ಚಳ್ಳಕೆರೆಯಲ್ಲಿ ಗರಿಗೆದರಿದ ಕೃಷಿ ಚಟುವಟಿಕೆ

ಚಳ್ಳಕೆರೆ ತಾಲೂಕಿನಲ್ಲಿ ಉತ್ತಮ ಮಳೆಯಾಗಿರುವ ಹಿನ್ನಲೆಯಲ್ಲಿ ರೈತರು ಮುಂಗಾರು ಬೇಸಾಯದಲ್ಲಿ ತೊಡಗಿರುವುದು.
ಚಳ್ಳಕೆರೆ ತಾಲೂಕಿನಲ್ಲಿ ಉತ್ತಮ ಮಳೆಯಾಗಿರುವ ಹಿನ್ನಲೆಯಲ್ಲಿ ರೈತರು ಮುಂಗಾರು ಬೇಸಾಯದಲ್ಲಿ ತೊಡಗಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಆರಂಭವಾದ ಭೂಮಿ ಉಳುಮೆ
  • ಜೂನ್ 2ನೇ ವಾರದಿಂದ ಬಿತ್ತನೆ ಶುರು
ಕೊರ‌್ಲಕುಂಟೆ ತಿಪ್ಪೇಸ್ವಾಮಿ ಚಳ್ಳಕೆರೆ
ತಾಲೂಕಿನಲ್ಲಿ ಮುಂಗಾರು ಪೂರ್ವ ಉತ್ತಮ ಮಳೆಯಾಗಿದ್ದು, ಭೂಮಿ ಉಳುಮೆಯೊಂದಿಗೆ ಕೃಷಿ ಚಟುವಟಿಕೆಗಳು ಗರಿಗೆದರಿವೆ.
ತಾಲೂಕಿನಲ್ಲಿ ಜೂನ್ ತಿಂಗಳ 2ನೇ ವಾರದಿಂದ ಮುಂಗಾರು ಬಿತ್ತನೆ ಆರಂಭವಾಗುವುದು ವಾಡಿಕೆ. ಅಧಿಕ ಸಂಖ್ಯೆಯ ರೈತರು ಮಳೆಯಾಶ್ರಿತ ಶೇಂಗಾ ಬಿತ್ತನೆ ಮಾಡುತ್ತಾರೆ. 1.20 ಲಕ್ಷ ಹೆಕ್ಟೇರ್‌ನಲ್ಲಿ ಭಿತ್ತನೆ ಕಾರ್ಯ ನಡೆಯಲಿದೆ. ಈ ಪೈಕಿ ಶೇ.70 ರಷ್ಟು ಶೇಂಗಾ ಬಿತ್ತನೆ ಮಾಡಲಾಗುತ್ತದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಮಳೆ ಕೊರತೆಯಿಂದ ಶೇಂಗಾ ಬಿತ್ತನೆ ಗಣನೀಯವಾಗಿ ಕುಂಠಿತವಾಗಿದೆ.
ಕಳೆದ ವರ್ಷ ಕೇವಲ 49 ಸಾವಿರ ಹೆಕ್ಟೇರ್‌ನಲ್ಲಿ ಮಾತ್ರ ಶೇಂಗಾ ಬಿತ್ತನೆಯಾಗಿತ್ತು. ಮಳೆ ಕೊರತೆಯಿಂದ ರೈತರು ಬೆಳೆ ನಷ್ಟ ಅನುಭವಿಸಬೇಕಾಯಿತು. ಸರ್ಕಾರದಿಂದ ಸಿಗಬೇಕಾದ ಪರಿಹಾರ, ಬೆಳೆ ವಿಮೆ ಯಾವುದೂ ರೈತರಿಗೆ ಸಿಗಲಿಲ್ಲ. ಬೆಳೆ ಕಳೆದುಕೊಂಡು ಸಾಲಗಾರರಾಗಿರುವ ರೈತರಲ್ಲಿ ಶೇಂಗಾ ಬಿತ್ತನೆಗೆ ಆಸಕ್ತಿ ಕಳೆದುಕೊಂಡಿದ್ದಾರೆ. ಶೇ.ಗಾ ಬದಲಿಗೆ ತೊಗರಿ, ಸಿರಿಧಾನ್ಯಗಳ ಕಡೆಗೆ ಒಲವು ತೋರುತ್ತಿದ್ದಾರೆ.
ಮನೆ ಮಕ್ಕಳೆಲ್ಲ ಬೇಸಾಯದಲ್ಲಿ ತೊಡಗಿ, ದನಗಳನ್ನು ಬಳಸಿ ವ್ಯವಸಾಯ ಮಾಡಿ ಉತ್ತಮ ಫಸಲು ಪಡೆಯುತ್ತಿದ್ದ ಕಾಲವೊಂದಿತ್ತು. ಗ್ರಾಮದ ದೇವರುಗಳಿಗೆ, ಎತ್ತುಗಳಿಗೆ ಪೂಜೆ ಸಲ್ಲಿಸಿ ಬೇಸಾಯ ಆರಂಭಿಸುತ್ತಿದ್ದೆವು. ಈಗ ಎತ್ತುಗಳ ಜಾಗದಲ್ಲಿ ಟ್ರ್ಯಾಕ್ಟರ್‌ಗಳಿದ್ದು, ಭೂಮಿ ಸರಿಯಾಗಿ ಹದ ಆಗುವುದಿಲ್ಲ.
ಇನ್ನು ಕಡಲೆ ಕಾಯಿ ಕೈಯಿಂದ ಸುಲಿಯದೆ, ಯಂತ್ರ ಬಳಕೆ ಮಾಡುತ್ತಿರುವುದರಿಂದ ಬೀಜ ಸರಿಯಾಗಿ ಹುಟ್ಟುತ್ತಿಲ್ಲ. ಯಂತ್ರಗಳ ಬಳಕೆಯಿಂದ ಸಾಂಪ್ರದಾಯಕ ಕೃಷಿ ಕಣ್ಮರೆಯಾಗುತ್ತಿದೆ ಎನ್ನುತ್ತಾರೆ ಹಿರಿಯರು.
ಮಳೆ ಪ್ರಮಾಣ: ಮೇ 22ರಂದು ತಾಲೂಕಿನಲ್ಲಿ ಉತ್ತಮ ಮಳೆಯಾಗಿದೆ. ಚಳ್ಳಕೆರೆ ಸುತ್ತಮುತ್ತ 47 ಮಿ.ಮೀ., ನಾಯಕನಹಟ್ಟಿ ಹೋಬಳಿ ವ್ಯಾಪ್ತಿಯಲ್ಲಿ 38ಮಿ.ಮೀ., ದೇವರ ಮರಿಕುಂಟೆ ಭಾಗದಲ್ಲಿ 32 ಮಿ.ಮೀ., ತಳಕು ಹೋಬಳಿ ವ್ಯಾಪ್ತಿಯಲ್ಲಿ 34, ಪರಶುರಾಮಪುರ ಭಾಗದಲ್ಲಿ 19 ಮಿ.ಮೀ.ಯಷ್ಟು ಮಳೆಯಾಗಿದೆ. ಆದರೆ, ವರ್ಷದ ಆರಂಭದಲ್ಲಿ ಮಾತ್ರ ಉತ್ತಮ ಮಳೆ ಕಾಣಿಸಿಕೊಳ್ಳುತ್ತದೆ. ಬಳಿಕ ಕೊರತೆಯಾಗುತ್ತದೆ. ವಾರ್ಷಿಕ 484 ಎಂ.ಎಂ. ವಾಡಿಕೆ ಮಳೆ ಬೇಕು. ಬೆಳೆ ಹೂ, ಕಾಯಿ ಕಟ್ಟುವ ಹೊತ್ತಿಗೆ ಮಳೆ ಕೊರತೆಯಿಂದ ಬೆಳೆ ಕಳೆದುಕೊಳ್ಳುವಂತಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net