ಮಕ್ಕಳು ದಾರಿತಪ್ಪಲು ಪಾಲಕರೇ ಕಾರಣ

31ark1
Published on

ಅರಕಲಗೂಡು: ತಾಲೂಕಿನ ಕೊಣನೂರಿನಲ್ಲಿ ನಳಂದ ವಿದ್ಯಾಸಂಸ್ಥೆಯಿಂದ ಮಂಗಳವಾರ 20ನೇ ವರ್ಷದ ನಳಂದೋತ್ಸವ ಸಂಭ್ರಮದಿಂದ ಜರುಗಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಿಜ್ಬಾ ರಿಜ್ವನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮಕ್ಕಳಲ್ಲಿ ಏಕತಾ ಮನೋಭಾವನೆ ಬೆಳೆಸಲು ಪಾಲಕರು ಅವರಿಗೆ ಹೆಚ್ಚಿನ ಸಮಯವನ್ನು ಮೀಸಲಿಡಬೇಕು. ಈಗಿನ ಮಕ್ಕಳು ದಾರಿ ತಪ್ಪಲು ಮೊಬೈಲ್ ಬಳಕೆ ಅಷ್ಟಾಗಿ ಪರಿಣಾಮ ಬೀರುವುದಿಲ್ಲ. ಬದಲಾಗಿ ಮನೆಯಲ್ಲಿನ ಪಾಲಕರು ಪರಿಣಾಮ ಬೀರುತ್ತಾರೆ. ಪಾಲಕರಲ್ಲಿ ಮೊಬೈಲ್ ಬಳಕೆ ಹೆಚ್ಚಾಗಿದ್ದು ಮಗುವಿನ ಆಗುಹೋಗುಗಳ ಬಗ್ಗೆ ಚಿಂತಿಸುವುದಿಲ್ಲ. ಇದರಿಂದಾಗಿ ಮಕ್ಕಳ ಮೇಲೆ ಪಾಲಕರು ಹೆಚ್ಚು ಪರಿಣಾಮ ಬೀರುತ್ತಾರೆ. ಹೀಗಾಗಿ ಬದಲಾಗಬೇಕಿರುವುದು ಪಾಲಕರು ಎಂದು ತಿಳಿಸಿದರು.


ಶಾಲೆ ಅಧ್ಯಕ್ಷ ಇಮ್ರಾನ್ ಖಲೀಲ್ ಮಾತನಾಡಿ, ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಶಿಕ್ಷಣ ಕೊಡಿಸುವುದೇ ನಮ್ಮ ಉದ್ದೇಶ. ಈ ನಿಟ್ಟಿನಲ್ಲಿ ನಳಂದ ವಿದ್ಯಾಸಂಸ್ಥೆ 20 ವರ್ಷಗಳಿಂದ ಹೆಚ್ಚಿನ ಶ್ರಮ ವಹಿಸಿದೆ ಎಂದರು.


ಗ್ರಾಪಂ ಉಪಾಧ್ಯಕ್ಷೆ ಜಯಲಕ್ಷ್ಮೀ, ಬಿ.ಎಂ.ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಎಂ. ಮಹೇಶ್ ಇತರರಿದ್ದರು. ಶಾಲೆ ಮುಖ್ಯಶಿಕ್ಷಕಿ ಪವಿತ್ರಾ ಅವರಿಗೆ ಸಾವಿತ್ರಿಬಾಯಿ ಫುಲೆ ಬಿರುದು ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ನೃತ್ಯ, ಕರಾಟೆ ಪ್ರದರ್ಶನ ನಡೆದವು. ಶಾಲೆಯ ಸಿಬ್ಬಂದಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net