

ಗಂಡಸಿ: ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಬೇಕು ಎಂದು ಬ್ಯಾಂಕ್ ಆಫ್ ಬರೋಡಾ ಚಿಂದೆನಹಳ್ಳಿ ಗಡಿ ಶಾಖೆ ವ್ಯವಸ್ಥಾಪಕ ರಾಜೇಶ್ ಶೇಖ್ ಹೇಳಿದರು.
ಬ್ಯಾಂಕ್ ಆಫ್ ಬರೋಡಾ 117ನೇ ವಾರ್ಷಿಕೋತ್ಸವದ ಅಂಗವಾಗಿ ಚಿಂದೆನಹಳ್ಳಿ ಗಡಿ ಕರ್ನಾಟಕ ಪಬ್ಲಿಕ್ ಶಾಲೆಗೆ ಬ್ಯಾಂಕ್ ವತಿಯಿಂದ ಉಚಿತವಾಗಿ 17 ಸಾವಿರ ರೂ. ವೆಚ್ಚದ ಧ್ವನಿವರ್ಧಕ ಕೊಡುಗೆ ನೀಡಿ ಮಾತನಾಡಿದ ಅವರು, ಪ್ರತಿ ವರ್ಷ ಬ್ಯಾಂಕ್ ವಾರ್ಷಿಕೋತ್ಸವದ ಅಂಗವಾಗಿ ತಮ್ಮ ಕಾರ್ಯ ವ್ಯಾಪ್ತಿಯ ಶಾಲೆಗಳಿಗೆ ಅಗತ್ಯವಿರುವ ಸಾಮಗ್ರಿಗಳನ್ನು ಉಚಿತವಾಗಿ ಕೊಡಲಾಗುತ್ತಿದೆ. ಸಮಾಜಮುಖಿ ಕಾರ್ಯಗಳಿಗೆ ಬ್ಯಾಂಕ್ ಸದಾ ಸ್ಪಂದಿಸುತ್ತದೆ ಎಂದರು.
ಹಿಂದೆಲ್ಲ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಯೋಜನೆಗಳಾದ ಬಿಸಿಯೂಟ, ಸಮವಸ್ತ್ರ, ಪುಸ್ತಕ, ಬೈಸಿಕಲ್ ವಿತರಣೆ ಇರಲಿಲ್ಲ. ಈಗ ಸರ್ಕಾರ ಶಿಕ್ಷಣಕ್ಕಾಗಿ ಕೋಟ್ಯಂತರ ರೂ.ವೆಚ್ಚ ಮಾಡುತ್ತಿದೆ. ಪಾಲಕರು ಲಕ್ಷಾಂತರ ರೂ.ಹಣ ನೀಡಿ ಖಾಸಗಿ ಶಾಲೆಗಳಲ್ಲಿ ಮಕ್ಕಳನ್ನು ಓದಿಸುವ ಬದಲು ಉಚಿತ ಶಿಕ್ಷಣ ನೀಡುವ ಸರ್ಕಾರಿ ಶಾಲೆಗಳಿಗೆ ದಾಖಲಿಸಿ ಎಂದು ಸಲಹೆ ನೀಡಿದರು.
ಕರ್ನಾಟಕ ಪಬ್ಲಿಕ್ ಶಾಲೆ ಪ್ರಾಂಶುಪಾಲ ಕೆ.ಎಸ್.ಲಕ್ಕಪ್ಪಗೌಡ, ಉಪನ್ಯಾಸಕರಾದ ಲಿಂಗದೇವರು, ಜಗದೀಶ್, ಬ್ಯಾಂಕ್ ಸಿಬ್ಬಂದಿ ಶರತ್, ಉದಯ್, ದೀಕ್ಷಿತಾ, ಶಶಿಕಲಾ, ಸುಶೀಲಾ, ಭವ್ಯಾ, ಜಯಮ್ಮ. ಶಿಕ್ಷಕರಾದ ಎಂ.ಡಿ.ಚಂದ್ರೇಗೌಡ, ಬಿ.ಗೀತಾ, ಎಂ.ಸಿ.ದೀಪಾ, ಬಿ.ಕೆ.ಲಾವಣ್ಯ, ಟಿ.ಕೆ.ಶೈಲಾ, ಬಸಂತಕುಮಾರ್, ಸುಮಿತ್ರಾ ಬಾಯಿ, ಕೆ.ಎಂ.ಆಶಾ, ವಿ.ರಾಜೇಶ್ವರಿ, ಎಸ್.ಕೆ.ಶೈಲಾ, ಕೆ.ರೂಪಾ, ರಿಹಾನ್ ಹಾಜರಿದ್ದರು.