣು ಹೊಲಕ್ಕೆ ಹಾಕಿಕೊಳ್ಳಲು ಅವಕಾಶ ಕೊಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಐದಾರು ರೈತರ ಟ್ರ್ಯಾಕ್ಟರ್‌ಗಳನ್ನು ಪೊಲೀಸರ ವಶಕ್ಕೆ ಒಪ್ಪಿಸಿ ದಂಡ
  • ರೈತರ ಮೇಲೆ ಪ್ರಕರಣ ದಾಖಲು
  • ಅಧಿಕಾರಿಗಳ ವಿರುದ್ಧ ರಾಜ್ಯ ರೈತ ಸಂಘದ ಪದಾಧಿಕಾರಿಗಳ ಪ್ರತಿಭಟನೆ

ಚಳ್ಳಕೆರೆ:ಕೃಷಿ ಚಟುವಟಿಕೆಗಳಿಗೆ ಕೆರೆ ಮಣ್ಣು ಬಳಕೆ ಮಾಡಿಕೊಳ್ಳುವ ರೈತರ ಮೇಲೆ ಪ್ರಕರಣ ದಾಖಲು ಮಾಡುವ ಅಧಿಕಾರಿಗಳ ವಿರುದ್ಧ ಗುರುವಾರ ತಾಲೂಕು ಕಚೇರಿಯ ಮುಂದೆ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. Agricultural

ರಾಜ್ಯ ರೈತ ಸಂಘದ ಉಪಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಮಾತನಾಡಿ, "ಚಳ್ಳಕೆರೆ ತಾಲೂಕಿನ ಬಣಗೆರೆ ಗ್ರಾಮದ ಕೆರೆಯಲ್ಲಿ ರೈತರು ತಮ್ಮ ಜಮೀನುಗಳಿಗೆ ಕೆರೆಮಣ್ಣು ಹೊಡೆದುಕೊಳ್ಳುವಾಗ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದರು. ಐದಾರು ರೈತರ ಟ್ರ್ಯಾಕ್ಟರ್‌ಗಳನ್ನು ಪೊಲೀಸರ ವಶಕ್ಕೆ ಒಪ್ಪಿಸಿ ದಂಡ ಹಾಕಿದ್ದಾರೆ," ಎಂದು ದೂರಿದರು.

"ಕೆರೆಯಲ್ಲಿ ಹೆಚ್ಚಾಗಿ ಮಳೆ ನೀರು ನಿಲ್ಲಿಸುವ ಉದ್ದೇಶದಿಂದ ಸಣ್ಣ ನೀರಾವರಿ ಇಲಾಖೆ ಕೆರೆಯ ಹೂಳೆತ್ತಿಸುವ ಕೆಲಸ ಮಾಡಬೇಕು. ರೈತರು ಇಲಾಖೆಯಿಂದ ಅನುಮತಿ ಪಡೆದು ತಮ್ಮ ಜಮೀನಿನಲ್ಲಿ ಫಸಲು ಬೆಳೆಯಲು ಕೆರೆ ಮಣ್ಣು ಬಳಕೆ ಮಾಡಿಕೊಳ್ಳುತ್ತಾರೆ. ಇದನ್ನು ಅಕ್ರಮ ದಂಧೆ ಎಂಬಂತೆ ಸ್ಥಳೀಯ ಜನಪ್ರತಿನಿಧಿಗಳು ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ರೈತರನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ," ಎಂದರು.

"ರೈತರು ಈ ದೇಶಕ್ಕಾಗಿ ಅನ್ನ ಬೆಳೆಯಲು ಕಷ್ಟಪಡುತ್ತಾರೆ. ಸರ್ಕಾರದ ಇಲಾಖೆಗಳು ರೈತರಿಗೆ ಸಬ್ಸಿಡಿ ಹೆಸರಿನಲ್ಲಿ ಮತ್ತು ಬೆಳೆವಿಮೆ ಯೋಜನೆಯಲ್ಲಿ ಮೋಸ ಮಾಡುತ್ತಿವೆ. ಮೊದಲು ರೈತರಿಗೆ ಸ್ವಾತಂತ್ರ್ಯ ಕೊಡಿ. ಪ್ರಕೃತಿ ಜೊತೆಯಲ್ಲಿ ಮುಕ್ತವಾಗಿರಲು ರೈತರಿಗೆ ಅವಕಾಶ ಕಲ್ಪಿಸಿ," ಎಂದು ಒತ್ತಾಯಿಸಿದರು.

"ರಾಜಕೀಯ ನಾಯಕರ ಹೆಸರು ಹೇಳಿಕೊಂಡು ಅಕ್ರಮವಾಗಿ ಮರಳು ದಂಧೆ ಮಾಡುವವರು ಮತ್ತು ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕದಲ್ಲಿ ಮಣ್ಣು ಸಾಗಾಟ ಮಾಡಿ, ಹಣ ಸಂಪಾದನೆ ಮಾಡುವ ದಂಧೆಕೋರರು ಇದ್ದಾರೆ. ಅವರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು," ಎಂದು ಆಗ್ರಹಿಸಿದರು.

ತಹಸೀಲ್ದಾರ್ ರೇಹಾನ್ ಪಾಷ ಮನವಿ ಸ್ವೀಕರಿಸಿ ಮಾತನಾಡಿ, "ಕೆರೆಯಲ್ಲಿ ಹೂಳೆತ್ತಿಕೊಳ್ಳಲು ಅವಕಾಶ ಕೊಡುತ್ತೇವೆ. ಮಣ್ಣು ಸಾಗಾಟ ಮಾಡಲು ಬಳಸುವ ಟ್ರ್ಯಾಕ್ಟರ್‌ಗಳ ದಾಖಲೆಗಳ ನವೀಕರಣ ಮತ್ತು ರೈತರ ಜಮೀನಿನ ಮಾಹಿತಿ ನೀಡಿದರೆ ಸಾಕು. ಸಾರ್ವಜನಿಕರಿಂದ ಯಾವುದೇ ದೂರು ಬಂದರೂ ರೈತರ ವಿರುದ್ಧ ಕ್ರಮ ಜರುಗಿಸುವುದಿಲ್ಲ," ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಮಲ್ಲಿಕಾರ್ಜುನ, ಚಂದ್ರಶೇಖರ್, ಗಂಗಾಧರ, ಗಿಡ್ಡರೆಡ್ಡಿ, ಈರಣ್ಣ, ಮಲ್ಲಾರೆಡ್ಡಿ, ಚಂದ್ರಣ್ಣ, ರುದ್ರಮ್ಮನಹಳ್ಳಿ ತಿಪ್ಪೇಸ್ವಾಮಿ, ಡಿ.ಎಸ್. ಸುರೇಶ್, ಉಮೇಶ್, ಓಬಳೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net