ಗಮನ ಸೆಳೆದ ಮಕ್ಕಳ ಕಲಿಕೋತ್ಸವ, ವಸ್ತುಪ್ರದರ್ಶನ

ಗಮನ ಸೆಳೆದ ಮಕ್ಕಳ ಕಲಿಕೋತ್ಸವ, ವಸ್ತುಪ್ರದರ್ಶನ
Published on

ಅರಕಲಗೂಡು: ಪಟ್ಟಣದ ಶಿಕ್ಷಕರ ಭವನದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರೌಢಶಾಲಾ ವೃತ್ತಿ ಶಿಕ್ಷಣ ಮಕ್ಕಳ ಕಲಿಕೋತ್ಸವ ಹಾಗೂ ವಸ್ತುಪ್ರದರ್ಶನ ಗಮನ ಸೆಳೆಯಿತು.

ಜಿಲ್ಲೆಯ 75 ಪ್ರೌಢಶಾಲೆಗಳ ವಿದ್ಯಾರ್ಥಿಗಳು ವಿವಿಧ ಮಾದರಿಗಳನ್ನು ಸಿದ್ಧಪಡಿಸಿ ಪ್ರದರ್ಶನಕ್ಕಿಟ್ಟಿದ್ದರು. ಬಗೆಬಗೆಯ ತರಕಾರಿ ಬೆಳೆಗಳು, ಸಸ್ಯಗಳು, ಬೇಸಾಯಕ್ಕೆ ಬಳಸುವ ಸಲಕರಣೆಗಳು, ಏಕದಳ, ದ್ವಿದಳ ಧಾನ್ಯಗಳು, ಅಂಜೂರ, ಬಾದಾಮಿ ಸೇರಿದಂತೆ ಪೌಷ್ಟಿಕಾಂಶಯುಕ್ತ ಹಣ್ಣುಗಳು ಇದ್ದವು. ಬೇಲೂರು ತಾಲೂಕು ತೊಳಲು ವೈಡಿಎನ್‌ಎಂ ಪ್ರೌಢಶಾಲೆ ವಿದ್ಯಾರ್ಥಿಗಳು ಪ್ರದರ್ಶನಕ್ಕಿಟ್ಟಿದ್ದ ಎರೆಹುಳು ಗೊಬ್ಬರ ತಯಾರಿಕೆ, ಅಜೋಲ ಜೀವಾಮೃತ ಹಾಗೂ ಮಲ್ಲಿಪಟ್ಟಣ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ತಯಾರಿಸಿದ್ದ ಕೋಳಿ ಮನೆಯಲ್ಲಿ ಕೋಳಿಗಳು ಮೇವು ತಿಂದು ಹಾಕಿದ ಕಸ ಮೀನುಗಳಿಗೆ ಆಹಾರವಾಗಿ ಮೀನಿನ ತ್ಯಾಜ್ಯ ಖನಿಜಾಂಶ, ತೋಟದ ಬೆಳೆಗಳಿಗೆ ಹಾಗೂ ಸೊಪ್ಪು, ರೇಷ್ಮೆ ಬೆಳೆಗೆ ಗೊಬ್ಬರವಾಗಿ ಹಸಿರೆಲೆ ಹಸುಗಳಿಗೆ ಮೇವಾಗಿ ನಾನಾ ರೀತಿ ಆರ್ಥಿಕವಾಗಿ ಲಾಭವಾಗುವ ಮಾದರಿ ವಿಶೇಷವಾಗಿತ್ತು.

ವೃತ್ತಿ ಶಿಕ್ಷಣಕ್ಕೆ ಸಂಬಂಧಿಸಿದ ವಿವಿಧ ಕರಕುಶಲ ವಸ್ತುಗಳ ಪ್ರದರ್ಶನ ಮೇಳದ ಆಕರ್ಷಣೆ ಹೆಚ್ಚಿಸಿತು. ಹೊಲಿಗೆ ಯಂತ್ರ ತಯಾರಿಕೆ, ವಿಧ ವಿಧವಾದ ಉಲ್ಲನ್ ಬಟ್ಟೆಗಳು, ಉಡುಪುಗಳು, ಮನೆಬಳಕೆ ವಸ್ತುಗಳು, ಬಣ್ಣದ ಅಲಂಕಾರಿಕ ವಸ್ತುಗಳು, ಹೂವು ಕುಂಡಗಳು ನೋಡುಗರ ಕಣ್ಣರಳಿಸಿದವು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬಿಇಒ ನಾರಾಯಣ್ ಮಾತನಾಡಿ, ಅಕ್ಷರ ಜ್ಞಾನದ ಜತೆಗೆ ವೃತ್ತಿ ಶಿಕ್ಷಣದ ಅರಿವು ಮೂಡಿಸಲು ಪ್ರದರ್ಶನ ಆಯೋಜಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net