

ಮಂಗಳೂರು : ಸುರತ್ಕಲ್ ಖಂಡಿಗೆ ನಂದಿನಿ ನದಿ ತ್ಯಾಜ್ಯದಿಂದ ಮಾಲಿನ್ಯವಾಗುತ್ತಿರುವ ಬಗ್ಗೆ ಸಾರ್ವಜನಿಕ ದೂರುಗಳ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಬುಧವಾರ ಸ್ಥಳಕ್ಕೆ ಭೇಟಿ ನೀಡಿದರು.
ನಂದಿನಿ ನದಿ ಸೇತುವೆಯಲ್ಲಿ ನಿಂತು ಪರಿಶೀಲನೆ ನಡೆಸಿದ ಅವರು ಸ್ಥಳೀಯರ ಅಹವಾಲು ಆಲಿಸಿದರು. ಕಳೆದ ಹಲವು ವರ್ಷಗಳಿಂದ ನದಿಗೆ ತ್ಯಾಜ್ಯ ಹರಿದು ಬರುತ್ತಿದೆ. ಸುರತ್ಕಲ್ ವೆಟ್ವೆಲ್ ನಿಂದಲೂ ತ್ಯಾಜ್ಯವನ್ನು ನೇರವಾಗಿ ಬಿಡಲಾಗುತ್ತಿದೆ ಎಂದು ಸಾರ್ವಜನಿಕರು ದೂರಿದರು.
ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ‘ ನದಿ ಮಾಲಿನ್ಯದಿಂದ ಸ್ಥಳೀಯರಿಗೆ ತೀವ್ರ ಸಮಸ್ಯೆ ಆಗಿದೆ. ಇದಕ್ಕೆ ಸಾರ್ವಜನಿಕರು ಹಲವು ಬಾರಿ ಸಂಬಂಧಿಸಿದವರ ಗಮನಕ್ಕೆ ತಂದಿದ್ದರೂ ಸಮಸ್ಯೆ ಪರಿಹಾರವಾಗಿಲ್ಲ ಎಂದು ಸಚಿವರಿಗೆ ತಿಳಿಸಿದರು.
ಮಹಾನಗರಪಾಲಿಕೆ ಆಯುಕ್ತರು ಹಾಗೂ ಮಾಲಿನ್ಯ ಮಂಡಳಿ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು
ನದಿಗೆ ಹರಿದು ಬರುವ ತ್ಯಾಜ್ಯವನ್ನು ತಕ್ಷಣದಿಂದಲೇ ನಿಲ್ಲಿಸಬೇಕು.ಇದಕ್ಕೆ ಕಾರಣವಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ು ಸೂಚಿಸಿದರು.
ಮಂಗಳೂರು ಮಹಾನಗರಪಾಲಿಕೆಯು ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ತಂತ್ರಜ್ಞಾನ ಬಳಸಿಕೊಂಡು ತ್ಯಾಜ್ಯ ಶುದ್ಧೀಕರಣ ಮಾಡಬೇಕು. ಶೀಘ್ರವೇ ಈ ಬಗ್ಗೆ ಸಭೆ ನಡೆಸಲಾಗುವುದು ಎಂದು ಸಚಿವರು ಸೂಚಿಸಿದರು.
ಮಾಜಿ ಸಚಿವ ಅಭಯ ಚಂದ್ರ ಜೈನ್, ಅಪರ ಜಿಲ್ಲಾಧಿಕಾರಿ ಡಾ. ಜಿ.ಸಂತೋಷ್, ಮಹಾನಗರಪಾಲಿಕೆ ಆಯುಕ್ತ ರವಿಚಂದ್ರ
ನಾಯಕ್, ಮಂಗಳೂರು ಉಪ ವಿಭಾಗಾಧಿಕಾರಿ ಹರ್ಷವರ್ಧನ್ ಉಪಸ್ಥಿತರಿದ್ದರು.