

ಚಿಕ್ಕಬಳ್ಳಾಪುರ:ಪ್ರಸಕ್ತ ಸಾಲಿನಲ್ಲಿ ಜಿಲ್ಲಾದ್ಯಂತ ಸರ್ಕಾರಿ ಶಾಲೆಗಳಲ್ಲಿ ತರಗತಿಗಳನ್ನು ಸಾಂಪ್ರದಾಯಿಕ, ವಿವಿಧ ಶೈಕ್ಷಣಿಕ ಚಟುವಟಿಕೆಯೊಂದಿಗೆ ಶುಕ್ರವಾರ ಪ್ರಾರಂಭಿಸಲಾಯಿತು.
ಪ್ರವೇಶ ದ್ವಾರಗಳನ್ನು ತಳಿರು ತೋರಣಗಳಿಂದ ಸಿಂಗಾರ ಮಾಡಲಾಗಿತ್ತು. ಮಕ್ಕಳಿಗೆ ಗುಲಾಬಿ ಹೂವು ನೀಡಿ, ಆರತಿ ಬೆಳಗಿ ಸ್ವಾಗತ ನೀಡಿದ್ದು ಗಮನ ಸೆಳೆಯಿತು. ವಿದ್ಯಾರ್ಥಿಗಳಿಗೆ ಸಿಹಿಯೂಟ ಉಣಬಡಿಸಲಾಯಿತು. ಒಲವಿನ ಮಾತುಗಳ ಸಂವಾದ, ಕಲಿಕೋಪಕರಣಗಳ ವಿತರಣೆ, ಶಾಲಾ ವ್ಯಾಪ್ತಿಯಲ್ಲಿ ಜಾಥಾ ಸೇರಿ ವಿವಿಧ ಚಟುವಟಿಕೆಗಳನ್ನು ಪೈಪೋಟಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಕೈಗೊಳ್ಳಲಾಯಿತು.
ಏಪ್ರಿಲ್‌ನಲ್ಲಿ ಪರೀಕ್ಷೆ ಮುಗಿದ ಬಳಿಕ ಸುದೀರ್ಘ ರಜೆ ಮಜಾ ಅನುಭವಿಸಿದ ವಿದ್ಯಾರ್ಥಿಗಳು ಮೊದಲ ದಿನ ಶಾಲೆಗೆ ಖುಷಿಯಿಂದಲೇ ಆಗಮಿಸಿದರು. ಜಿಲ್ಲೆಯಲ್ಲಿನ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಶುಕ್ರವಾರ ತರಗತಿಗಳ ಪ್ರಾರಂಭದ ಸಂಭ್ರಮೋತ್ಸವ ಆಕರ್ಷಕವಾಗಿತ್ತು. ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಶಾಲೆಯನ್ನು ತಳಿರು ತೋರಣಗಳು, ಬಲೂನ್‌ಗಳಿಂದ ಸಿಂಗರಿಸಿದ್ದರು. ಕುಶಲೋಪಚಾರದೊಂದಿಗೆ ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ಸಮವಸಗಳನ್ನು ವಿತರಿಸಲಾಯಿತು. ಮೊದಲ ದಿನ ವಿದ್ಯಾರ್ಥಿಗಳಿಗೆ ಸಿಹಿ ಊಟದಲ್ಲಿ ಕೇಸರಿಬಾತ್, ಉಪ್ಪಿಟ್ಟು, ಶಾವಿಗೆ ಪಾಯಸ ಬಡಿಸಲಾಯಿತು. ಮಕ್ಕಳೊಂದಿಗೆ ಕುಳಿತು ಎಸ್‌ಡಿಎಂಸಿ ಸದಸ್ಯರು, ಶಿಕ್ಷಕರೂ ಬಿಸಿಯೂಟ ಸವಿದರು. ಮೊದಲ ದಿನ ಶೇ.70 ಹಾಜರಾತಿ ಕಂಡು ಬಂತು.
ಸಂಭ್ರಮದಲ್ಲಿ ಭಾಗಿ
ವಾರ್ಷಿಕ ಕ್ರಿಯಾ ಯೋಜನೆಯಂತೆ ಬುಧವಾರ ಮತ್ತು ಗುರುವಾರ ಶಾಲೆಗಳಲ್ಲಿ ಸ್ವಚ್ಛತಾ ಕಾರ್ಯದೊಂದಿಗೆ ತರಗತಿಗಳ ನಿರ್ವಹಣೆಗೆ ಸಕಲ ಸಿದ್ಧತೆ ಕೈಗೊಳ್ಳಲಾಗಿತ್ತು. ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು ಸೇರಿ ಹಿರಿಯ ಅಧಿಕಾರಿಗಳು ಆಯಾ ವ್ಯಾಪ್ತಿಯಲ್ಲಿ ಶಾಲಾ ಸಂಭ್ರಮೋತ್ಸವದಲ್ಲಿ ಭಾಗಿಯಾದರು. ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದ ದಾಖಲಾತಿ, ಕ್ರಿಯಾಯೋಜನೆ, ಶಾಲಾ ಪಂಚಾಂಗ, ಶುಚಿತ್ವ ಸಾಮಗ್ರಿಗಳು, ವರ್ಗಾವಣೆ ಪತ್ರಗಳ ತಯಾರು ಸೇರಿ ಹಲವು ದಾಖಲೆ ಪರಿಶೀಲಿಸಿದರು.
ದಾಖಲಾತಿ ಆಂದೋಲನ
ಚಿಕ್ಕಬಳ್ಳಾಪುರ ತಾಲೂಕಿನ ನಂದಿ, ಅಂಗಟ್ಟ, ಗಾಂಧಿಪುರ, ಅಂಗಟ್ಟ, ಹಳೇ ಪೆರೇಸಂದ್ರ ಸೇರಿ ವಿವಿಧ ಶಾಲೆಗಳಲ್ಲಿ ದಾಖಲಾತಿ ಆಂದೋಲನ ಜಾಥಾ ಕೈಗೊಳ್ಳಲಾಯಿತು. ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ, ಕಲಿಕೋಪರಕಣಗಳ ವಿತರಣೆ ಸೇರಿ ವಿವಿಧ ಸೌಕರ್ಯಗಳೊಂದಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಹಲವು ಕಡೆ ಆಂಗ್ಲ ಮಾಧ್ಯಮ ಬೋಧನಾ ವ್ಯವಸ್ಥೆಯೂ ಇದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಪಾಲಕರು ಮಕ್ಕಳನ್ನು ಚೆನ್ನಾಗಿ ಓದಿಸಿ, ಉಜ್ವಲ ಭವಿಷ್ಯ ರೂಪಿಸಬೇಕು ಎಂದು ಸಿಆರ್‌ಪಿ ನಾರಾಯಣಸ್ವಾಮಿ ಸಲಹೆ ನೀಡಿದರು.