

ಚಿತ್ರದುರ್ಗ: ನಗರದ ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ಐವರು ಮೃತಪಟ್ಟಿದ್ದರು. ಇದರ ಜೊತೆಗೆ ಅನೇಕ ಜನ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಮೃತರ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ.
ಕಲುಷಿತ ನೀರನ್ನು ಸೇವಿಸಿದ ಪರಿಣಾಮ ಕಣ್ಣು ಬಿಡುವ ಮುನ್ನವೇ ನವಜಾತ ಶಿಶುವೊಂದು ಭ್ರೂಣಾವಸ್ಥೆಯಲ್ಲೇ ಮೃತಪಟ್ಟಿದೆ. ಕವಾಡಿಗರಹಟ್ಟಿ ನಿವಾಸಿ ಉಷಾ(22) ಹಾಗೂ ಯುವರಾಜ್(26) ದಂಪತಿಯ ಮಗು ಜನಿಸುವ ಮುನ್ನವೇ ನಿಧನವಾಗಿದೆ.
ಜುಲೈ 31ರಂದು ಕಲುಷಿತ ನೀರು ಸೇವಿಸಿದ ಪರಿಣಾಮ ಉಷಾ ತೀವ್ರ ವಾಂತಿ ಬೇದಿಯಿಂದ ಬಳಲಿದ್ದರು. ಈ ಸಂಬಂಧ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. 8 ತಿಂಗಳ ಗರ್ಭಿಣಿ ಉಷಾರನ್ನು ಆಲ್ಟ್ರಾ ಸೌಂಡ್ ಸ್ಕ್ಯಾನಿಂಗ್ಗೆ ಒಳಪಡಿಸಿದಾಗ ಗರ್ಭದೊಳಗಿನ ಶಿಶುವಿನ ಹೃದಯ ಬಡಿತ ನಿಂತಿರುವುದನ್ನು ಸಿಬ್ಬಂದಿ ಗಮನಿಸಿದ್ದಾರೆ. ಕೂಡಲೇ ಎಚ್ಚೆತ್ತ ಸಿಬ್ಬಂದಿ ಸಿಜೇರಿಯನ್ ಮಾಡಿ ಶಿಶುವಿನ ಮೃತದೇಹವನ್ನು ತಾಯಿಯ ಗರ್ಭದಿಂದ ಹೊರತೆಗೆದಿದ್ದಾರೆ.
ಕಲುಷಿತ ನೀರಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನಗರಸಭೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ ಆರ್.ಗಿರಡ್ಡಿ, ಕಿರಿಯ ಎಂಜಿನಿಯರ್ ಎಸ್.ಆರ್.ಕಿರಣ್ ಕುಮಾರ್ ಎಂಬುವರನ್ನು ಸೇವೆಯಿಂದ ಅಮಾನತುಗೊಳಿಸಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.
ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗೆ ಆ.2ರಂದು ಸೂಚನೆ ನೀಡಿದ್ದರು.