ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗೆ ಹಿನ್ನಡೆ

ಚಳ್ಳಕೆರೆ ತಾಲೂಕಿನ ಕಸ್ತೂರಿ ತಿಮ್ಮನಹಳ್ಳಿ ಸಮೀಪ ರೈತರು ಮುಂಗಾರು ಬಿತ್ತನೆಗೆ ಜಮೀನಿಗೆ ಗೊಬ್ಬರ ಚೆಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿರುವುದು.
ಚಳ್ಳಕೆರೆ ತಾಲೂಕಿನ ಕಸ್ತೂರಿ ತಿಮ್ಮನಹಳ್ಳಿ ಸಮೀಪ ರೈತರು ಮುಂಗಾರು ಬಿತ್ತನೆಗೆ ಜಮೀನಿಗೆ ಗೊಬ್ಬರ ಚೆಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಆಕಾಶದತ್ತ ಮುಖ ಮಾಡಿದ ರೈತರು
  • ಕಳೆದ ವರ್ಷದಂತೆ ವರುಣನ ಮುನಿಸಿನ ಆತಂಕ
ಕೊರ‌್ಲಕುಂಟೆ ತಿಪ್ಪೇಸ್ವಾಮಿ ಚಳ್ಳಕೆರೆ
ಮುಂಗಾರು ಪೂರ್ವ ಮಳೆ ಕೊರತೆಯಿಂದ ತಾಲೂಕಿನಲ್ಲಿ ಕೃಷಿ ಚಟುವಟಿಕೆಗೆ ಇನ್ನೂ ಚಾಲನೆ ದೊರೆತಿಲ್ಲ. ಕಳೆದ ವರ್ಷ ಬೆಳೆ ಕಳೆದುಕೊಂಡಿದ್ದ ರೈತರಿಗೆ ಈ ವರ್ಷವೂ ಮಳೆ ಕೈಕೊಡುವ ಆತಂಕ ಮನೆ ಮಾಡಿದೆ.
ಮುಂಗಾರು ಶೇಂಗಾ ಬಿತ್ತನೆಗೆ ಇಷ್ಟೊತ್ತಿಗೆ ಭೂಮಿ ಹಸನು ಮಾಡಿಕೊಳ್ಳುವ ಕಾರ್ಯ ಮುಗಿಯಬೇಕಿತ್ತು. ಆದರೆ, ಹೊಲ ಉಳುಮೆಗೆ ಸಿದ್ದವಾಗಿರುವ ರೈತರು ವರುಣನಿಗಾಗಿ ಮುಗಿಲತ್ತ ನೋಡುತ್ತಿದ್ದಾರೆ.
ಎರಡು ಬಾರಿ ಮಳೆ ಕಾಣಿಸಿಕೊಂಡರೂ ಬಿರುಗಾಳಿ ಆರ್ಭಟಕ್ಕೆ ಫಸಲು ಹಾನಿಗೀಡಾಯಿತೇ ಹೊರತು, ರೈತರಿಗೆ ಯಾವುದೇ ಅನುಕೂಲ ಆಗಲಿಲ್ಲ. ಆದರೂ ಕೆಲವೇ ರೈತರು ಒಣ ಭೂಮಿಯಲ್ಲೇ ಮಾಗಿ ಉಳುಮೆಗೆ ಮುಂದಾಗಿದ್ದಾರೆ.
ಗಣನೀಯ ಇಳಿಕೆ: ತಾಲೂಕಿನಲ್ಲಿ ಒಂದು ಲಕ್ಷ ಹೆಕ್ಟೇರ್‌ನಲ್ಲಿ ನೆಲಕಡಲೆ(ಶೇಂಗಾ) ಬಿತ್ತನೆ ಮಾಡುವ ಕಾಲವೊಂದಿತ್ತು. ಆದರೆ, ಇತ್ತೀಚೆನ ವರ್ಷಗಳಲ್ಲಿ ಮಳೆಯ ವೈಪರೀತ್ಯ, ಪ್ರಕೃತಿ ವಿಕೋಪಗಳಿಂದ ರೈತರಿಗೆ ಪೂರ್ಣ ಪ್ರಮಾಣದಲ್ಲಿ ರೈತರ ಕೈಗೆ ಬೆಳೆ ದೊರೆಯುತ್ತಿಲ್ಲ. ಬೆಳೆವಿಮೆ, ಬೆಳೆ ಪರಿಹಾರಗಳೂ ಸಕಾಲಕ್ಕೆ ಸಿಗುತ್ತಿಲ್ಲ. ಇದರಿಂದ ಸಾಂಪ್ರದಾಯಕ ಮಳೆಯಾಶ್ರಿತ ನೆಲಗಡಲೆ ಫಸಲು ಬೆಳೆಯಲು ರೈತರು ಆಸಕ್ತಿ ಕಳೆದುಕೊಂಡಿದ್ದಾರೆ.
2025-26ರಲ್ಲಿ ಕೇವಲ 49 ಸಾವಿರ ಹೆಕ್ಟೇರ್‌ನಲ್ಲಿ ಮಾತ್ರ ನೆಲಕಡಲೆ ಬಿತ್ತನೆ ಮಾಡಲಾಗಿತ್ತು. ಮಳೆ ಕೊರತೆಯಿಂದ ಬೆಳೆ ಕಳೆದುಕೊಂಡ ರೈತರಿಗೆ, ಸರ್ಕಾರದಿಂದಲೂ ಯಾವುದೇ ಪರಿಹಾರ ಸಿಗಲಿಲ್ಲ. ಇದರಿಂದ ಧೈರ್ಯ ಕಳೆದುಕೊಂಡ ರೈತರು, ಮಳೆ ನಂಬಿ ಕೃಷಿ ಮಾಡಲು ಮುಂದಾಗುತ್ತಿಲ್ಲ.
ಬಿತ್ತನೆ ಪ್ರಮಾಣ: ಜೂನ್ ಎರಡನೇ ವಾರದಿಂದ ಮುಂಗಾರು ಬಿತ್ತನೆ ಆರಂಭವಾಗಲಿದೆ. ತಾಲೂಕಿನಲ್ಲಿ 65,810 ಹಿಡುವಳಿ ರೈತರಿದ್ದಾರೆ. ಸುಮಾರು 91 ಸಾವಿರ ಹೆಕ್ಟೇರ್ ಭೂಮಿಯಲ್ಲಿ ಮುಂಗಾರು ಬಿತ್ತನೆ ಗುರಿ ಇದೆ. ಇದರಲ್ಲಿ 50 ಸಾವಿರ ಹೆಕ್ಟೇರ್‌ನಲ್ಲಿ ನೆಲಕಡಲೆ, 25 ಸಾವಿರ ಹೆಕ್ಟೇರ್ ತೊಗರಿ, ಉಳಿದಂತೆ ಇತರೆ ಬೆಳೆ ಬೆಳೆಯುವ ಗುರಿ ಇದೆ.
ಮುಂಗಾರು ಫಸಲು ಕೈಗೆ ಸಿಗಲು 484 ಎಂಎಂ ವಾಡಿಕೆ ಮಳೆ ಬರಬೇಕಿದೆ. ಆದರೆ, ಮುಂಗಾರು ಆರಂಭದಲ್ಲಿ ಉತ್ತಮವಾಗಿ ಕಾಣಿಸಿಕೊಂಡು ನಂತರ ಹೂ, ಕಾಯಿ ಕಟ್ಟುವ ಹಂತದಲ್ಲಿ ಮಳೆ ಕೊರತೆ ಆಗುತ್ತದೆ. ಇದೇ ಪರಿಸ್ಥಿತಿ ಸತತ ಹತ್ತು ವರ್ಷಗಳಿಂದ ಪುನರಾವರ್ತನೆಯಾಗಿದೆ.
ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಶೇಂಗಾ ಬಿತ್ತನೆ ಗುರಿ ಇದೆ. ಬಿತ್ತನೆ ಕಾರ್ಯಕ್ಕೆ ತೊಂದರೆ ಆಗದ ರೀತಿಯಲ್ಲಿ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ 8100 ಕ್ವಿಂಟಾಲ್ ಶೇಂಗಾ, 204 ಕ್ವಿಂಟಾಲ್ ತೊಗರಿ ಬಿತ್ತನೆ ಬೀಜ ದಾಸ್ತಾನಿಗೆ ಕ್ರಮ ವಹಿಸಿದೆ. 2025-26ರಲ್ಲಿ ಬೆಳೆ ವಿಮೆ ಪಾವತಿಸಿದ್ದ 36,768 ರೈತರಿಗೆ ಈ ವಾರ ವಿಮಾ ಹಣ ಬರಲಿದೆ. ತಾಲೂಕಿನ 40 ಪಂಚಾಯಿತಿಗಳ ಪೈಕಿ 12 ಗ್ರಾಪಂಗಳು ವಿಮಾ ಸೌಲಭ್ಯದ ಅರ್ಹತೆ ಕಳೆದುಕೊಂಡಿವೆ. ಆದರೂ, ಮತ್ತೊಮ್ಮೆ ಸರ್ಕಾರಕ್ಕೆ ಸಮೀಕ್ಷೆ ವರದಿ ಸಲ್ಲಿಕೆ ಮಾಡಿದ್ದೇವೆ ಎನ್ನುತ್ತಾರೆ ಕೃಷಿ ಸಹಾಯಕ ನಿರ್ದೇಶಕ ಡಾ.ಎಸ್.ಟಿ. ರಮೇಶ್.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net