ಶಿಕ್ಷಣದಿಂದ ಸಂಸ್ಕೃತಿಯ ಉನ್ನತಿ : ಅರವಿಂದ ಚೊಕ್ಕಾಡಿ ಹೇಳಿಕೆ

New Project (26)
Published on

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಮೊಗೇರ ಸಮುದಾಯ ಆರ್ಥಿಕವಾಗಿ ಶ್ರೀಮಂತ ಅಲ್ಲ. ಆದರೆ ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತ ಸಮುದಾಯ. ಸಂಪ್ರದಾಯಗಳೇ ಸಂಸ್ಕೃತಿಯ ಅಂತಿಮವಲ್ಲ. ಸಂಸ್ಕೃತಿಯನ್ನು ಪ್ರತಿನಿಧಿಸುವ ಕೆಲಸ ಕೆಲವು ಸಂಪ್ರದಾಯಗಳು ಮಾಡುತ್ತಿವೆ. ಯಾವುದು ಸಂಸ್ಕಾರ ಉಳ್ಳದ್ದೋ ಅದೇ ಸಂಸ್ಕೃತಿ. ಶಿಕ್ಷಣದ ಮೂಲಕವೇ ಸಂಸ್ಕೃತಿ ಬೆಳೆಯುವುದು. ಆದರೆ ಶಿಕ್ಷಣ ಆ ರೀತಿ ಇದೆಯಾ ಎಂಬುವುದು ನಮ್ಮ ಮುಂದಿರುವ ಪ್ರಶ್ನೆ ಎಂದು ಶಿಕ್ಷಣ ತಜ್ಞ ಅರವಿಂದ ಚೊಕ್ಕಾಡಿ ಹೇಳಿದರು.

ಕನ್ನಡ ಭವನದಲ್ಲಿ ನಡೆದ ಸಮಾನ ಮನಸ್ಕ ಮುಗೇರ ಸಮಾಜದವರು ಮತ್ತು ಶ್ರೀ ಬ್ರಹ್ಮ ಮುಗೇರ ದೈವಸ್ಥಾನಗಳ ಆಶ್ರಯದಲ್ಲಿ ಮುಗೇರ ಸಮಾಜದ ಸಮಗ್ರ ಅಭಿವೃದ್ಧಿ, ಏಕತೆಗಾಗಿ ನಡೆದ ಸಾಮೂಹಿಕ ವಿಶೇಷ ಪೂಜೆ ಹಾಗೂ ಮಹಾಪ್ರಸಾದದ ಭವ್ಯ ಮೆರವಣಿಗೆ ಮತ್ತು ಚಿಂತನ - ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಾಸಕ ಭರತ್ ಶೆಟ್ಟಿ ಉದ್ಘಾಟಿಸಿ ಮಾತನಾಡಿ, ಅಂಬೇಡ್ಕರ್ ಅವರ ಮೂಲ ಉದ್ದೇಶ ಇಡೀ ಸಮಾಜವನ್ನು ಮುಖ್ಯವಾಹಿನಿಗೆ ತಂದು ಶಿಕ್ಷಣ ಕೊಡಬೇಕು. ಜ್ಞಾನದ ಮೂಲಕ ವ್ಯಕ್ತಿಯನ್ನು ಮುಖ್ಯವಾಹಿನಿಗೆ ತರಲು ಅವಕಾಶವಿದೆ ಎಂದರು.

ಕೇಮಾರು ಶ್ರೀ ಈಶವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡಿದರು. ಭವ್ಯ ಮೆರವಣಿಗೆಗೆ ಶಾಸಕ ಉಮಾನಾಥ್ ಕೋಟ್ಯಾನ್ ಚಾಲನೆ ನೀಡಿದರು. ದೈವಾರಾಧನೆ ಮತ್ತು ಮೊಗೇರ ಸಮಾಜದವರಲ್ಲಿ ಆದ ಮತ್ತು ಆಗಬೇಕಾದ ಪರಿವರ್ತನೆಗಳ ಬಗ್ಗೆ ವಿಮರ್ಶೆ ನಡೆಯಿತು. ಬಳಿಕ ವಿವಿಧ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಎಸ್‌ಎಸ್‌ಎಲ್‌ಸಿ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಸಮುದಾಯದ 54 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು ಹಾಗೂ ಸಮುದಾಯದ ಶಿಕ್ಷಕರು, ಶಿಕ್ಷಕಿಯರು ಮತ್ತು ಯೋಧರು ಹಾಗೂ ರಾಷ್ಟ್ರ, ರಾಜ್ಯ ಪ್ರಶಸ್ತಿ ವಿಜೇತರನ್ನು ಗೌರವಿಸಲಾಯಿತು.

ಎಲ್ಲ ಮೊಗೇರ ದೈವಸ್ಥಾನಗಳ ಪದಾಧಿಕಾರಿಗಳು, ಸದಸ್ಯರು, ಮಹಿಳಾ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು. ಮೂಡುಬಿದಿರೆ ಉಪತಹಸೀಲ್ದಾರ್ ರಾಮ ಕೆ. ಪ್ರಸ್ತಾವನೆಗೈದು ಸ್ವಾಗತಿಸಿದರು. ಅಶೋಕ್ ಎಂ.ಕೆ ಹಾಗೂ ಶಶಿಕಲಾ ನಡಿಗುಡ್ಡೆ ಕಾರ್ಯಕ್ರಮ ನಿರೂಪಿಸಿದರು.

ಮೊಗೇರ ಸಮುದಾಯ ಅತ್ಯಂತ ಮುಗ್ಧ. ದೇವರಿಗೆ ಹತ್ತಿರವಿರುವ ಸಮುದಾಯ. ಆ ಮುಗ್ಧತೆ ಉಳಿಸಿಕೊಳ್ಳಿ. ಸಮಾಜ ಒಳಿತಾಗಬೇಕಾದರೆ ನಮ್ಮ ಮಕ್ಕಳಿಗೆ ಶಿಕ್ಷಣ ಹಾಗೂ ಸಂಸ್ಕಾರ ನೀಡಬೇಕು. ಕೇಮಾರು ಶ್ರೀ ಈಶವಿಠಲದಾಸ ಸ್ವಾಮೀಜಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net