ದುಶ್ಚಟಗಳಿಂದ ಮಕ್ಕಳ ಬದುಕು ಹಾಳು

HUN-SEP-17-3(KOTTEGALA SCHOOL PROGRMME)
Published on

ಹುಣಸೂರು: ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರಬೇಕು ಹಾಗೂ ಅತಿಯಾದ ಮೊಬೈಲ್ ಬಳಕೆ ತ್ಯಜಿಸಿ ಎಂದು ವಕೀಲೆ ಪವಿತ್ರಾ ಕಿವಿಮಾತು ಹೇಳಿದರು.

ತಾಲೂಕಿನ ಗಾವಡಗೆರೆ ಹೋಬಳಿಯ ಹರವೆ ವಲಯ ವ್ಯಾಪ್ತಿಯ ಕೊತ್ತೇಗಾಲ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ಬುಧವಾರ ಆಯೋಜಿಸಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳು ತಮ್ಮ ದೈನಂದಿನ ಬದುಕಿನಲ್ಲಿ ಹಲವು ರೀತಿಯ ದುಶ್ಚಟಗಳಿಗೆ ದಾಸರಾಗಿ ತಮ್ಮ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಆಕರ್ಷಣೆ ಅವರನ್ನು ಮೊಬೈಲ್ ಬಳಕೆಯತ್ತ ಸೆಳೆಯುತ್ತಿದೆ. ಗ್ರಾಮೀಣ ಆಟಗಳು ಮರೆಯಾಗುತ್ತಿದ್ದು, ಮಕ್ಕಳು ಆಟವಾಡುವುದನ್ನೆ ನೋಡದಂತಾಗಿದೆ. ನಿಮ್ಮ ಶ್ರೇಯೋಭಿವೃದ್ಧಿಗಾಗಿ ನಿಮ್ಮ ಪಾಲಕರು ಬದುಕು ಸವೆಸುತ್ತಿದ್ದಾರೆ ಎನ್ನುವ ವಿಷಯದ ಅರಿವು ನಿಮಗಿರಲಿ ಎಂದರು.

ಆರೋಗ್ಯ ಇಲಾಖೆಯ ಹಿರಿಯ ನಿರೀಕ್ಷಣಾಧಿಕಾರಿ ಸಿದ್ದರಾಮೇಗೌಡ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಪೌಷ್ಟಿಕ ಆಹಾರ ಸೇವನೆ ಮಾಡಬೇಕು. ತರಕಾರಿ, ಹಣ್ಣು ಹಂಪಲುಗಳ ಸೇವನೆಗೆ ಹೆಚ್ಚು ಪ್ರಾಮುಖ್ಯ ನೀಡಿದಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಹಾಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕ ರಾಮಕೃಷ್ಣ, ಸಹ ಶಿಕ್ಷಕ ಮಹಾದೇವ್, ಕೃಷಿ ಮೇಲ್ವಿಚಾರಕ ಅಣ್ಣಪ್ಪ, ಸೇವಾ ಪ್ರತಿನಿಧಿ ಮಂಜುಳಾ, ಸೇರಿದಂತೆ ಶಾಲೆಯ ಸಹ ಶಿಕ್ಷಕರು ವಿದ್ಯಾರ್ಥಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net