ಏನ್ ಛಂದ ಕಾಣಸ್ತಾಳ ಚಲುವಿಯವ್ವ…

CTD-6-FAHSEN-SHOW-2-1-1
Published on

ಚಿತ್ರದುರ್ಗ: ಸಾಂಪ್ರದಾಯಿಕ ಉಡುಪು ಎಂದಾಕ್ಷಣ ಮಹಿಳೆಯರಿಗೆ ಮೊದಲಾಯ್ಕೆ ಸೀರೆಯೇ ಆಗಿರುತ್ತದೆ. ಹಬ್ಬಗಳು, ಶುಭಕಾರ್ಯಗಳು ಬಂದರೆ ಸಾಕು, ಕಪಾಟಿನಲ್ಲಿಟ್ಟ ರೇಷ್ಮೆ ಸೀರೆಗಳು ಹೊರಬರುತ್ತವೆ. ತಿಜೋರಿಯಲ್ಲಿರುವ ಆಭರಣಗಳು ಒಡತಿಯ ಅಲಂಕಾರಕ್ಕೆ ಸಜ್ಜಾಗಿ ನಿಲ್ಲುತ್ತವೆ. ಭಾನುವಾರ ಹಬ್ಬದ ದಿನವೇನೂ ಆಗಿರಲಿಲ್ಲ. ಆದರೂ ರೇಷ್ಮೆ ಸೀರೆ, ಆಭರಣಗಳೆಲ್ಲ ಕಪಾಟಿನಿಂದ ಹೊರಬಂದಿದ್ದವು. ಸುಂದರವಾಗಿ ಅಲಂಕರಿಸಿಕೊಂಡ ನಾರಿಯರೆಲ್ಲ ರೋಟರಿಭಾಲಭವನದ ಕಡೆ ಹೆಜ್ಜೆ ಹಾಕಿದ್ದರು.

ಇದಕ್ಕೆ ವೇದಿಕೆಯಾದದ್ದು ವಿಜಯವಾಣಿ -ದಿಗ್ವಿಜಯ ವಾಹಿನಿ ರೋಟರಿ ಬಾಲಭವನದಲ್ಲಿ ಆಯೋಜಿಸಿದ್ದ ಸಾಂಪ್ರದಾಯಿಕ ಉಡುಪುಗಳ ಸ್ಪರ್ಧೆ. ಈ ದಿನ ಸ್ಪರ್ಧಿಗಳ ಪಾಲಿಗೆ ಹಬ್ಬದ ದಿನದಂತೆ ಆಗಿದ್ದು ಸುಳ್ಳಲ್ಲ.

ನಿರೀಕ್ಷೆಗೂ ಮೀರಿ ಪಾಲ್ಗೊಂಡ ಸ್ಪರ್ಧಿಗಳೆಲ್ಲ ನಾನಾ ಪ್ರದೇಶ, ರಾಜ್ಯಗಳನ್ನು ಪ್ರತಿನಿಧಿಸುವ ಉಡುಗೆಗಳಲ್ಲಿ ಕಂಗೊಳಿಸಿದರು. ಅವರು ತೊಟ್ಟ ಆಭರಣಗಳು ಸ್ಪರ್ಧೆಗೆ ಮತ್ತಷ್ಟು ಕಳೆ ಕೊಟ್ಟವು. ಮಿನಿಭಾರತವೇ ಅಲ್ಲಿ ಮೈದಾಳಿ ನಿಂತಂತಿತ್ತು. ಅಯ್ಯಂಗಾರಿ, ಕೊರವಂಜಿ ಸೀರೆ, ಲಕ್ಷ್ಮೀ ಸೀರೆ, ಹುಬ್ಬಳ್ಳಿ ಶೈಲಿಯ ಕಚ್ಚೆಸೀರೆ ತೊಟ್ಟವರು ಬಿಂಕ, ವೈಯಾರದಿಂದ ರ‌್ಯಾಂಪ್ ಮೇಲೆ ಹೆಜ್ಜೆ ಹಾಕಿದರು. ಕೇರಳಿ, ಬಂಗಾಳಿ ಬ್ರೈಡ್ ಅಲಂಕಾರ, ಕೊಡಗಿನ ಸೀರೆ ಧರಿಸಿದವರ ಮಿಂಚು ವೇದಿಕೆಯಲ್ಲಿ ಹರಿಯಿತು.

ಸ್ಪರ್ಧಿಗಳು ತಾವು ಧರಿಸಿದ ಉಡುಗೆ ತೊಡುಗೆ ಹಾಗೂ ಆಭರಣಗಳ ವಿಶೇಷತೆಯನ್ನು ಹೇಳಿದರು. ತೀರ್ಪುಗಾರರ ಪ್ರಶ್ನೆಗಳಿಗೆ ಉತ್ತರಿಸಿ ಸೈ ಎನಿಸಿಕೊಂಡರು. ಸ್ಪರ್ಧೆಯ ನಂತರ ಸ್ಪರ್ಧಿಗಳೆಲ್ಲ ಒಟ್ಟಾಗಿ ಕುಣಿದು ಕುಪ್ಪಳಿಸಿದರು. ಪರಸ್ಪರ ಫೋಟೋ, ಸೆಲ್ಫಿ ತೆಗೆದುಕೊಂಡು ಸಂತಸ ಹಂಚಿಕೊಂಡರು. ನಿವೃತ್ತ ಉಪನ್ಯಾಸಕಿ ಸಿ.ಬಿ. ಶೈಲಜಾ, ನೃತ್ಯ ಕಲಾವಿದೆ ಡಾ.ನಂದಿನಿ ಶಿವಪ್ರಕಾಶ್, ವಿಜಯವಾಣಿ ಮುಖ್ಯ ಉಪಸಂಪಾದಕ ಹರ್ಷ ನ.ಪುರೋಹಿತ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು.

ಲಿಂಗ ತಾರತಮ್ಯ ತೊಲಗದ ಹೊರತು ಸೀ ಶೋಷಣೆಗಿಲ್ಲ ಮುಕ್ತಿ:

ಲಿಂಗತಾರತಮ್ಯ ನಿವಾರಣೆ ಆಗದ ಹೊರತು ಮಹಿಳೆಯರಿಗೆ ಶೋಷಣೆಯಿಂದ ಮುಕ್ತಿ ಸಿಗುವುದು ಕಷ್ಟ ಎಂದು ಜಿಪಂ ಸಿಇಒ ಡಾ.ಕೆ.ನಂದಿನಿ ದೇವಿ ಅಭಿಪ್ರಾಯಪಟ್ಟರು.

ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ - ದಿಗ್ವಿಜಯ ವಾಹಿನಿ ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ಆಯೋಜಿಸಿದ್ದ ಸಾಂಪ್ರದಾಯಿಕ ಉಡುಗೆ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಗಂಡು ಹೆಣ್ಣು ಭೇದವಿಲ್ಲದೆ ಸಮಾನ ಅವಕಾಶ ಸಿಕ್ಕಾಗ ಮಾತ್ರ ಪುರುಷರಂತೆ ಸಮಾನತೆ ಪಡೆಯಲು ಸಾಧ್ಯ. ಕೌಟುಂಬಿಕ ದೌರ್ಜನ್ಯ ಹಾಗೂ ಕೆಲಸದ ಸ್ಥಳದಲ್ಲಿ ಕಿರುಕುಳ ಇಂಥದ್ದನ್ನು ಮೆಟ್ಟಿ ನಿಲ್ಲುವ ಪ್ರವೃತ್ತಿಯನ್ನು ಮಹಿಳೆಯರು ರೂಢಿಸಿ ಕೊಳ್ಳಬೇಕು ಎಂದು ತಿಳಿಸಿದರು.

ನೀನು ಹುಡುಗಿ,ಅವನು ಹುಡುಗ ಎಂಬ ಭೇದ ತೋರದೆ ಸ್ವಾಭಿಮಾನದಿಂದ ಬದುಕುವುದನ್ನು, ಪ್ರಶ್ನಿಸದೆ ಯಾವುದನ್ನೂ ಒಪ್ಪಿಕೊಳ್ಳಬಾರದೆಂದು ಮಕ್ಕಳಿಗೆ ಹೇಳಿಕೊಡಬೇಕು. ಭಯಮುಕ್ತ ವಾತಾವರಣ ಕಲ್ಪಿಸಬೇಕು. ಶಿಕ್ಷಣ, ಸಂಸ್ಕೃತಿ, ಸಂಸ್ಕಾರ ಬೆಳೆಸಬೇಕು ಎಂದರು. ವಿಜಯವಾಣಿ ಪತ್ರಿಕೆ, ದಿಗ್ವಿಜಯವಾಹಿನಿ ಮಹಿಳಾ ದಿನಾಚರಣೆಗೆ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಆತ್ಮವಿಶ್ವಾಸ ತುಂಬುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net