ಕನಕಾಂಬರ, ಮಲ್ಲಿಗೆ, ವಿವಿಧ ವರ್ಣದ ಸೇವಂತಿ, ಸುಗಂಧರಾಜ, ದುಂಡು ಮಲ್ಲಿಗೆ ಮೊಗ್ಗಿನ ಹಾರದಿಂದ ಉತ್ಸವ ಮೂರ್ತಿಯ ನ್ನು ಅಲಂಕರಿಸಲಾಗಿತ್ತು. ಕಹಳೆ, ನಗಾರಿ, ಉರುಮೆ, ಡೊಳ್ಳು, ತಮಟೆ ಇನ್ನಿತರ ಜನಪದ ಕಲಾತಂಡಗಳು ಮೆರುಗು ನೀಡಿದ ವು.
ಬುಡಕಟ್ಟು ಸಂಸ್ಕೃತಿಯುಳ್ಳ ಕೋಟೆನಾಡಲ್ಲಿ ಶಕ್ತಿದೇವತೆಗಳ ಆರಾಧಕರು ಅಽಕ ಸಂಖ್ಯೆಯಲ್ಲಿದೆ. ಭಕ್ತರ ಮನೆಗಳೇ ದೇವತೆಗಳ ತವರೆಂಬ ನಂಬಿಕೆ ಬೇರೂರಿದೆ. ಹೀಗಾಗಿ ನಗರಕ್ಕೆ ದೇವಿ ಕರೆತರಲು ಬೆಳಗ್ಗೆ ೬ ರಿಂದಲೇ ನೂರಾರು ಮಂದಿ ದೇಗುಲದ ಬಳಿ ಜಮಾಯಿಸಿದ್ದರು.
ದೇವಿ ಪುರ ಪ್ರವೇಶಿಸಿದ್ದೆ ತಡ ಉತ್ಸವ ಇನ್ನಷ್ಟು ಕಳೆಗಟ್ಟಿತು. ಸಂಚರಿಸಿದ ಮಾರ್ಗದಲ್ಲಿ ನೀರೆರಚಿ, ರಂಗೋಲಿ ಬಿಡಿಸಿ, ಮಾವಿನ ತೋರಣ ಕಟ್ಟಿ, ಅದ್ದೂರಿಯಾಗಿ ದೇವಿಯನ್ನು ಭಕ್ತರು ಸ್ವಾಗತಿಸಿದರು.
ಕೋಟೆ ಮಾರ್ಗ, ಚಿಕ್ಕಪೇಟೆ, ಬುರುಜನಹಟ್ಟಿ, ಸಿಹಿನೀರು ಹೊಂಡದ ಬಾಗಿಲು, ಆನೆ ಬಾಗಿಲು, ದೊಡ್ಡಪೇಟೆ, ಕರುವಿನಕಟ್ಟೆ ವೃತ್ತ ಸೇರಿ ಹಲವೆಡೆ ಸಂಚರಿಸಿತು.
ಅನೇಕ ಭಕ್ತರ ಮನೆಗಳ ಮುಂದೆ ಮಹಾಮಂಗಳಾರತಿ ನೆರವೇರಿದ ಬಳಿಕ ಪಾನಕ, ಕೋಸುಂಬರಿ, ಮಜ್ಜಿಗೆ, ಪಾಯಸ, ಪುಳಿಯೊಗರೆ, ಚಿತ್ರಾನ್ನ, ಪಲಾವ್, ಮೊಸರನ್ನ, ಕಡಲೆಕಾಳು ಹುಸುಳಿಯನ್ನು ಪ್ರಸಾದವಾಗಿ ವಿತರಿಸಲಾಯಿತು.
ಗಮನಸೆಳೆದ ಸುಂದರ ಮಂಟಪ
ಟ್ರ‍್ಯಾಕ್ಟರ್‌ನ ಹಿಂಬದಿಯಲ್ಲಿ ನಿರ್ಮಿಸಿದ್ದ ಪುಷ್ಪಾಲಂಕೃತ ಸುಂದರ ಮಂಟಪದೊಳಗೆ ದೇವಿ ಎರಡೂ ಕೈಗಳಿಂದ ಭಕ್ತರನ್ನು ಆಶೀ ರ್ವದಿಸುವ ಮಾದರಿ ನಾಡದೇವತೆ ಚಾಮುಂಡೇಶ್ವರಿ ಮಾತೆಯನ್ನೇ ಹೋಲುವಂತಿತ್ತು. ಉತ್ಸವದ ಬಳಿಕ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು.
ಮಾಳಪ್ಪನಹಟ್ಟಿಯಲ್ಲಿ ಪೂಜೆ
ನಗರದ ಭಕ್ತರಿಂದ ಪೂಜೆ ಸ್ವೀಕರಿಸಿದ ನಂತರ ದೇವಿ ಉತ್ಸವ ಮೂರ್ತಿಯನ್ನು ಮಾಳಪ್ಪನಹಟ್ಟಿಗೆ ಕರೆತರಲಾಯಿತು. ಗ್ರಾಮ ಸ್ಥರು ದೇವಿಯನ್ನು ಅದ್ದೂರಿಯಾಗಿ ಸ್ವಾಗತಿಸಿ ಮೀಸಲು ಸಮರ್ಪಿಸಿದರು.