

ಸೋಮವಾರಪೇಟೆ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ಮಕ್ಕಳಲ್ಲಿ ಸಾಹಿತ್ಯಾಸಕ್ತಿಯನ್ನು ಮೂಡಿಸಿ ಓದುವ ಅಭಿರುಚಿಯನ್ನು ಬೆಳೆಸುವ ಪ್ರಮುಖ ಗುರಿ ಹೊಂದಿರುವ ‘ಮಕ್ಕಳ ಸಾಹಿತ್ಯ ಸಂಭ್ರಮ’ ಕಾರ್ಯಕ್ರಮ ಮಾ.4ರಂದು ಚನ್ನಬಸಪ್ಪ ಸಭಾಂಗಣದಲ್ಲಿ ಬೆಳಗ್ಗೆ 10.30 ಉದ್ಘಾಟನೆಗೊಳ್ಳಲಿದೆ.
ತಾಲೂಕಿನ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ 6ರಿಂದ 9ನೇ ತರಗತಿಯ 100 ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಲಿದ್ದಾರೆ.
ಮೂರು ದಿನಗಳ ಕಾಲ ವಸತಿರಹಿತವಾಗಿ ನಡೆಯಲಿರುವ ಈ ಶಿಬಿರಗಳಲ್ಲಿ ವಿವಿಧ ಚಟುವಟಿಕೆ ಮೂಲಕ ಕಥೆ, ಕವಿತೆ, ನಾಟಕಗಳನ್ನು ವಾಚನ ಮಾಡಲು. ಬರೆಯಲು ಪ್ರೇರೇಪಿಸಲಾಗುತ್ತದೆ. ಮಕ್ಕಳು ತಮ್ಮ ಅನುಭವಗಳು, ಕನಸುಗಳು, ಕಲ್ಪನೆಗಳನ್ನು ಬರಹ, ಚಿತ್ರ, ನಾಟಕ ರೂಪಗಳಲ್ಲಿ ಅಭಿವ್ಯಕ್ತಗೊಳಿಸುವ ಅವಕಾಶ ನೀಡಲಾಗುತ್ತದೆ ಎಂದು ಕಾರ್ಯಕ್ರಮದ ಜಿಲ್ಲಾ ಸಂಚಾಲಕಿ ಪಿ.ಸುಮನ್ ಮ್ಯಾಥ್ಯೂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಶಿಬಿರಗಳಲ್ಲಿ ಭಾಗವಹಿಸಿದ ಮಕ್ಕಳು ಸೃಷ್ಟಿಸಿದ ಕಥೆ, ಕವಿತೆ, ನಾಟಕ. ಚಿತ್ರ ಇತ್ಯಾದಿಗಳನ್ನು ಶಿಬಿರದ ಕೊನೆಯ ದಿವಸ ಪದರ್ಶಿಸಲಾಗುತ್ತದೆ. ಈ ಮೂಲಕ ಸಾರ್ವಜನಿಕರ ಗಮನವನ್ನು ಮಕ್ಕಳ ಸೃಜನಶೀಲತೆ, ಮಕ್ಕಳ ಸಾಹಿತ್ಯ, ಗ್ರಂಥಾಲಯಗಳೆಡೆಗೆ ಸೆಳೆಯಲು ಪ್ರಯತ್ನಿಸಲಾಗುವುದು.
ಹೀಗೆ ಪ್ರದರ್ಶನಗೊಂಡ ಮಕ್ಕಳ ಸಾಹಿತ್ಯವನ್ನು ತಜ್ಞರ ಸಮಿತಿಯೊಂದು ಆಯ್ಕೆ ಮಾಡಿ, ಓರಣಗೊಳಿಸಿ ಮುದ್ರಣಕ್ಕೆ ಅಣಿಗೊಳಿಸುವುದು ಮತ್ತು ಆಯ್ದ ಕೆಲವನ್ನು ಮುದ್ರಿಸಿ ಗ್ರಂಥಾಲಯಗಳಲ್ಲಿ ಇರಿಸಲಾಗುವುದು. ಇವೆಲ್ಲವುಗಳನ್ನು ಆಯಾ ಪಂಚಾಯಿತಿಗಳ ಗ್ರಂಥಾಲಯಗಳಲ್ಲಿ ಪ್ರದರ್ಶಿಸಲಾಗುವುದು ಎಂದು ತಿಳಿಸಿದ್ದಾರೆ.