

ವಿನ್ಸೆಂಟ್ ಎಂ.ಬಿ. ಸುಂಟಿಕೊಪ್ಪ
ಎಪ್ಪತೈದರ ಇಳಿವಯಸ್ಸಿನಲ್ಲೂ ಕೃಷಿಯನ್ನೇ ನಂಬಿ ಬದುಕಿನ ಬಂಡಿ ಎಳೆಯುತ್ತಿರುವ ಹರದೂರು ಗ್ರಾಮದ ಚಿಣ್ಣಪ್ಪ ಇತರರಿಗೆ ಮಾದರಿಯಾಗಿದ್ದಾರೆ. ತಮ್ಮ 15 ಎಕರೆ ಭೂಮಿಯಲ್ಲಿ ಬೇಸಾಯ ಮಾಡುತ್ತ 55 ವರ್ಷಗಳ ಕೃಷಿ ಅನುಭವ ಹೊಂದಿದ್ದಾರೆ.
ಡ್ಯಾಮ್, ಆಧುನಿಕ ಯಂತ್ರೋಪಕರಣಗಳು, ಸಾರಿಗೆ ವ್ಯವಸ್ಥೆಗಳಿಲ್ಲದಲ್ಲೇ ಶ್ರದ್ಧೆಯಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರಾಗಿದ್ದಾರೆ. ತಮ್ಮ ಅನುಭವದ ಅವಧಿಯಲ್ಲಿ 4 ಭೀಕರ ಬರಗಾಲ ಕಂಡಿದ್ದಾರೆ. 1965-66ರಲ್ಲಿ ಬರಗಾಲದ ತೀವ್ರತೆಗೆ ಆಹಾರಕ್ಕೂ ತೊಂದರೆ ಉಂಟಾಗಿದ್ದು, ನ್ಯಾಯಬೆಲೆ ಅಂಗಡಿಗಳಿಂದ ಆಹಾರ ಪೂರೈಕೆ ಮಾಡಲಾಗುತ್ತಿತ್ತು. ಅಂತಹ ಸಂದರ್ಭದಲ್ಲೂ ಕೃಷಿ ಕೈಬಿಡದೆ ಶ್ರದ್ಧೆಯಿಂದ ನಡೆಸಿಕೊಂಡು ಬಂದವರು ಚಿಣ್ಣಪ್ಪ.
ಪ್ರೌಢಶಾಲಾ ಶಿಕ್ಷಣ ಮುಗಿಯುತ್ತಿದ್ದಂತೆ ಪಾಲಕರ ಜತೆ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡು ಅಡಕೆ, ಕರಿಮೆಣಸು, ಕಾಫಿ ಮುಖ್ಯ ಬೆಳೆಯಾಗಿ ಬೆಳೆಯುತ್ತಿದ್ದು, ಅರ್ಧ ಎಕರೆ ಭೂಮಿಯಲ್ಲಿ ಭತ್ತ ಬೆಳೆಯುತ್ತಿದ್ದಾರೆ. ಇದರಿಂದ ವಾರ್ಷಿಕ 15 ರಿಂದ 20 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ. ಕೃಷಿ ಭೂಮಿಗೆ ಬೇಕಾದ ಸಾವಯವ ಗೊಬ್ಬರವನ್ನು ಮನೆಯಲ್ಲಿಯೇ ಉತ್ಪಾದಿಸಿ ಬಳಸುತ್ತಾರೆ.
ಕೇವಲ ಸಾವಯವ ಅಥವಾ ರಾಸಾಯನಿಕ ಗೊಬ್ಬರ ಬಳಕೆಯಿಂದ ಉತ್ತಮ ಇಳುವರಿ ಸಾಧ್ಯವಿಲ್ಲ. ಎರಡೂ ಗೊಬ್ಬರವನ್ನು ಸಮ ಪ್ರಮಾಣದಲ್ಲಿ ಬೆಳೆಗಳಿಗೆ ನೀಡಬೇಕು ಎನ್ನುತ್ತಾರೆ ಚಿಣ್ಣಪ್ಪ.
ಇವರ ಕೃಷಿ ಕಾಯಕಕ್ಕೆ ಪತ್ನಿ ಕೈ ಜೋಡಿಸಿದ್ದಾರೆ. ಇವರಿಗೆ ನಾಲ್ಕು ಹೆಣ್ಣು ಮಕ್ಕಳಿದ್ದು, ಎಲ್ಲರೂ ಉನ್ನತ ವಿದ್ಯಾಭ್ಯಾಸ ಪಡೆದು ಪಟ್ಟಣದಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ.
ಗದ್ದೆ ಕೆಲಸಕ್ಕೆ ಬರಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದು, ದುಬಾರಿ ಕೂಲಿ ನೀಡಬೇಕಾಗಿದೆ. ಅಲ್ಲದೆ ಕಷ್ಟಪಟ್ಟು ಬೆಳೆದ ಬೆಳೆ ಕೆಲವೊಮ್ಮೆ ಅಕಾಲಿಕ ಮಳೆ ಅಥವಾ ಕಾಡು ಪ್ರಾಣಿಗಳ ಬಾಯಿಗೆ ತುತ್ತಾಗುತ್ತದೆ. ಇತ್ತೀಚೆಗೆ ಕಾರ್ಮಿಕರ ಕೊರತೆ ಉಂಟಾದಲ್ಲಿಂದ ಅವರ ಕೂಲಿ ದರ ಕೂಡ ದುಬಾರಿಯಾಗಿದ್ದು, ಬೇಸಾಯ ಕಷ್ಟ ಸಾಧ್ಯವಾಗುತ್ತಿದೆ ಎನ್ನುತ್ತಾರೆ.
ಹಸು, ಮೀನು ಸಾಕಣೆ
ಕೃಷಿಯ ಜತೆಗೆ ಚಿಣ್ಣಪ್ಪ ಹಸು, ಮೀನು ಸಾಕಣೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಸದ್ಯ ಎರಡು ಹಸುಗಳಿದ್ದು, ಮುಖ್ಯವಾಗಿ ಗೊಬ್ಬರಕ್ಕಾಗಿ ಹಸು ಸಾಕಣೆ ಮಾಡಲಾಗುತ್ತಿದೆ. ಮನೆ ಬಳಕೆಗೆ ಮಾತ್ರ ಹಾಲು ಬಳಸುತ್ತಾರೆ. ತೋಟಕ್ಕೆ ನೀರು ಹಾಯಿಸಲು ಕೆರೆ ಮಾಡಿದ್ದು, ಇದರಲ್ಲಿ ಮೀನು ಸಾಕುತ್ತಿದ್ದಾರೆ. ಮೀನು ಮಾರಾಟದಿಂದಲೇ ವಾರ್ಷಿಕ ಒಂದು ಲಕ್ಷ ರೂ.ವರೆಗೆ ಆದಾಯ ಇದೆ. ವಾರ್ಷಿಕ ಗುತ್ತಿಗೆ ಆಧಾರದಲ್ಲಿ ಮೀನು ಮಾರಾಟ ಮಾಡಲಾಗುತ್ತದೆ.